ಕನ್ನಡ ವಾರ್ತೆಗಳು

ಫೆ.27:  ತುಳು ಸಾಧಕರ ಸಾಕ್ಷ್ಯಚಿತ್ರಗಳ ಬಿಡುಗಡೆ

Pinterest LinkedIn Tumblr

ಮ೦ಗಳೂರು ಫೆ.25:  ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತುಳುಭವನ ಉರ್ವಸ್ಟೋರ್, ಇಲ್ಲಿ ಫೆಬ್ರವರಿ 27 ಶನಿವಾರ ದಂದು ಅಪರಾಹ್ನ ಗಂಟೆ 2.30 ಕ್ಕೆ ‘ತುಳು ಸಾಧಕರ ಸಾಕ್ಷ್ಯಚಿತ್ರಗಳ ಬಿಡುಗಡೆ’ ಕಾರ್ಯಕ್ರಮ ನಡೆಯಲಿರುವುದು.

ತುಳು ಅಕಾಡೆಮಿಯು 2015-16 ರ ಸಾಲಿನಲ್ಲಿ ಕ್ರಿಯಾ ಯೋಜನೆಯಲ್ಲಿ ಅವಕಾಶ ಕಲ್ಪಿಸಿ ಕೊಂಡಿರುವಂತೆ ತುಳು ಸಾಹಿತ್ಯಿಕ, ಸಾಂಸ್ಕೃತಿಕ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ ಒಟ್ಟು 14ಮಹನೀಯರ ಕುರಿತಂತೆ ತಲಾ 25 ನಿಮಿಷಗಳ 14 ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದೆ.

ತುಳು ಭಾಷೆ ಮತ್ತು ಸಂಸ್ಕೃತಿಯ ಪೋಷಣೆ ಮತ್ತು ಬೆಳವಣಿಗಾಗಿ ಅನನ್ಯ ಕೊಡುಗೆ ನೀಡಿದವರಾದ ಸಾಹಿತಿ ಡಾ. ಅಮೃತ ಸೋಮೇಶ್ವರ, ಸಾಹಿತಿ ಕವಿ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ, ಜಾನಪದ ವಿದ್ವಾಂಸರಾದ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್, ಯಕ್ಷಗಾನ ಕಲಾವಿದರಾದ ಮಿಜಾರ್ ಅಣ್ಣಪ್ಪ, ಅಳಿಕೆ ರಾಮಯ್ಯ ರೈ, ಜಾನಪದ ಕಲಾವಿದ ಬೆಟ್ಟಂಪಾಡಿ ಚೋಮ, ಖ್ಯಾತ ಭಾಗವತರಾದ ದಾಸರಬೈಲು ಚನಿಯ ನಾಕ್, ನಾಟಕಕಾರ ಮಚ್ಚೇಂದ್ರನಾಥ ಪಾಂಡೇಶ್ವರ, ಸಂಘಟಕರಾದ ಎಸ್. ಯು ಪಣಿಯಾಡಿ, ಸಂಶೋಧಕರಾದ ವೆಂಕಟರಾಜ ಪುಣಿಂಚತ್ತಾಯ, ಪತ್ರಕರ್ತ ಹಾಗೂ ಸಹಕಾರಿ ದುರೀಣರಾದ ಅಮ್ಮೆಂಬಳ ಬಾಳಪ್ಪ, ನಾಟಕ ಮತ್ತು ಚಲನಚಿತ್ರ ನಟ ಕೆ. ಎನ್. ಟೈಲರ್, ಜಾನಪದ ಸಂಶೋಧಕ ಡಾ. ಕೊಯಿರಾ ಬಾಳೆಪುಣಿ, ಜಾನಪದ ಕಲಾವಿದೆ ಕೊರಪ್ಪೊಳು ಇವರುಗಳ ಕುರಿತ ಸಾಕ್ಷ್ಯಚಿತ್ರಗಳು ಬಿಡುಗಡೆಯಾಗಲಿವೆ.

ಕಾರ್ಯಕ್ರಮದ ಉದ್ಘಾಟನೆಯನ್ನು ರಂಗಕರ್ಮಿ ಸದಾನಂದ ಸುವರ್ಣ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಮ್. ಜಾನಕಿ ಬ್ರಹ್ಮಾವರ ವಹಿಸಲಿದ್ದಾರೆ. ಸಾಹಿತ್ಯಾಭಿಮಾನಿಗಳು ಹಾಗೂ ಸಾಧಕರ ಬಂಧು ಮಿತ್ರರು ಈ ಕಾರ್‍ಯಕ್ರಮದಲ್ಲಿ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್‍ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.

Write A Comment