ಮಂಗಳೂರು : ಪ್ಲಾಸ್ಟಿಕ್ ಲೋಟ, ತಟ್ಟೆ, ಚಮಚ, ಊಟದ ಮೇಲಿನ ಮೇಲೆ ಹರಡುವ ಹಾಳೆ, ಭಿತ್ತಿಪತ್ರ, ಪ್ಲಾಸ್ಟಿಕ್ ತೋರಣ, ಫ್ಲೆಕ್ಸ್, ಪ್ಲಾಸ್ಟಿಕ್ ಬಾವುಟ ಹಾಗೂ ಥರ್ಮೊಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋ ಬೀಡ್ಸ್‌ನಿಂದ ತಯಾರಾದಂತಹ ವಸ್ತುಗಳ ಬಳಕೆ ಇನ್ನು ಮುಂದೆ ರಾಜ್ಯಾದ್ಯಂತ ನಿಷೇಧಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅಂಗಡಿ ಮಾಲೀಕ, ಚಿಲ್ಲರೆ ವ್ಯಾಪಾರಿ, ಮಾರಾಟಗಾರ, ಸಗಟು ಮಾರಾಟಗಾರ ನಿಷೇಧಿತ ಉತ್ಪನ್ನ ಮಾರಾಟ ಮಾಡುವಂತಿಲ್ಲ. ನಿಯಮ ಉಲ್ಲಂಗಿಸುವವರ ವಿರುದ್ಧ ಪರಿಸರ ಸಂರಕ್ಷಣೆ ಕಾಯ್ದೆ 1986 ಸೆಕ್ಷನ್ 19ರ ಅನ್ವಯ ಪ್ರಕರಣ ದಾಖಲಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೊರಡಿಸಲಾಗುತ್ತದೆ ಮತ್ತು . 5 ಸಾವಿರ ರೂ.ನಿಂದ 1 ಲಕ್ಷ ರೂ.ವರೆಗೆ ದಂಡ ವಿಧಿಸಲು ಹಾಗೂ 3ರಿಂದ 6 ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳ ಕವರ್, ನರ್ಸರಿಗಳಲ್ಲಿ ಬಳಕೆ ಮಾಡುವ ಪ್ಲಾಸ್ಟಿಕ್ ಚೀಲ ಮತ್ತು ಹಾಳೆಗಳು, ಪ್ಯಾಕಿಂಗ್ ಸಂದರ್ಭದಲ್ಲಿ ಸೀಲ್ ಮಾಡಲು ಉಪಯೋಗಿಸುವ ಪ್ಲಾಸ್ಟಿಕ್ ಬ್ಯಾಗ್‌ಗಳಿಗೆ ನಿಷೇಧದಿಂದ ವಿನಾಯಿತಿ ನೀಡಲಾಗಿದೆ.
ವಿಶೇಷ ಆರ್ಥಿಕ ವಲಯ ಮತ್ತು ರಫ್ತು ಉದ್ದೇಶಿತ ಘಟಕಗಳಲ್ಲಿ ರಫ್ತು ಉದ್ದೇಶಕ್ಕೆ ಪ್ರತ್ಯೇಕವಾಗಿ ಬೇಡಿಕೆಗೆ ತಕ್ಕಂತೆ ಪ್ಲಾಸ್ಟಿಕ್ ಉತ್ಪಾದಿಸಲು ಅವಕಾಶವಿದೆ. ಆದರೆ,ಇದು ರಫ್ತಿಗಷ್ಟೇ ಸೀಮಿತವಾಗಿದ್ದು, ರಾಜ್ಯದಲ್ಲಿ ಮಾರಾಟ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ.
ಸಾರ್ವಜನಿಕರು ಪ್ಲಾಸ್ಟಿಕ್ ಕವರ್ ಬದಲಿಗೆ ಪೇಪರ್ ಬ್ಯಾಗ್ ಅಥವಾ ಬಟ್ಟೆ ಚೀಲ ಬಳಕೆ ಮಾಡಬೇಕಾಗುತ್ತದೆ. ದಿನಸಿ, ತರಕಾರಿ, ತಿಂಡಿ ತರಲು ಹೋಗುವಾಗ ಕೈಯಲ್ಲಿ ಬಟ್ಟೆ ಚೀಲ ಅಥವಾ ಪೇಪರ್ ಬ್ಯಾಗ್ ಹಿಡಿದು ಹೋಗಬೇಕಾಗುತ್ತದೆ.
ಪ್ಲಾಸ್ಟಿಕ್ ಎಂದರೆ ಪಾಲಿ ಪ್ರೊಪೈಲಿನ್, ನಾನ್-ಓವನ್ ಪಾಲಿ ಪ್ರೊಪೈಲಿನ್, ಪಾಲಿ ಎಥಲಿನ್, ಪಾಲಿ ವಿನೈಲ್ ಕ್ಲೋರೈಡ್, ಹೈ ಮತ್ತು ಲೋ ಡೆನ್ಸಿಟಿ ಪಾಲಿ ಇತಲಿನ್, ಥರ್ಮೊಕೋಲ್ ಎಂದು ಕರೆಯಲ್ಪಡುವ ಪಾಲಿ ಸ್ಟಿರಿನ್, ಪಾಲಿ ಆಮೈಡ್ಸ್, ಪಾಲಿ ಟೆರೆಪಲೆಲ್, ಪಾಲಿ ಮೀಥೈಲ್ ಮೆಥಕ್ರಿಲೇಟ್, ಪ್ಲಾಸ್ಟಿಕ್ ಮೈಕ್ರೋ ಬೀಡ್ಸ್‌ಗಳಿಂದ ತಯಾರಿಸಿದ ವಸ್ತುಗಳು.
