ಕನ್ನಡ ವಾರ್ತೆಗಳು

ಡ್ರಜ್ಜಿಂಗ್ ನಡೆಸುವಾಗ ಕಲ್ಮಾಡಿಯಲ್ಲಿ ಸಿಕ್ಕ ಬಗ್ಗು ಪಂಜುರ್ಲಿಗೆ ಸೇರಿದ ಮರ; ದೈವಕ್ಕೆ ಸಮರ್ಪಣೆಯಾದ ‘ದೈವದ ಮರ’

Pinterest LinkedIn Tumblr

ಉಡುಪಿ: ಕಳೆದ ಜೂನ್ ತಿಂಗಳಲ್ಲಿ ಕಲ್ಮಾಡಿ ಬಗ್ಗುಮುಂಡದ ಬಳಿ ಡ್ರಜ್ಜಿಂಗ್ ನಡೆಸುವಾಗ ಪತ್ತೆಯಾಗಿ ಪರಿಸರದಲ್ಲಿ ಅಚ್ಚರಿ ಮೂಡಿಸಿದ ‘ಬಗ್ಗುಪಂಜುರ್ಲಿ ದೈವದ ಮರ’ ಎಂದು ನಂಬಲಾದ ಭಾರೀ ಗಾತ್ರದ (ಸುಮಾರು 30 ಅಡಿ ಉದ್ದ, ಸುಮಾರು 4 ಅಡಿ ಅಗಲ) ಹೆಬ್ಬೆಲಸು ಮರವನ್ನು ದೈವದ ನುಡಿಯಂತೆ ಶನಿವಾರ ವೈಭವದ ಮೆರವಣಿಗೆಯ ಮೂಲಕ ಕಲ್ಮಾಡಿಯ ಬಗ್ಗು ಪಂಜುರ್ಲಿ ದೈವಸ್ಥಾನಕ್ಕೆ ಸಮರ್ಪಿಸಲಾಯಿತು.

ಮಲ್ಪೆ ಸಮೀಪದ ಕಲ್ಮಾಡಿ ಬಳಿಯ ಬಗ್ಗು ಪಂಜುರ್ಲಿ ದೈವಸ್ಥಾನದ 400 ವರ್ಷಗಳ ಹಿಂದಿನ ಕತೆಗೆ ಪೂರಕವೆಂಬಂತೆ ಕಲ್ಮಾಡಿ ಬಗ್ಗು ಮುಂಡ ಪ್ರದೇಶದ ಹೊಳೆಯಲ್ಲಿ ಡ್ರಜ್ಜಿಂಗ್ ನಡೆಸುವ ವೇಳೆ ನೀರಿನಡಿಯಲ್ಲಿ ಬೃಹತ್ ಗಾತ್ರದ ಮರವೊಂದು ದೊರೆತಿರುವುದು ಪರಿಸರದ ಜನರಲ್ಲಿ ಅಚ್ಚರಿ ಮೂಡಿಸಿತ್ತು.

Kalmadi_Baggu Panjurli_Tree Distribute (1) Kalmadi_Baggu Panjurli_Tree Distribute (2) Kalmadi_Baggu Panjurli_Tree Distribute (3) Kalmadi_Baggu Panjurli_Tree Distribute (4) Kalmadi_Baggu Panjurli_Tree Distribute (5) Kalmadi_Baggu Panjurli_Tree Distribute (6) Kalmadi_Baggu Panjurli_Tree Distribute (7)

8 ತಿಂಗಳಿನಿಂದ ಹೊಳೆ ದಂಡೆಯಲ್ಲಿದ್ದ ಮರವನ್ನು ಮೂಲ ಕ್ಷೇತ್ರವಾದ ಬಗ್ಗು ಪಂಜುರ್ಲಿ ದೈವಸ್ಥಾನಕ್ಕೆ ಸಮರ್ಪಿಸುವಂತೆ ಪಂಜುರ್ಲಿಯ ನುಡಿ ಆಗಿತ್ತು. ಅದರಂತೆ ದೈವಸ್ಥಾನದ ಆಡಳಿತ ಸಮಿತಿಯ ಹಾಗೂ ಊರವರು ಪೂಜೆ ಪುರಸ್ಕಾರ ನಡೆಸಿ ಉಡುಪಿಯ ದೇವಾಡಿಗರ ಸಂಘದ ಸಹಕಾರದೊಂದಿಗೆ ಎರಡು ಕ್ರೇನ್ ಮೂಲಕ ಮೇಲೆತ್ತಿ. ಲಾರಿಯಲ್ಲಿ ಕಿದಿಯೂರು ಕಲ್ಮಾಡಿ ಮಾರ್ಗವಾಗಿ ಮೆರವಣಿಗೆಯಲ್ಲಿ ದೈವಸ್ಥಾನಕ್ಕೆ ತಂದು ದೈವಸ್ಥನಾದ ಮುಂಭಾಗದ ಅಶ್ವತ್ಥ ಕಟ್ಟೆ ಬಳಿ ಇಡಲಾಗಿದೆ. ಮುಂದೆ ಅದಕ್ಕೊಂದು ಮಾಡನ್ನು ನಿರ್ಮಿಸಿ ಪ್ರತಿ ವಾರ್ಷಿಕ ಉತ್ಸವದಂದು ಈ ಮರವನ್ನು ಹೂವಿನಿಂದ ಅಲಂಕೃತಗೊಳಿಸಿ ಪೂಜೆ ನಡೆಸಲಾಗುತ್ತದೆ.

ಬಗ್ಗು ಪಂಜುರ್ಲಿಯ ಶಕ್ತಿ
ಸುಮಾರು 9 ತಿಂಗಳ ಹಿಂದೆ ಹೊಳೆಯಲ್ಲಿ ಡ್ರಜ್ಜಿಂಗ್ ನಡೆಸುವಾಗ ಯಂತ್ರದ ಚಕ್ರಕ್ಕೆ ಸಿಲುಕಿಕೊಂಡ ಈ ಮರವನ್ನು ಮೇಲೆತ್ತಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಮರವನ್ನು ಮೇಲೆತ್ತಲು ಬಂದ ಹಿಟಾಚಿಯೂ ಕೈಕೊಟ್ಟಿತ್ತು. ಗ್ರಾಮ ದೈವದೇವರುಗಳಿಗೆ ಪ್ರಾರ್ಥನೆ ಮಾಡಿದರೂ ಪ್ರಯೋಜನವಾಗಲಿಲ್ಲ. ಕೈಸೋತು ಕುಳಿತ ಡ್ರಜ್ಜಿಂಗ್ ಕಾರ್ಮಿಕರಿಗೆ ಸ್ಥಳೀಯ ಹಿರಿಯರು, ಸಮೀಪದಲ್ಲಿ ಬಗ್ಗುಪಂಜುರ್ಲಿ ದೈವಸ್ಥಾನವಿದೆ ಅಲ್ಲಿ ಪ್ರಾರ್ಥನೆ ಮಾಡಿ ಎಂದು ಸಲಹೆ ನೀಡಿದರು. ಅವರ ಸಲಹೆಯಂತೆ ದೈವಸ್ಥಾನಕ್ಕೆ ಬಂದು ಪ್ರಾರ್ಥಿಸಿದ ಅನಂತರ ಹೂತಿದ್ದ ಮರವು ಹಿಂದಿನಂತೆ ಆಗದೆ ಸಲೀಸಾಗಿ ಮೇಲಕ್ಕೆ ಬಂದಿತೆನ್ನಲಾಗಿದೆ. ಮೇಲಕ್ಕೆತ್ತಿದ ಆ ಮರವನ್ನು ಹೊಳೆಯ ದಂಡೆಯ ಬದಿ ಇರಿಸಲಾಗಿತ್ತು. ಪಂಜುರ್ಲಿಯ ಎಚ್ಚರಿಕೆ ತಿಳಿಯುತ್ತಿದ್ದಂತೆ ಮರದ ವ್ಯಾಪಾರಿಗಳು ಈ ಮರದ ಹತ್ತಿರವೂ ಸುಳಿಯುತ್ತಿರಲಿಲ್ಲವೆಂದು ದೈವಸ್ಥಾನದ ಆಡಳಿತ ಮಂಡಳಿ ಯವರು ತಿಳಿಸುತ್ತಾರೆ.

ದೇವಾಡಿಗರ ಸಂಘದ ಫುಲ್ ಎಫರ್ಟ್:
ದೈವದ ಮರವನ್ನು ಹೊಳೆದಂಡೆಯಿಂದ ಮೇಲೆತ್ತಿ ಮೆರವಣಿಗೆ ಮೂಲಕ ದೈವಸ್ಥಾನಕ್ಕೆ ಸಾಗಿಸುವಲ್ಲಿ ಉಡುಪಿ ಚಿಟ್ಪಾಡಿ ದೇವಾಡಿಗರ ಸೇವಾ ಸಂಘ, ದೇವಾಡಿಗ ಯುವಕ ಸಂಘ, ದೇವಾಡಿಗ ಮಹಿಳಾ ಸಂಘವು ಪೂರ್ಣ ನೇತೃತ್ವವನ್ನು ವಹಿಸಿಕೊಂಡಿದೆ. ಮೆರವಣಿಗೆಯಲ್ಲಿ ದೈವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್, ನಾರಾಯಣ ಕಾಂಚನ್, ಸುಧಾಕರ ಸುವರ್ಣ, ಸುರೇಶ್ ಶೇರಿಗಾರ್, ದೇವಾಡಿಗರ ಸಂಘದ ಅಧ್ಯಕ್ಷ ಸೀತಾರಾಮ ಕೆ., ನಾರಾಯಣ ಶೇರಿಗಾರ, ಗಣೇಶ್ ದೇವಾಡಿಗ, ಸುದರ್ಶನ್ ಶೇರಿಗಾರ್, ಕೃಷ್ಣ ಶೇರಿಗಾರ್, ಹರೀಶ್ ಅಲೆವೂರು, ಸಾನಿಕ ಚಂದ್ರಶೇಖರ್ ಶೇರಿಗಾರ್,ದೈವಸ್ಥಾನ ಆಡಳಿತ ಸಮಿತಿಯ ಸದಸ್ಯರು, ಭಕ್ತರು ಹಾಗೂ ಕುಟುಂಬಸ್ಥರು ಪಾಲ್ಗೊಂಡಿದ್ದರು.

Write A Comment