ಕನ್ನಡ ವಾರ್ತೆಗಳು

ಭೂಗತ ಪಾತಕಿ ಬನ್ನಂಜೆ ರಾಜನ ಬಂಧನ ಹಿನ್ನೆಲೆ – ಬಿಲ್ಡರ್‌ಗಳಿಗೆ ಬರುತ್ತಿದ್ದ ಬೆದರಿಕೆ ಕರೆಗಳಿಗೆ ಕಡಿವಾಣ :ಕ್ರೆಡೈ ಮಾಜಿ ಅಧ್ಯಕ್ಷ ಪಿ.ಎಂ.ರಜಾಕ್

Pinterest LinkedIn Tumblr

 

ಮಂಗಳೂರು,ಮಾ,10: ಭೂಗತ ಪಾತಕಿ ಬನ್ನಂಜೆ ರಾಜನ ಬಂಧನದ ಬಳಿಕ ಮಂಗಳೂರಿನ ಬಿಲ್ಡರ್‌ಗಳಿಗೆ ಭೂಗತ ಪಾತಕಿಗಳಿಂದ ಬರುತ್ತಿದ್ದ ಬೆದರಿಕೆ ಕರೆಗಳು ಕಡಿಮೆಯಾಗಿದೆ. ಈ ಬೆಳವಣಿಗೆಗೆ ಪ್ರಮುಖ ಕಾರಣ ರಾಜ್ಯದ ಹಾಗೂ ಜಿಲ್ಲೆಯ ದಕ್ಷ ಪೊಲೀಸ್ ಅಧಿಕಾರಿಗಳ ಕಾರ್ಯಾಚರಣೆ.ಭೂಗತ ಪಾತಕಿಗಳ ವಲಯದಲ್ಲಿ ಪ್ರಮುಖನಾಗಿದ್ದ ಬನ್ನಂಜೆ ರಾಜನ ಬಂಧನ ಪೊಲೀಸ್ ಇಲಾಖೆಯ ಬಗ್ಗೆ ಜನರ ವಿಶ್ವಾಸವನ್ನು ಹೆಚ್ಚಿಸಿದೆ ಈ ಹಿನ್ನೆಲೆಯಲ್ಲಿ ನಗರದಲ್ಲಿ ಕಾನೂನು ಸುವ್ಯವಸ್ಥೆಗೆ ಕಾರಣರಾದ ಎಲ್ಲಾ ದಕ್ಷ ಪೊಲೀಸ್ ಅಧಿಕಾರಿಗಳಿಗೆ ಬಿಲ್ಡರ್‌ಗಳ ಪರವಾಗಿ ಕೃತಜ್ಞತೆ ಸಲ್ಲಿಸುವುದರೊಂದಿಗೆ ಅವರಿಗೆ ನೈತಿಕವಾಗಿ ಬೆಂಬಲ ನೀಡುವುದಾಗಿ ಕ್ರೆಡೈ ಸಂಘಟನೆಯ ಮಾಜಿ ಅಧ್ಯಕ್ಷ ಪಿ.ಎಂ.ರಜಾಕ್ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಕೆಲವು ವರುಷಗಳ ಹಿಂದೆ ಇಲ್ಲಿನ ಬಿಲ್ಡರ್‌ಗಳಿಗೆ ಬೆದರಿಕೆ ಕರೆಗಳು ನಿರಂತರವಾಗಿ ಬರುತ್ತಿದ್ದವು. ಆದರೆ ಭೂಗತ ಪಾತಕಿ ಬನ್ನಂಜೆ ರಾಜನ ಬಂಧನದ ಬಳಿಕ ಇತ್ತೀಚಿನ ದಿನಗಳಲ್ಲಿ ಈ ರೀತಿಯ ಬೆದರಿಕೆ ಕರೆಗಳು ಬಹುತೇಕ ಕಡಿಮೆಯಾಗಿದೆ.ಕಳೆದ ಆರು ತಿಂಗಳಿನಿಂದ ಮಂಗಳೂರಿನ ಉದ್ಯಮಿಗಳು ಭೂಗತ ಕರೆಗಳಿಂದ ಬಹುತೇಕ ಬಿಡುಗಡೆ ಹೊಂದಿದ್ದಾರೆ ಎಂದು ಹೇಳಿದರು.

ಭೂಗತ ಪಾತಕಿಗಳ ಮುಖಂಡನಾಗಿದ್ದ ಬನ್ನಂಜೆ ರಾಜನ ಬಂಧನದಲ್ಲಿ ಪ್ರಮುಖ ಪಾತ್ರವಹಿಸಿದ್ದ ಹಿರಿಯ ಪೊಲೀಸ್ ಅಧಿಕಾರಿ ಗೋಪಾಲ ಹೊಸೂರು,ಪ್ರತಾಪ್ ರೆಡ್ಡಿ ,ಹಿತೇಂದ್ರ ,ಸಿಸಿಬಿ ಪೊಲೀಸ್ ಅಧಿಕಾರಿ ವೆಂಕಟೇಶ್ ಪ್ರಸನ್ನ,ವೆಲೈಂಟೈನ್ ಡಿ ಸಿಲ್ವ ಪ್ರಸಕ್ತ ಮಂಗಳೂರು ಪೊಲೀಸ್ ಕಮೀಶನರ್ ಚಂದ್ರಶೇಖರ್ ಉತ್ತಮ ರೀತಿಯಾಗಿ ಕಾರ್ಯನಿರ್ವಹಿಸುವ ಮೂಲಕ ಭೂಗತ ಲೋಕದ ಚಟುವಟಿಕೆಗಳನ್ನು ನಿಯಂತ್ರಿಸಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಉದ್ಯಮಿಗಳು ಹಾಗೂ ಅವರ ಕುಟುಂಬದ ಸದಸ್ಯರು ಭಯದ ವಾತವರಣದಿಂದ ಮುಕ್ತರನ್ನಾಗಿ ಮಾಡಿರುವುದಕ್ಕಾಗಿ ಕೃತಜ್ಞತೆ ಸಲ್ಲಿಸುವುದಾಗಿ ಪಿ.ಎಂ.ರಜಾಕ್ ತಿಳಿಸಿದ್ದಾರೆ.

ಭೂಗತ ಲೋಕದಲ್ಲಿ ಸಕ್ರೀಯವಾಗಿದ್ದು ಉದ್ಯಮಿಗಳಿಗೆ ಕರೆ ನೀಡುತ್ತಿದ್ದ ಪಾತಕಿಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಗೆ ಉದ್ಯಮಿಗಳು ತಮ್ಮ ಬಳಿ ಇರುವ ಸಿಸಿಟಿವಿ ಫೂಟೇಜ್‌ಗಳನ್ನು ,ಮಾಹಿತಿಗಳನ್ನು ನೀಡಿ ಸಹಕಾರ ನೀಡುತ್ತಿದ್ದಾರೆ.ಭೂಗತ ಪಾತಕ ಲೋಕದ ಮುಖಂಡ ಬನ್ನಂಜೆ ರಾಜನನ್ನು ಪೊಲೀಸರು ಬಂಧಿಸಿದ್ದು;ಇತರ ಪಾತಕಿಗಳನ್ನು ಸೆರೆ ಹಿಡಿಯಲು ಪೊಲೀಸ್ ಅಧಿಕಾರಿಗಳ ತಂಡ ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದು ಪಿ.ಎಂ.ರಜಾಕ್ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕ್ರೆಡೈಯ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಉದ್ಯಮಿ ಕೆ.ಸಿ.ನಾಯ್ಕ್ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಂಗಳೂರು ನಗರದಲ್ಲಿ ಭೂಗತ ಲೋಕದ ಪಾತಕಿಗಳಿಂದ ಬರುವ ಕರೆಗಳು ಕಡಿಮೆಯಾಗಿದೆ ಎನ್ನುವುದು ಒಳ್ಳೆಯ ಬೆಳವಣೆಗೆ ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಪೊಲೀಸರ ತಂಡಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಉದ್ಯಮಿ ಲೋಕನಾಥ ಶೆಟ್ಟಿ ಉಪಸ್ಥಿತರಿದ್ದರು.

Write A Comment