ಕನ್ನಡ ವಾರ್ತೆಗಳು

ಹಿಂದೂ ಜಾತ್ರೆಯ ಆಮಂತ್ರಣ ಪತ್ರಿಕೆಯಲ್ಲಿ ವಿವಾದ ಸೃಷ್ಟಿಸಿದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಹೆಸರು

Pinterest LinkedIn Tumblr

Putturu_Invitation_Prob_1

ಮಂಗಳೂರು / ಪುತ್ತೂರು, ಮಾ.12: ಐತಿಹಾಸಿಕ ಕ್ಷೇತ್ರವಾದ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಸಮಾರಂಭದ ಆಮಂತ್ರಣ ಪತ್ರಿಕೆಯಲ್ಲಿ ದ.ಕ.ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂರ ಹೆಸರನ್ನು ಜಾತ್ರಾ ಆಹ್ವಾನಿತರೊಂದಿಗೆ ಸೇರಿಸಿರುವುದು ಗೊಂದಲ ಸೃಷ್ಟಿಸಿದೆ. ಆಮಂತ್ರಣ ಪತ್ರಿಕೆಯಲ್ಲಿ ಮುಸ್ಲಿಂ ಅಧಿಕಾರಿಯೋರ್ವರ ಹೆಸರು ಇರುವುದು ಮತ್ತು ಮುಸ್ಲಿಂ ಅಧಿಕಾರಿ ಜಾತ್ರೋತ್ಸವಕ್ಕೆ ಭಕ್ತರನ್ನು ಆಹ್ವಾನಿಸುತ್ತಿರುವುದು ವಿವಾದವಾಗಿ ಮಾರ್ಪಟ್ಟಿದೆ.

ಜಾತ್ರಾ ಆಮಂತ್ರಣ ಪತ್ರಿಕೆಯಲ್ಲಿ ಜಾತ್ರೆಗೆ ಅಹ್ವಾನಿಸುವವರಾಗಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ರಾಜ್ಯ ಆಯುಕ್ತ ಆರ್.ಆರ್. ದತ್ತು, ಆಡಳಿತಾಧಿಕಾರಿ ಜಗದೀಶ್ ಎಸ್. ಮತ್ತು ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಎಂ.ಎಚ್. ರವೀಂದ್ರರೊಂದಿಗೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂರ ಹೆಸರನ್ನೂ ಸೇರಿಸಿ ಮುದ್ರಿಸಲಾಗಿದ್ದು, ಈ ಆಮಂತ್ರಣ ಪತ್ರಿಕೆಯನ್ನು ಭಕ್ತರಿಗೆ ವಿತರಿಸಲಾಗುತ್ತಿದೆ. ಇದನ್ನು ನೆಪವಾಗಿಟ್ಟು ಪುತ್ತೂರಿನ ಸಂಘ ಪರಿವಾರ ಸಂಘಟನೆಗಳು ಗುಲ್ಲೆಬ್ಬಿಸುತ್ತಿದ್ದು, ಪತ್ರಿಕಾ ಹೇಳಿಕೆ ನೀಡುವ ಮೂಲಕ ಗೊಂದಲ ಸೃಷ್ಟಿ ಮಾಡುತ್ತಿದೆ.

Dc_Ibrahim_Pics

ದೇವಳದ ಪ್ರಭಾರ ಕಾರ್ಯನಿರ್ವಹಣಾಧಿಕಾರಿಯಿಂದ ಗೊಂದಲ ಸೃಷ್ಟಿ

ಎಂಡೋಮೆಂಟ್ ಕಾನೂನು ಸೆಕ್ಷನ್ 7ರಂತೆ ಹಿಂದೂ ದೇವಳಗಳ ಉತ್ಸವಗಳಲ್ಲಿ ಹಿಂದೂಯೇತರ ಅಧಿಕಾರಿಗಳಾಗಲೀ, ಇನ್ನಿತರ ವ್ಯಕ್ತಿಗಳಾಗಲೀ ಆಡಳಿತ ನಡೆಸುವಂತಿಲ್ಲ ಎನ್ನಲಾಗಿದ್ದು, ಹಿಂದೂಯೇತರರು ಅಧಿಕಾರಿಗಳಾಗಿದ್ದಲ್ಲಿ ದೇವಳಕ್ಕೆ ಅವರ ಅಧೀನದ ಹಿಂದೂ ಅಧಿಕಾರಿಗಳನ್ನು ನೇಮಿಸಬೇಕು ಎಂದು ಉಲ್ಲೇಖವಿದೆ. ಆದರೆ ಪುತ್ತೂರು ಮಹಾಲಿಂಗೇಶ್ವರ ದೇವಳದ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಜಿಲ್ಲಾಧಿಕಾರಿಗಳ ಹೆಸರನ್ನು ಆಹ್ವಾನಿತರೊಂದಿಗೆ ಮುದ್ರಿಸುವ ಮೂಲಕ ಗೊಂದಲ ಸೃಷ್ಟಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಜಿಲ್ಲಾಧಿಕಾರಿಗಳ ಗಮನಕ್ಕೆ ಬಾರದೆ ಈ ಆಮಂತ್ರಣ ಪತ್ರಿಕೆ ಮುದ್ರಣಗೊಂಡಿರುವುದಾಗಿ ಸ್ಥಳೀಯರು ಆರೋಪಿಸುತ್ತಿದ್ದು, ಎ.ಬಿ. ಇಬ್ರಾಹೀಂರ ಹೆಸರಿನ ಬದಲಿಗೆ ಜಿಲ್ಲಾಧಿಕಾರಿಗಳು ಎಂದು ಮುದ್ರಿಸಿದ್ದಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶವಾಗುತ್ತಿರಲಿಲ್ಲ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ. ಇಬ್ರಾಹೀಂ ಎಂಬ ಹೆಸರು ಸಂಘ ಪರಿವಾರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಇದರಿಂದಾಗಿ ಹಿಂದೂ ಧಾರ್ಮಿಕ ಬಾವನೆಗೆ ಧಕ್ಕೆಯಾಗಿದೆ ಎಂದು ವಿಶ್ವಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ಆರೋಪಿಸಿದ್ದು, ಜಿಲ್ಲಾಡಳಿತ ಮತ್ತು ಸರಕಾರದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

__ಧಾರ್ಮಿಕ ದತ್ತಿ ಕಾನೂನಿನಂತೆ ಹಿಂದೂಯೇತರ ಅಧಿಕಾರಿಗಳನ್ನು ಹಿಂದೂ ದೇವಳದ ಆಡಳಿತಕ್ಕೆ ಬಳಸುವಂತಿಲ್ಲ. ಪುತ್ತೂರು ಜಾತ್ರಾ ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ಬಾರದೆ ಅವರ ಹೆಸರನ್ನು ಬಳಸಲಾಗಿದೆ. ಹೆಸರಿನ ಬದಲು ದ.ಕ. ಜಿಲ್ಲಾಧಿಕಾರಿಗಳು ಎಂದು ಮುದ್ರಿಸಿದ್ದಲ್ಲಿ ಯಾವುದೇ ಗೊಂದಲಗಳಾಗುತ್ತಿರಲಿಲ್ಲ. ದೇವಳದ ಕಾರ್ಯನಿರ್ವಹಣಾಧಿಕಾರಿಗಳು ಮಾಡಿರುವ ಪ್ರಮಾದ ಈ ಗೊಂದಲಕ್ಕೆ ಕಾರಣವಾಗಿದೆ. ಧರ್ಮಗಳ ನಡುವೆ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಕಾರ್ಯನಿರ್ವಹಣಾಧಿಕಾರಿ ಮಾಡಿರುವ ಪ್ರಮಾದಕ್ಕೆ ಜಿಲ್ಲಾಧಿಕಾರಿಗಳನ್ನು ಮಾದ್ಯಮಗಳ ಮೂಲಕ ಅಪಮಾನ ಮಾಡುವುದು ಸರಿಯಲ್ಲ. ಜಿಲ್ಲಾಧಿಕಾರಿಗಳು ಸ್ವ ಆಸಕ್ತಿಯಿಂದ ತಮ್ಮ ಹೆಸರು ಹಾಕಿಸಿಕೊಂಡಿಲ್ಲ ಎಂದು ಎಲ್ಲರೂ ಅರ್ಥಮಾಡಿಕೊಳ್ಳಬೇಕಾಗಿದೆ. ಧಾರ್ಮಿಕ ದತ್ತಿ ಕಾನೂನಿನಂತೆ ಕ್ರಮ ಕೈಗೊಂಡು ಗೊಂದಲ ನಿವಾರಿಸಬೇಕು ಎಂದು ಕಾವು ಪಂಚಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಮಾಜಿ ಆಡಳಿತ ಮೊಕ್ತೇಸರ ಕಾವು ಹೇಮನಾಥ ಶೆಟ್ಟಿ ತಿಳಿಸಿದ್ದಾರೆ.

__ಎಂಡೋಮೆಂಟ್ ಕಾನೂನಿನಲ್ಲಿ ಹಿಂದೂಯೇತರ ಅಧಿಕಾರಿಗಳು ದೇವಳದಲ್ಲಿ ನಿರ್ಧಾರ ಕೈಗೊಳ್ಳುವಂತಿಲ್ಲ. ಪುತ್ತೂರು ಜಾತ್ರೆಯ ಆಮಂತ್ರಣ ಪತ್ರಿಕೆ ಮುದ್ರಣದಲ್ಲಿ ಜಿಲ್ಲಾಧಿಕಾರಿಯವರ ತಪ್ಪಿಲ್ಲ ಮತ್ತು ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿಯರದ್ದೂ ತಪ್ಪಿಲ್ಲ. ದೇವಳದ ಕಾರ್ಯನಿರ್ವಹಣಾಧಿಕಾರಿ ತಪ್ಪು ಮಾಡಿದ್ದಾರೆ. ಈಗಾಗಲೇ ಸಹಾಯಕ ಜಿಲ್ಲಾಧಿಕಾರಿಗಳು ದೇವಳದ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುತ್ತಿದ್ದು, ಅವರ ಹೆಸರನ್ನು ಹಾಕಬಹುದಿತ್ತು. ಅಥವಾ ಜಿಲ್ಲಾಧಿಕಾರಿಗಳ ಪದನಾಮವನ್ನು ಮಾತ್ರ ಬಳಸಬಹುದಿತ್ತು. ಆದರೆ ಈ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಿ ಜನರನ್ನು ತಪ್ಪು ದಾರಿಗೆ ಎಳೆಯುವ ಬದಲು ಆಮಂತ್ರಣ ಪತ್ರಿಕೆಯನ್ನು ಬದಲಾಯಿಸಿ ಮರು ಮುದ್ರಣಗೊಳಿಸುವ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು ಎಂದು ಶ್ರೀ ಮಹಾಲಿಂಗೇಶ್ವರ ದೇವಳದ ಭಕ್ತರಲ್ಲಿ ಒಬ್ಬರಾದ ರವಿಪ್ರಸಾದ್ ಶೆಟ್ಟಿ ಬನ್ನೂರು ತಿಳಿಸಿದ್ದಾರೆ.

Write A Comment