ಕನ್ನಡ ವಾರ್ತೆಗಳು

20 ದಿನದೊಳಗೆ ಸಿಆರ್‌ಝಡ್ ಪ್ರದೇಶದಲ್ಲಿ ಮರಳುಗಾರಿಕೆಗೆ ಕೇಂದ್ರದಿಂದ ಅನುಮತಿ ಸಿಗುವ ವಿಶ್ವಾಸ : ಸಚಿವ ವಿನಯ ಕುಲಕರ್ಣಿ

Pinterest LinkedIn Tumblr

vinya_kumar_meet_1

ಮಂಗಳೂರು, ಮಾ. 07: ಕರಾವಳಿ ನಿಯಂತ್ರಣ ವಲಯದೊಳಗೆ (ಸಿಆರ್‌ಝಡ್) ಮರಳುಗಾರಿಕೆ ನಡೆಸಲು ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯದ ಹಸಿರು ನಿಶಾನೆಗಾಗಿ ಕಾಯಲಾಗುತ್ತಿದೆ. ಆದರೆ ಸಿಆರ್‌ಝಡ್‌ಯೇತರ ನದಿ ಪ್ರದೇಶದಲ್ಲಿ ಮರಳುಗಾರಿಕೆ ನಡೆಸಲು ಇದುವರೆಗೆ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ ತಿಳಿಸಿದರು.

ಜನವರಿ 16ರಂದು ನದಿ ಪಾತ್ರಗಳಲ್ಲಿ ಮರಳುಗಾರಿಕೆ ನಡೆಸುವ ಪರವಾನಿಗೆ ಅವಧಿ ಮುಗಿದಿದ್ದು, ಆ ಬಳಿಕ ಎಲ್ಲ ಕಡೆ ಮರಳು ಅಭಾವ ತಲೆದೋರಿದೆ. ಸಚಿವಾಲಯದಿಂದ ಕ್ಲಿಯರೆನ್ಸಿಗೆ ಇಲಾಖೆ ಅನುಮತಿ ಕೋರಿದೆ. “20 ದಿನದೊಳಗೆ ಸಿಆರ್‌ಝಡ್ ಪ್ರದೇಶದಲ್ಲಿ ಮರಳುಗಾರಿಕೆಗೆ ಅನುಮತಿ ಸಿಗುವ ವಿಶ್ವಾಸವಿದೆ. ಮರಳುಗಾರಿಕೆ ಅನುಮತಿಗಾಗಿ ತ್ವರಿತ ಕೆಲಸ ಮಾಡುವಂತೆ ಇಲಾಖೆಯ ಕಾರ್ಯದರ್ಶಿಗೆ ಸೂಚಿಸಲಾಗಿದೆ” ಎಂದು ಸಚಿವ ತಿಳಿಸಿದ್ದಾರೆ.

vinya_kumar_meet_2 vinya_kumar_meet_3 vinya_kumar_meet_4

ದ ಕ ಜಿಲ್ಲೆಯ ಸಿಆರ್‌ಝಡ್ ಪ್ರದೇಶದಲ್ಲಿ 19 ಮರಳಿನ ದಿಬ್ಬ ಗುರುತಿಸಲಾಗಿದೆ. ಇದರಲ್ಲಿ 204 ಲಕ್ಷ ಟನ್ ಮರಳುಗಾರಿಕೆ ನಡೆಸಬಹುದು. ಸಿಆರ್‌ಝಡ್ ಪ್ರದೇಶದಲ್ಲಿ ಸಾಂಪ್ರದಾಯಿಕ ಮರಳುಗಾರಿಕೆಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಅಂತೆಯೇ ದ ಕ ಜಿಲ್ಲೆಯ 23 ಬ್ಲಾಕುಗಳ ಪೈಕಿ 23 ಬ್ಲಾಕ್‌ನ್ನು ಪಿಡಬ್ಲ್ಯೂಡಿ ಮೂಲಕ ಹರಾಜು ಮಾಡಲಾಗಿದೆ.

ದ ಕ ಜಿಲ್ಲೆಯಲ್ಲಿ ಅಲ್ಲದೆ ರಾಜ್ಯದ ಇತರ ಭಾಗಗಳಲ್ಲೂ ಮರಳು ಅಭಾವ ಕಂಡು ಬಂದಿದೆ. ಒಟ್ಟು 549 ಮರಳು ಬ್ಲಾಕು ಗುರುತಿಸಲಾಗಿದ್ದು, ಇದರಲ್ಲಿ 200 ಬ್ಲಾಕುಗಳು ಹರಾಜಾಗಿವೆ. ಮರಳುಗಾರಿಕೆ ಉದ್ಯಮಿಗಳು ಸ್ವಂತ ವಾಹನ ಹೊಂದಿರಬೇಕು ಎಂಬ ಷರತ್ತಿನಲ್ಲಿ ಟೆಂಡರ್ ಕರೆಯಲಾಗಿದೆ. ಹಾಗಾಗಿ ಹೆಚ್ಚು ಮಂದಿ ಟೆಂಡರಿಗೆ ಸ್ಪಂದಿಸಿಲ್ಲ.

ರಾಜ್ಯದಲ್ಲಿ ಮ್ಯಾನುಫ್ಯಾಕ್ಚರ್ ಸ್ಯಾಂಡ್‌ಗೆ (ಎಂ-ಸ್ಯಾಂಡ್) ಹೆಚ್ಚು ಆದ್ಯತೆ ನೀಡಲಿದೆ. ರಾಜ್ಯದ ಕೆಲವೆಡೆ ಅಂತರ್ಜಲ ತೀವ್ರ ಕುಸಿದಿದ್ದು, ಇದು ಪರಿಸರ (ಪ್ರಕೃತಿ) ದೃಷ್ಟಿಯಿಂದ ಅಪಾಯಕಾರಿ ಮುನ್ಸೂಚನೆ. ಇದರ ನಿಯಂತ್ರಣಕ್ಕೆ ಕೆಲಸ ಮಾಡಲು ಸರ್ಕಾರ ಎಂ-ಸ್ಯಾಂಡ್‌ಗೆ ಒತ್ತು ನೀಡಲು ಇಚ್ಛಿಸಿದೆ ಎಂದು ಸಚಿವ ಕುಲಕರ್ಣಿ ತಿಳಿಸಿದ್ದಾರೆ.

Write A Comment