ಕನ್ನಡ ವಾರ್ತೆಗಳು

ಬಸ್ ನಿರ್ವಾಹಕನಿಗೆ ಹಲ್ಲೆ : ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಮೂಡಬಿದಿರೆ-ಬಂಟ್ವಾಳ ನಡುವೆ ಬಸ್ ಸಂಚಾರ ಬಂದ್

Pinterest LinkedIn Tumblr

siddakatte_bas_bund_1

ಬಂಟ್ವಾಳ, ಮಾ.4: ಮೂಡಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಪುಚ್ಚೆಮೊಗರುನಲ್ಲಿ ಖಾಸಗಿ ಬಸ್ಸೊಂದರ ನಿರ್ವಾಹಕನಿಗೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಮೂಡಬಿದಿರೆ-ಬಂಟ್ವಾಳ ನಡುವೆ ಓಡಾಡುತ್ತಿರುವ ಎಲ್ಲಾ ಖಾಸಗಿ ಬಸ್‌ಗಳು ಗುರುವಾರ ಬೆಳಗ್ಗೆ ಯಿಂದಲೇ ಹಠಾತ್ತನೆ ಸಂಚಾರವನ್ನು ಸ್ಥಗಿತಗೊಳಿಸಿ ಚಾಲಕರು ಹಾಗೂ ನಿರ್ವಾಹಕರು ವಿವಿಧ ಸಂಘಟನೆಗಳ ಹಾಗೂ ಸಾರ್ವಜನಿಕರ ಸಹಯೋಗದೊಂದಿಗೆ ಸಿದ್ದಕಟ್ಟೆ ಪೇಟೆಯಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿ ಕೆಲಹೊತ್ತುಗಳ ಕಾಲ ಬಿಗುವಿನ ವಾತಾವರಣ ಉಂಟಾಯಿತು.

ಸುದ್ದಿ ತಿಳಿದ ಬಂಟ್ವಾಳ ಗ್ರಾಮಾಂತರ, ಪುಂಜಾಲಕಟ್ಟೆ ಹಾಗೂ ಮೂಡಬಿದಿರೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಈ ವೇಳೆ ಪ್ರತಿಭಟನಾಕಾರರು ಆರೋಪಿಗಳ ಬಂಧನಕ್ಕೆ ಎರಡು ದಿನಗಳ ಗಡುವು ವಿಧಿಸಿದರು. ಪೊಲೀಸರು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ಭರವಸೆಯ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.

ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ, ಬಿಜೆಪಿ ಮುಖಂಡರಾದ ಜಗದೀಶ್ ಅಧಿಕಾರಿ, ಸುಲೋಚನಾ ಜಿ.ಕೆ.ಭಟ್, ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ಸಂಗಬೆಟ್ಟು ಗ್ರಾ.ಪಂ. ಉಪಾಧ್ಯಕ್ಷ ಸತೀಶ್ ಪೂಜಾರಿ ಹಾಗೂ ಸ್ಥಳೀಯರು ಪ್ರತಿಭಟನಾಕಾರರಿಗೆ ಬೆಂಬಲ ವ್ಯಕ್ತಪಡಿಸಿದರು.

ಎರಡು ದಿನಗಳ ಹಿಂದೆ ಖಾಸಗಿ ಬಸ್‌ವೊಂದರ ನಿರ್ವಾಹಕ ಯೋಗೀಶ್ ಅವರಿಗೆ ಕ್ಷುಲ್ಲಕ ಕಾರಣಕ್ಕೆ ನಾಲ್ವರ ತಂಡವೊಂದು ಪುಚ್ಚೆಮೊಗರು ಸಮೀಪದ ಶಾಂತಿರಾಜ್ ಕಾಲನಿಯಲ್ಲಿ ಬಸ್ಸನ್ನು ತಡೆದು ಹಲ್ಲೆಗೈಯ್ಯಲಾಗಿದ್ದರೆ ಚಾಲಕ ನವೀನ ಅವರಿಗೆ ಚೂರಿ ತೋರಿಸಿ ಬೆದರಿಕೆ ಒಡ್ಡಲಾಗಿತ್ತು.

ಈ ಬಗ್ಗೆ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಿರಲಿಲ್ಲ. ಇದರಿಂದ ಆಕ್ರೋಶಿತರಾದ ಬಂಟ್ವಾಳ -ಮೂಡಬಿದಿರೆ ನಡುವೆ ಓಡಾಡುವ ಖಾಸಗಿ ಬಸ್‌ಗಳ ಚಾಲಕರು ಹಾಗೂ ನಿರ್ವಾಹಕರು ಬಸ್ ಸಂಚಾರವನ್ನು ಸ್ಥಗಿತಗೊಳಿಸಿದ್ದರು.

ಈ ದಿಢೀರ್ ಬಸ್ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಈ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಸಾರ್ವಜನಿಕರು ತೊಂದರೆಗೊಳಪಡುವಂತಾಯಿತು. ಗುರುವಾರದಂದು ಪ್ರಥಮ ಪಿಯುಸಿಯ ಪರೀಕ್ಷೆ ನಡೆಯುತ್ತಿದ್ದರಿಂದ ಈ ತರಗತಿಯ ವಿದ್ಯಾರ್ಥಿಗಳಂತೂ ತೀವ್ರ ಆತಂಕಕ್ಕೊಳಗಾಗಿ ಖಾಸಗಿ ವಾಹನಗಳ ಮೊರೆ ಹೋಗಬೇಕಾಯಿತು. ಕೆಲವು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದ ಕಾರಣ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ. ರಾತ್ರಿವರೆಗೂ ಈ ರೂಟಿನ ಯಾವುದೇ ಖಾಸಗಿ ಬಸ್ ಗಳು ರಸ್ತೆಗಿಳಿಯಲಿಲ್ಲ.

ಡಿವೈಎಸ್‌ಪಿ ಭಾಸ್ಕರ್ ರೈ, ಮೂಡಬಿದಿರೆ ಇನ್ಸ್‌ಪೆಕ್ಟರ್ ಅನಂತ ಪದ್ಮನಾಭ, ಎಸ್ಸೈಗಳಾದ ರಕ್ಷಿತ್, ಲತೇಶ್ ಕುಮಾರ್ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಬಸ್ ಸಂಚಾರ ಆರಂಭಿಸುವಂತೆ ಮನವಿ ಮಾಡಿದರೂ ಸಫಲವಾಗಲಿಲ್ಲ.

Write A Comment