ಚಿತ್ರ,ವರದಿ- ಯೋಗೀಶ್ ಕುಂಭಾಸಿ
ಉಡುಪಿ: ಕಡಲತಡಿಯಲ್ಲಿರುವ ಕಾರಂತಜ್ಜನ ಊರು ಕೋಟದಲ್ಲಿ ಇಂದು ಸಂಭ್ರಮದ ವಾತಾವರಣವಿತ್ತು. ಯಾಕೇ ಗೊತ್ತಾ.. ಕೋಟದ ಪಡುಕೆರೆ ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ತಾವು ಕಲಿತ ಕಾಲೇಜಿನಲ್ಲಿ ಮತ್ತೊಮ್ಮೆ ಕಲೆತು ಬೆರೆಯುವ ಅಭೂತಪೂರ್ವ ಕ್ಷಣಗಳು ಇದಾಗಿದ್ದವು. ಕೋಟ ಪಡುಕೆರೆಯ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘವು ‘ಪುನರ್ ಮಿಲನ’ ಹೆಸರಿನಲ್ಲಿ ಭಾನುವಾರ ಕಾಲೇಜು ಅಂಗಣದಲ್ಲಿ ಆಯೋಜಿಸಿದ ಕಾರ್ಯಕ್ರಮದ ಝಲಕ್ ಇದು.
‘ಪದವಿ’ ಪಡೆಯಲು ಈ ಸರಕಾರಿ ಕಾಲೇಜಿನಲ್ಲಿ ಓದಿ ಬಳಿಕ ಓದು ಮುಗಿಸಿ ಬದುಕು ಅರಸಿ ಹೊರಟ ಈ ಹಳೆ ವಿದ್ಯಾರ್ಥಿಗಳು ಅಂದಿನ ಮಧುರ ನೆನಪುಗಳು, ಅನುಭವಗಳನ್ನು ಪರಸ್ಪರ ಹಂಚಿಕೊಂಡು ಮೆಲುಕು ಹಾಕುವುದಕ್ಕಾಗಿಯೇ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾಲೇಜಿನಲ್ಲಿ ಕಲಿತ ಎಲ್ಲಾ ಹಳೆ ವಿದ್ಯಾರ್ಥಿಗಳು ತಾವು ಕಲಿತ ಕಾಲೇಜಿನಲ್ಲಿ ಮತ್ತೊಮ್ಮೆ ಸೇರಿ ತಮಗೆ ವಿದ್ಯೆ ನೀಡಿದ ಗುರುವರೇಣ್ಯರಿಗೆ ಕಾಲೇಜು ಸ್ಥಾಪನೆಗೆ ಕಾರಣೀಕರ್ತರಾದವರಿಗೆ ಸ್ಥಳ ದಾನಿಗಳಿಗೆ ಗುರುತಿಸಿ ಗೌರವಿಸುವ ಕ್ಷಣಗಳ ಜೊತೆಗೆ ಈ ಕಾರ್ಯಕ್ರಮದ ಮೂಲಕ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಸಹಕಾರ ನೀಡುವುದಕ್ಕೆ ಶಾಶ್ವತ ನಿಧಿ ಸ್ಥಾಪನೆ ಈ ಕಾರ್ಯಕ್ರಮದ ಮಹತ್ತರ ಉದ್ದೇಶವಾಗಿತ್ತು.

ಕಾರ್ಯಕ್ರಮವನ್ನು ಕಾಲೇಜು ಸ್ಥಾಪನ ಸಮಿತಿ ಗೌರವಾಧ್ಯಕ್ಷ ನಾಡೋಜ ಡಾ. ಜಿ. ಶಂಕರ್ ಉದ್ಘಾಟಿಸಿದ್ರು. ಬಳಿಕ ಮಾತನಾಡಿದ ಅವರು, ಉತ್ತಮ ಉದ್ದೇಶಗಳನ್ನಿಟ್ಟುಕೊಂಡು ಈ ಕಾರ್ಯಕ್ರಮದ ಮೂಲಕ ಹಳೆ ವಿದ್ಯಾರ್ಥಿಗಳು ಒಟ್ಟು ಸೇರಿರುವುದು ಎಲ್ಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕಿದೆ. ಕಾಲೇಜಿನ ಭೋಜನಾ ಶಾಲೆ ಹಾಗೂ ತರಗತಿ ಕೊಠಡಿಗಳ ನಿರ್ಮಾಣಕ್ಕೆ ಅನುಕೂಲವಾಗುವಂತೆ ಟ್ರಸ್ಟ್ ಮೂಲಕ ದೇಣಿಗೆ ನೀಡುತ್ತೇನೆ. ಅಲ್ಲದೇ ಕಾಲೇಜಿನ ಕೆಲವು ಸಮಸ್ಯೆಗಳನ್ನು, ಕುಂದುಕೊರತೆಗಳನ್ನು ಎಲ್ಲರೂ ಒಡಗೂಡಿ ಬಗೆಹರಿಸಿಕೊಳ್ಳಬೇಕಿದೆ ಇದಕ್ಕೆ ಮಾಧ್ಯಮದ ಸಹಕಾರವೂ ಬೇಕಿದೆ ಎಂದರು.
ವಿಜಯರಾಘವೇಂದ್ರ ಫುಲ್ ಖುಷ್
ಹಳೆಯದನ್ನು ಹಳೆಯದಾಗಲ್ಲದೇ ಹೊಸದಾಗಿ ನಡೆಸುವ ಈ ಸುಂದರ ಕಾರ್ಯಕ್ರಮ ಖುಷಿಕೊಟ್ಟಿದೆ. ಈ ಕಾಲೇಜು ಆರಂಭವಾಗಿ 8-9 ವರ್ಷಗಳಷ್ಟೇ ಆಗಿದೆ. ಆದರೇ ಅಂದಿನ ಸುಮಧುರ ಕ್ಷಣಗಳನ್ನು ನೆನಪಿಸಿಕೊಳ್ಳಲು ಈ ಕಾರ್ಯಕ್ರಮ ಸಹಕಾರಿ. ನಮಗೆ ಯಾವ ವಸ್ತುವು ನಮ್ಮ ಬಳಿ ಇರಲ್ಲ ಎಂಬುದು ತಿಳಿದಾಗ ಮಾತ್ರ ಆ ವಸ್ತುವಿನ ಬೆಲೆ ತಿಳಿಯುತ್ತದೆ. ಈ ಕಾಲೇಜು 25 ವರ್ಷಕ್ಕೆ ಬಹು ದೊಡ್ಡ ಸಾಧನೆಯ ಶಿಖರವನ್ನು ಏರುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ ಎಂದು ನಟ ವಿಜಯರಾಘವೇಂದ್ರ ಹೇಳಿದರು.

ಬಾನಿಗೊಂದು ಎಲ್ಲೆ ಎಲ್ಲಿದೆ……..
ಸದಾ ಕಾಲ ಜನ ಪ್ರೀತಿ ವಿಶ್ವಾಸ, ಸ್ನೇಹ ನನಗೆ ಶ್ರೀ ರಕ್ಷೆಯಾಗಿದೆ. ಬಿಗ್ ಬಾಸ್ ಗೆಲುವು ಕೂಡ ನನ್ನದಲ್ಲ ಅದು ನನ್ನ ಜನರದ್ದು. ನನಗೆ ಸಿಕ್ಕೆಲ್ಲ ಪ್ರಶಂಸೆಗಳಿಗೆ ತಂದೆ-ತಾಯಿ, ಗುರು-ಹಿರಿಯರು, ಹಿತೈಷಿಗಳು, ಕನ್ನಡವನ್ನು ಪ್ರೇಮಿಸುವ ಚಿತ್ರ ಪ್ರಿಯರು ಕಾರಣರಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ವಿಜಯರಾಘವೇಂದ್ರ ಅವರು, “ಬಾನಿಗೊಂದು ಎಲ್ಲೆ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆಯಿದೆ… ” ಎಂಬ ಹಾಡು ಹೇಳುವ ಮೂಲಕ ನೆರೆದ ಜನರನ್ನು ರಂಜಿಸಿದರು.

ನನ್ನ ಸಾಧನೆಗೆ ಕಾರಣವೇ ಕೋಟದ ಪ್ರಾಧ್ಯಾಪಕರು: ವಿಜಯಲಕ್ಷ್ಮಿ ಶಿಬರೂರು
ನಾನೊಬ್ಬಳು ಬಿಕಾಂ ವಿದ್ಯಾರ್ಥಿನಿ. ಗೊತ್ತು ಗುರಿಯಿಲ್ಲದೇ ಸನ್ಯಾಸಿಯಾಗ ಹೊರಟೆ, ಮತ್ತೊಮ್ಮೇ ಮಿಲಿಟರಿ ಕೆಲಸಕ್ಕೆ ಸೇರಲು ಹೊರಟೆ. ಆದರೇ ನನ್ನ ಗುರಿಯ ಬಗ್ಗೆ ತೋರಿಸಿಕೊಟ್ಟವರು ಇದೇ ಊರಿನವರು. ನಾನು ನನ್ನ ವ್ಯಕ್ತಿತ್ವ ರೂಪಿಸಿಕೊಂಡು ಸಾಧನೆ ಮಾಡಲು ಅವರೇ ಕಾರಣ. ಅವರು ಕೋಟದ ಕೃಷ್ಣ ಕಾಂಚನ್. ಕಟೀಲು ಕಾಲೇಜಿನ ಕಾಮರ್ಸ್ ಪ್ರಾಧ್ಯಾಪಕರು. ಅವರು ಅಂದು ತೋರಿದ ದಾರಿ ಮಾರ್ಗದರ್ಶನ ನನ ಜೀವನದ ತಿರುವು. ಇದರಿಂದಾಗಿಯೇ ನನಗೂ ಕೋಟಕ್ಕೂ ಅವಿನಾಭಾವ ಋಣಾನುಬಂಧವಿದೆ- ಎಂದು ಹೇಳಿದವರು ಸುವರ್ಣಾ ನ್ಯೂಸ್ ಕವರ್ ಸ್ಟೋರಿ ವಿಭಾಗದ ವಿಜಯಲಕ್ಷ್ಮಿ ಶಿಬರೂರು.

ಸರಕಾರಿ ಶಾಲೆ-ಕಾಲೇಜು ಉಳಿವೆಗೆ ಪ್ರಯತ್ನಿಸೋಣ: ವಿಜಯಲಕ್ಷ್ಮಿ ಶಿಬರೂರು
ಇದೋಂದು ಸರಕಾರಿ ಕಾಲೆಜು ಅನ್ನಿಸುವುದೇ ಇಲ್ಲ. ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ಎಂಟು ವರ್ಷದಲ್ಲೇ ಇಂತಹ ಒಂದು ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿರುವುದು ವಿಶೇಷವಾಗಿದೆ. ಖಾಸಗೀಕರಣ ಹಾಗೂ ಖಾಸಗಿಯವರ ಕಪಿಮುಷ್ಟಿಗೆ ರಾಜಕೀಯ ಹಾಗೂ ರಾಜಕಾರಣಿಗಳು ಸಿಕ್ಕಿಕೊಂದಿದ್ದು ಈ ಖಾಸಗಿ ಕಾಲೇಜು ಹಾಗೂ ಶಾಲೆಗಳು ಅತಂತ್ರ ಪರಿಸ್ಥಿತಿ ತಲುಪುವಂತಾಗಿದೆ. ಸರಕಾರಿ ಶಾಲೆ ಕಾಲೇಜುಗಳು ಒಂದು ಗ್ರಾಮದಲ್ಲಿದ್ದರೇ ಬಡವರು, ಅಶಕ್ತರು, ಶೋಷಿತರಿಗೆ ಅನುಕೂಲವಾಗಲಿದೆ. ಖಾಸಗಿ ಶಾಲೆಯಲ್ಲಿ ಲಕ್ಷಲಕ್ಷ ಕೊಟ್ಟು ಓದಲು ನಮಗಾಗಲ್ಲ. ಇಲ್ಲಿನ ಸಮಸ್ಯೆಗಳೆನಿದ್ದರೂ ಅದರ ಬಗ್ಗೆ ಮಾಧ್ಯಮದಲ್ಲಿ ಬೆಳಕು ಚೆಲ್ಲುವೆ.

ಸಾಲುಮರ ತಿಮ್ಮಕ್ಕರಿಂದ ಗಂಧದ ಗಿಡ ನೀಡಿ ಸ್ವಾಗತ
ಎಲ್ಲಾ ಸಮಾರಂಭದಲ್ಲಿಯೂ ಪುಷ್ಪಗುಚ್ಚ ನೀಡಿ ಸ್ವಾಗತಿಸುವುದು ಕ್ರಮ. ಆದರೇ ಪುನರ್ ಮಿಲನ ಕಾರ್ಯಕ್ರಮದಲ್ಲಿ ವಿಭಿನ್ನ ರೀತಿಯಲ್ಲಿ ಅತಿಥಿಗಳನ್ನು ಸ್ವಾಗತಿಸಲಾಯ್ತು. ಸಾಲು ಮರದ ತಿಮ್ಮಕ್ಕ ಅವರ ಕೈಯಿಂದ ಎಲ್ಲಾ ಅತಿಥಿಗಳಿಗೆ ಗಂಧದ ಗಿಡ ನೀಡುವುದರೊಂದಿಗೆ ವಿಶಿಷ್ಟ ರೀತಿಯಲ್ಲಿ ಸ್ವಾಗತಿಸಿದ್ದು ಎಲ್ಲರಿಗೂ ಮಾದರಿಯಾಯ್ತು.
ಕಾರ್ಯಕ್ರಮದಲ್ಲಿ ಕಾಲೇಜು ಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್, ಹಸಿರು ಕ್ರಾಂತಿ ಹರಿಕಾರೆ ಸಾಲುಮರದ ತಿಮ್ಮಕ್ಕ, ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಕಾಲೇಜು ಪ್ರಾಂಶುಪಾಲ ಡಾ. ರಾಜೇಂದ್ರ ಎಸ್. ನಾಯಕ್, ಸ್ಥಾಪಕ ಪ್ರಾಂಶುಪಾಲ ಡಾ. ಉದಯ ಕುಮಾರ್ ಶೆಟ್ಟಿ, ವಿಶ್ರಾಂತ ಮುಖ್ಯೋಪಧ್ಯಾಯ ವಿಠಲ್ ವಿ. ಗಾಂವ್ಕರ್, ನಟ ವಿಜಯರಾಘವೇಂದ್ರ, ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಪ್ರಗತಿಪರ ಕೃಷಿಕ ರವೀಂದ್ರ ಐತಾಳ್, ಪಡುಕೆರೆ ಸರಕಾರಿ ಶಾಲೆ ಮುಖ್ಯೋಪಧ್ಯಾಯ ಪ್ರಕಾಶ್ ಹೆಬ್ಬಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ್, ಕಾರ್ಯದರ್ಶಿ ಪ್ರವೀಣ್ ಕೆ, ಸಂಚಾಲಕರಾದ ವಾರಿಜಾ, ಯೋಗೇಂದ್ರ, ನಿಯೋಜಿತ ಅಧ್ಯಕ್ಷರು ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.