
ಮಂಗಳೂರು, ಫೆ.23: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಾರಿನಲ್ಲಿ ನಿನ್ನೆ ರಾತ್ರಿ ಅತಿವೇಗಿ ಕಾರು ಡಿಕ್ಕಿ ಹೊಡೆದು ಹೆದ್ದಾರಿಯನ್ನು ದಾಟುತ್ತಿದ್ದ ವ್ಯಕ್ತಿಯೋರ್ವರು ದಾರುಣ ಸಾವನ್ನಪ್ಪಿದ್ದಾರೆ.
ಮೃತ ಪಟ್ಟವರು ಕೋಟೆಕಾರು ಮಾಡೂರು ನಿವಾಸಿ ರಾಧಾಕೃಷ್ಣ (40) ಎಂದು ಗುರುತಿಸಲಾಗಿದೆ.
ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿದ್ದ ಅವರು ನಿನ್ನೆ ರಾತ್ರಿ ಕೆಲಸ ಮುಗಿದ ಬಳಿಕ ಕೋಟೆಕಾರಿನಲ್ಲಿ ಮನೆಯೊಂದರ ಆವರಣದಲ್ಲಿ ರಿಕ್ಷಾ ನಿಲ್ಲಿಸಿ ನಡೆದುಕೊಂಡು ಹೆದ್ದಾರಿಯನ್ನು ದಾಟುತ್ತಿದರು. ಈ ವೇಳೆ ಮಂಗಳೂರಿನಿಂದ ಕೇರಳದತ್ತ ಧಾವಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಚಾಲಕನ ನಿಯಂತ್ರಣ ತಪ್ಪಿ ಅವರಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ರಸ್ತೆಗೆಸೆಯಲ್ಪಟ್ಟ ಅವರು ತೀವ್ರವಾಗಿ ಗಾಯಗೊಂಡು ರಸ್ತೆಯಲ್ಲಿಯೇ ಒದ್ದಾಡುತ್ತಿದ್ದರೂ ಯೂರೂ ಅವರ ನೆರವಿಗೆ ಧಾವಿಸಿರಲಿಲ್ಲವೆನ್ನಲಾಗಿದೆ.

ಸುಮಾರು 20 ನಿಮಿಷಗಳ ಬಳಿಕ ಆ ಮಾರ್ಗವಾಗಿ ಬಂದ ಆಟೋರಿಕ್ಷಾ ಚಾಲಕ ಸತೀಶ ಎನ್ನುವವರು ರಿಕ್ಷಾದಲ್ಲಿದ್ದ ಪ್ರಯಾಣಿಕರ ನೆರವಿನಿಂದ ರಾಧಾಕೃಷ್ಣರನ್ನು ಆಸ್ಪತ್ರೆಗೆ ಸಾಗಿಸಿದರಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು. ರಾಧಾಕೃಷ್ಣ ಅವಿವಾಹಿತರಾಗಿದ್ದರೆನ್ನಲಾಗಿದೆ.
ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.