
ಮಂಗಳೂರು,ಮಾ.06 : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲೆಯ ತಾಲೂಕು ಪಂಚಾಯತ್ ನೂತನ ಬಿಜೆಪಿ ಸದಸ್ಯರ ಅಭಿನಂದನಾ ಸಭೆಯು ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆಯಿತು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಬಿಜೆಪಿಯನ್ನು ಮುಳುಗುತ್ತಿರುವ ಹಡಗು ಎಂದು ಗೇಲಿ ಮಾಡಿದ್ದರು. ಆದರೆ ಆ ಬಳಿಕ ನಡೆದ ಎಲ್ಲ ಚುನಾವಣೆಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಬಿಜೆಪಿ ಓಡುತ್ತಿರುವ ಹಡಗು ಎಂಬುದನ್ನು ಜನತೆ ತೋರಿಸಿಕೊಟ್ಟಿದ್ದಾರೆ ಎಂದು ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಸಭೆಯನ್ನು ಉದ್ದೇಶಿಸಿ ಹೇಳಿದರು.
ನೂತನವಾಗಿ ಆಯ್ಕೆಯಾಗಿರುವ ಸದಸ್ಯರನ್ನು ಅಭಿನಂದಿಸಿ, ನಿಮ್ಮ ಗೆಲುವಿನ ಹಿಂದೆ ಕಾರ್ಯಕರ್ತರ ಶ್ರಮ ಇದೆ ಎಂಬುದನ್ನು ಮರೆಯಬಾರದು. ಅವರೂ ಕೂಡ ಅಭಿನಂದನೆಗೆ ಅರ್ಹರು. ಸದಸ್ಯರ ಮೇಲೆ ಮಹತ್ತರವಾದ ಜವಾಬ್ದಾರಿ ಇದೆ. ಅದನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಇತರರಿಗೆ ಮಾದರಿಯಾಗಬೇಕಿದೆ ಎಂದು ನಳಿನ್ ಕಿವಿಮಾತು ಹೇಳಿದರು.

ಜಿ.ಪಂ. ಹಾಗೂ ತಾ.ಪಂ. ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಅಭೂತಪೂರ್ವ ಜಯಗಳಿಸುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಎಲ್ಲ ಸ್ಥಾನಗಳನ್ನು ಗೆಲ್ಲುವ ಸೂಚನೆ ಲಭಿಸಿದೆ ಎಂದರು.
ಕೇಂದ್ರ ಕರ್ನಾಟಕಕ್ಕೆ ಅನುದಾನ ನೀಡುತ್ತಿಲ್ಲ ಎಂದು ರಾಜ್ಯ ಸರಕಾರ ಆರೋಪಿಸುತ್ತಿದೆ. ಆದರೆ ಈ ತನಕ ಕೇಂದ್ರದಿಂದ ಕರ್ನಾಟಕಕ್ಕೆ 30,900 ಕೋ.ರೂ. ಅನುದಾನ ಬಂದಿದೆ. ಇದನ್ನು ನಾವು ದಾಖಲೆ ಸಹಿತ ತೋರಿಸುತ್ತೇವೆ. ಈ ಬಾರಿ ಕೇಂದ್ರ ಸರಕಾರ ಐತಿಹಾಸಿಕ ಬಜೆಟ್ ಮಂಡಿಸಿದೆ. ಬಜೆಟ್‌ಗೆ ಎಲ್ಲಡೆಯಿಂದಲೂ ಪ್ರಶಂಸೆ ವ್ಯಕ್ತವಾಗುತ್ತಿದೆ. ಕೃಷಿ, ಹೆದ್ದಾರಿ, ಗ್ರಾಮಾಭಿವೃದ್ಧಿ, ಕೈಗಾರಿಕೆ ಹೀಗೆ ಎಲ್ಲ ಕ್ಷೇತ್ರಕ್ಕೂ ಮನ್ನಣೆ ನೀಡಿ ಬಜೆಟ್ ಮಂಡಿಸಲಾಗಿದೆ ಎಂದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಜಿ.ಕೆ. ಭಟ್ ಅಭಿನಂದನಾ ಭಾಷಣ ಮಾಡಿದರು. ಬಿಜೆಪಿ ಜಿಲ್ಲಾ ಪ್ರಭಾರಿ ಲಾಲಾಜಿ ಆರ್. ಮೆಂಡನ್ ನೂತನ ಸದಸ್ಯರಿಗೆ ಶುಭಹಾರೈಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು ಪ್ರಸ್ತಾವನೆಗೈದರು.
ಬಿಜೆಪಿ ಜಿಲ್ಲಾ ಮಟ್ಟದ ನಾಯಕರು, ಜಿ.ಪಂ, ತಾ.ಪಂ.ನ ನೂತನ ಬಿಜೆಪಿ ಸದಸ್ಯರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿಗಳಾದ ಡಾ| ಭರತ್ ಶೆಟ್ಟಿ ಸ್ವಾಗತಿಸಿದರು. ಬಿ. ದೇವದಾಸ್ ಶೆಟ್ಟಿ ನಿರೂಪಿಸಿದರು.