ಕನ್ನಡ ವಾರ್ತೆಗಳು

ಸಿ.ಎಂ. ಕಟ್ಟಿರುವ ವಾಚ್ ಕದ್ದಿದ್ದು ಎಂದ ಕುಮಾರಸ್ವಾಮಿ; ಎಲ್ಲೆಡೆ ಸುತ್ತಿ ಕುಂದಾಪುರಕ್ಕೆ ಬಂದ ವಾ(ಕ್)ಚ್ ಸಮರ!!

Pinterest LinkedIn Tumblr

ಬೆಂಗಳೂರು/ಕುಂದಾಪುರ: ಸಿಎಂ ಸಿದ್ದರಾಮಯ್ಯ ಅವರ ದುಬಾರಿ ವಾಚ್ ವಿಚಾರ ಈಗ ಎಲ್ಲಾ ಕಡೆ ಪ್ರಚಲಿತದಲ್ಲಿರೋದು ನಿಮಗೆಲ್ಲಾ ಗೊತ್ತೇ ಇದೆ. ಬೆಂಗಳೂರಿನಲ್ಲಿ ಹುಟ್ಟಿಕೊಂಡ ಈ ರಾದ್ಧಾಂತ ದುಬೈ ಸುತ್ತಿ ಈಗ ಕರಾವಳಿಯ ಉಡುಪಿಗೂ ಬಂದಿದೆ. ಏನು ಈ ಹೊಸ ಟ್ವಿಸ್ಟ್ ಅಂತೀರಾ..

ಇತ್ತೀಚೆಗೆ ಸಿ.ಎಂ. ದುಬಾರಿ ವಾಚ್ ಕಟ್ಟಿದ್ದಾರೆ, ಇದಕ್ಕೆ ಸಂಬಂಧಿಸಿದಂತೆ ಅವರು ಯಾವುದೇ ತೇರಿಗೆ ಕಟ್ಟಿಲ್ಲ ಹಾಗೂ ಆಸ್ತಿ ವಿವರ ನೀಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮೀ ಗಂಭೀರ ಆರೋಪ ಮಾಡಿದ್ದರು. ಈ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲೇ ಬಿರುಸಿನ ಸಂಚಲನವುಂಟಾಗಿ ಸ್ವಪಕ್ಷದ ಹಿರಿಯ ನಾಯಕರೇ ಸಿ.ಎಂ. ಅವರ ಕಿವಿ ಹಿಂಡುವ ಮಾತುಗಳನ್ನಾಡಿದ್ದರು. ಇದಕ್ಕೆಲ್ಲಾ ಪ್ರತಿಕ್ರಿಸದ ಸಿ.ಎಂ. ಸಾಹೇಬರು ಗುರುವಾರ ತಮ್ಮ ಮೌನ ಮುರಿದು ವಾಚನ್ನು ತನ್ನ ದುಬೈ ಗೆಳೆಯ ಡಾ.ಗಿರೀಶ್ ಚಂದ್ರ ವರ್ಮಾ ನೀಡಿದ್ದೆಂದು ಮಾಧ್ಯಮ ಹೇಳಿಕೆ ನೀಡಿದ್ದರು.

c m wach

ಸಿ.ಎಂ. ಕೈಯಲ್ಲಿರೋದು ಕದ್ದ ವಾಚ್?!
ಆದರೇ ಶುಕ್ರವಾರ ಮತ್ತೆ ಸುದ್ದಿಗೋಷ್ಟಿ ನಡೆಸಿದ ಮಾಜಿ ಸಿಎಂ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದು ಸಿಎಂ ಕೈಯಲ್ಲಿರುವ ವಾಚ್ ಕದ್ದ ವಾಚ್ ಆಗಿದೆ ಎಂದು ಆರೋಪಿಸಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಬೆಂಗಳೂರಿನಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಯಲ್ಲಿರುವ ವಾಚ್ ಅವರ ಗೆಳೆಯ ಡಾ.ಗಿರೀಶ್ ಚಂದ್ರ ವರ್ಮಾ ರವರು ನೀಡಿದ್ದಲ್ಲಾ. ಅದು ಕುಂದಾಪುರ ಮೂಲದ ಸುಧಾಕರ್ ಶೆಟ್ಟಿ ಎಂಬುವರಿಗೆ ಸೇರಿದ್ದಾಗಿದ್ದು, ಈ ವಾಚ್ 10 ತಿಂಗಳ ಹಿಂದೆ ಕಳೆದು ಹೋಗಿತ್ತು ಹಾಗೂ ಈ ಬಗ್ಗೆ ಮೇ ತಿಂಗಳು 2015ರಲ್ಲಿ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಸದ್ಯ ಸಿಎಂ ಕೈಯಲ್ಲಿರುವ ವಾಚ್ ಇದೇ ಕದ್ದ ವಾಚ್ ಎಂದು ಹೇಳಿದ್ದಾರೆ. ಈ ಬಗ್ಗೆ ಮಾತನಾಡದಂತೆ ಸುಧಾಕರ್ ಶೆಟ್ಟಿಯವರಿಗೂ ಸಿಎಂ ಕಡೆಯಿಂದ ಒತ್ತಡಯಿದೆ ಎಂದು ಆರೋಪಿಸಿದ್ದಾರೆ.

ಯಾರು ಈ ಸುಧಾಕರ ಶೆಟ್ಟಿ?
ಉಡುಪಿಯ ನೈಲಾಡಿಯವರಾದ ಡಾ.ಎನ್. ಸುಧಾಕರ್ ಶೆಟ್ಟಿ ಮೂಲತಃ ಕುಂದಾಪುರದವರು. ಕುಂದಾಪುರದಲ್ಲಿ ಹಲವು ವರ್ಷ ವಾಸ್ತವ್ಯ ಇದ್ದ ಅವರು ಬಳಿಕ ಬೆಂಗಳೂರಿನಲ್ಲಿ ನೆಲೆಸಿದ್ದು ಈಗಲೂ ಕುಂದಾಪುರದೊಂದಿಗೆ ನಂಟು ಹೊಂದಿದ್ದಾರೆನ್ನಲಾಗಿದೆ. ಅಲ್ಲದೇ ಕುಂದಾಪುರದಲ್ಲಿ ಈಗಲೂ ಶೆಟ್ಟಿಯವರ ಕುಟುಂಬ ಸ್ನೇಹಿತರು ಬಹಳಷ್ಟು ಮಂದಿ ಇದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಮಾತನಾಡಿದರೆನ್ನಲಾದ ಸುಧಾಕರ್ ಶೆಟ್ಟಿಯವರು ‘ಇದು ನನ್ನ ವಾಚ್ ಅಲ್ಲ, ಕುಮಾರಸ್ವಾಮಿಯವರು ನನ್ನ ವಿಷಯವನ್ನು ಏಕೆ ಪ್ರಸ್ತಾಪಿಸಿದ್ದರು ಎಂದು ನನಗೆ ತಿಳಿದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಆದರೇ ಸುಧಾಕರ್ ಶೆಟ್ಟಿಯವರ ವಾಚ್ ಕಳವಾಗಿದ್ದು ಮಾತ್ರ ನಿಜ ಎಂಬುದು ಸದ್ಯದ ಸಂಗತಿಯಾಗಿದೆ.

ಒಟ್ಟಿನಲ್ಲಿ ಈ ವಿಚಾರ ಎಲ್ಲೆಡೆ ಸುತ್ತಿಕೊಂಡು ಕುಂದಾಪುರಕ್ಕೆ ಬಂದಿದ್ದು ಮಾತ್ರ ಕರಾವಳಿ ಜನರಲ್ಲೂ ಕುತೂಹಲವನ್ನುಂಟು ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಬಾರೀ ಚರ್ಚೆಯಾಗುತ್ತಿದೆ.

ವರದಿ- ಯೋಗೀಶ್ ಕುಂಭಾಸಿ

Write A Comment