ಮಂಗಳೂರು, ಮಾ. 05: ನಾವು ದೇಶಾಭಿಮಾನ ಬೆಳೆಸಿಕೊಳ್ಳಬೇಕು. ನಮ್ಮ ಸಂಸ್ಕೃತಿ ಆಚಾರ, ವಿಚಾರಗಳನ್ನು ಉಳಿಸಿ ಸತ್ಕರ್ಮದ ಮೂಲಕ ಪುರುಷೊತ್ತಮರಾಗಬೇಕೆಂದು ಕರಿಂಜೆ ಶ್ರೀ ಲಕ್ಷ್ಮೀಸತ್ಯನಾರಾಯಣ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ನುಡಿದರು.
ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠ ಪರ್ಯಾಯ ರಾಜ ಪಟ್ಟಾಭಿಷೇಕ ಮಹೋತ್ಸವದಂಗವಾಗಿ ಜೋಗಿ ಮಠ ಪರಿಸರದ ಶ್ರೀ ಸಿದ್ಧಗುರು ಸುಂದರನಾಥ ವೇದಿಕೆಯಲ್ಲಿ ನಡೆದ ಮೂರನೇ ದಿನದ ಧಾರ್ಮಿಕ ಸಭೆಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸನಾತನ ಹಿಂದೂ ಧರ್ಮದಿಂದ ಭಾರತವಿಂದು ವಿಶ್ವಕ್ಕೆ ಗುರುವಾಗಿದೆ. ಹಿಂದೂ ಧರ್ಮದಲ್ಲಿರುವುದು ಮೂಲ ನಂಬಿಕೆ. ಮೂಢ ನಂಬಿಕೆಯಲ್ಲ. ಆದರೆ ಬುದ್ಧಿ ಹೆಚ್ಚಾಗಿ ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳು ಸನಾತನ ಹಿಂದೂ ಧರ್ಮವನ್ನು ನಿರಂತರ ಟೀಕಿಸಿ, ದಾಳಿ ಮಾಡುತ್ತಿದ್ದಾರೆ. ಇಂತಹ ಟೀಕೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ಇಂತಹ ಸಾಹಿತಿಗಳು ಹಿಂದೂ ಧರ್ಮವನ್ನು ಮಾತ್ರ ಟೀಕಿಸುತ್ತಿದ್ದಾರೆ. ಕುಂಕುಮ, ಬಳೆ ಎಲ್ಲವೂ ಮೂಢನಂಬಿಕೆ. ತುಳಸಿಗೆ ನೀರು ಹಾಕುವುದು ಕೂಡಾ ಇವರಿಗೆ ಮೂಢನಂಬಿಕೆ. ಆದರೆ ತುಳಸಿಯಿಂದ ಕ್ಯಾನ್ಸರ್ನಂತರ ರೋಗವನ್ನು ನಿವಾರಿಸಬಹುದು ಎಂದು ಸಾಬೀತಾಗಿದೆ. ಹಿಂದೂ ಧರ್ಮದ ನಂಬಿಕೆ, ಆಚಾರ, ವಿಚಾರಗಳನ್ನು ಟೀಕಿಸುವುದನ್ನು ಹಿಂದೂ ಸಮಾಜ ಸಹಿಸುವುದಿಲ್ಲ. ಸಮಾಜದ ಬಂಧುಗಳು ಇಂತಹ ಟೀಕೆಗಳಿಗೆ ತಕ್ಕ ಉತ್ತರ ನೀಡಬೇಕೆಂದರು.
ಮನುಷ್ಯನಿಗೆ ಇಂದು ಬೇಕಾಗಿರುವುದು ಆರೋಗ್ಯ ಮತ್ತು ಆರೋಗ್ಯದಿಂದ ನೆಮ್ಮದಿ. ಇಂತಹ ಧಾರ್ಮಿಕ ಕೆಲಸಗಳಿಂದ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಸಾಧ್ಯ ಮಾತ್ರವಲ್ಲ. ಸಮಾಜದ ಎಲ್ಲಾ ಜಾತಿ, ವರ್ಗ, ಪಂಠದ ಜನರನ್ನು ಪರಸ್ಪರ ಬೆಸೆದು ಸೌಹಾರ್ದತೆಯ ಕೆಲಸವೂ ಸಾಧ್ಯ ಎಂದರು.
ಇಂದು ಜೋಗಿ ಸಮಾಜ ಯೋಗ್ಯತೆಯ ಸಮಾಜವಾಗಿ ರೂಪುಗೊಂಡಿದೆ. ಪವಿತ್ರ ನೆಲ ಕದಳೀ ಜೋಗಿ ಮಠದ ರಾಜಪಟ್ಟಾಭಿಷೇಕ. ಗುರು ಮತ್ತು ರಾಜನ ಒಗ್ಗೂಡುವಿಕೆಯ ವಿಶಿಷ್ಟ ಪಟ್ಟಾಭಿಷೇಕ. ಇಂತಹ ಸನ್ನಿವೇಶ ದೇಶದ ಎಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ದ. ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಧಾರ್ಮಿಕ ಕೆಲಸ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಜೀವನದಲ್ಲಿ ಶಿಸ್ತು ಆಳವಡಿಸಿ ಸತ್ಪ್ರಜೆಗಳಾಗಲು ಇಂತಹ ಧಾರ್ಮಿಕ ಕಾರ್ಯಕ್ರಮಗಳು ಪ್ರೇರಕ ಎಂದರು.ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಮೋನಪ್ಪ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.
ಅಭೀಷ್ ಬಿಲ್ಡರ್ಸ್ನ ಪುಷ್ಪರಾಜ್ ಜೈನ್, ಕಾರ್ಪೊರೇಟರ್ ಡಿ. ಕೆ ಅಶೋಕ್ ಕುಮಾರ್, ರಿತಿಕಾ ಕನ್ಸ್ಟ್ರಕ್ಷನ್ನ ಉದಯ ಶೆಟ್ಟಿ, ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ಅಧ್ಯಕ್ಷ ಗಣೇಶ್ ಕುಂಟಲ್ಪಾಡಿ, ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ, `ನಮ್ಮ ಕುಡ್ಲ’ ನಿರ್ದೇಶಕ ಲೀಲಾಕ್ಷ ಕರ್ಕೇರಾ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಮೋಹನ ಕೊಪ್ಪಳ ಮುಖ್ಯ ಅತಿಥಿಗಳಾಗಿದ್ದರು.
ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಜೋಗಿ, ಸಲಹೆಗಾರ ಸದಾನಂದ ಜೋಗಿ, ಮಂಜೇಶ್ವರ ಜೋಗಿ ಸಮಾಜದ ಮುಂದಾಳು ಗೋಪಾಲ ಮಂಜೇಶ್ವರ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯೋಗಿ ವರದರಾಜ್, ಯೋಗೀಶ್ ಜೋಗಿ, ಕೆ. ಪದ್ಮನಾಭ, ಸಂಜೀವ ಕೆ. ಹಾಗೂ ನಾರಾಯಣ ಭಟ್ ಕೌಡೂರುರವರನ್ನು ಸನ್ಮಾನಿಸಲಾಯಿತು.
ಕದಳೀ ಶ್ರೀ ಯೋಗೀಶ್ವರ (ಜೋಗಿ) ಮಠ ಪರ್ಯಾಯ ರಾಜಪಟ್ಟಾಭಿಷೇಕ ಮಹೋತ್ಸವ ಸಮಿತಿ ಅಧ್ಯಕ್ಷ ಹೆಚ್. ಕೆ. ಪುರುಷೋತ್ತಮ್ ಸ್ವಾಗತಿಸಿ, ಸಂಜನಾ ಅಚಲ್ನಾಥ್ ಕಾರ್ಯಕ್ರಮ ನಿರ್ವಹಿಸಿದರು.
ಬಳಿಕ `ಮೈಮೆದ ಮಚ್ಛೇಂದ್ರೆ’ ತುಳು ಪೌರಾಣಿಕ ನಾಟಕ ಪ್ರದರ್ಶನಗೊಂಡಿತು.