ಕನ್ನಡ ವಾರ್ತೆಗಳು

ಸೌಲಭ್ಯ ವಂಚಿತ ಗ್ರಾಮಸ್ಥರು ಹಾಕಿಲ್ಲ ಓಟು; ಕುಂದಾಪುರದ ಶ್ಯಾಮೆಹಕ್ಲು, ಗೋಳಿಕಾಡು ಜನರಿಗೆ ಬೇಡವಾದ ಮತದಾನ

Pinterest LinkedIn Tumblr

ಉಡುಪಿ: ಅದೊಂದು ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಪುಟ್ಟ ಗ್ರಾಮ. ಆ ಊರಿಗೆ ಸಾಗಬೇಕಂದ್ರೇ ರಿಕ್ಷಾದವರು ಬರೋದೇ ಇಲ್ಲ, ಬಸ್ಸು ಈ ಭಾಗಕ್ಕೆ ಮರೀಚಿಕೆ. ಅನಾರೋಗ್ಯ ಸಮಯಕ್ಕೂ ಯಾರಿಗಾದರೂ ಕರೆ ಮಾಡಬೇಕಂದರೇ ಇಲ್ಲಿ ನೆಟ್‌ವರ್ಕ್ ಸಿಗೋದೆ ಇಲ್ಲ. ಇನ್ನು ಯಾರದ್ದೋ ದ್ವಿಚಕ್ರ ವಾಹನವೇ ಸಿಕ್ಕರೇ ಇವರಿಗೆ ಆಸರೆ, ಇಲ್ಲವಾದರೇ ಹೊಂಡ-ಗುಂಡಿ ರಸ್ತೆಯಲ್ಲಿ ಪಾದಯಾತ್ರೆಯೇ ಇವರಿಗೆ ಗತಿ. ಇಷ್ಟೇಲ್ಲಾ ಸಮಸ್ಯೆಯನ್ನು ಕಳೆದ ಹಲವು ವರ್ಷಗಳಿಂದ ಅನುಭವಿಸುತ್ತಿರುವ ಈ ಮಂದಿ ಈ ಬಾರಿ ಚುನಾವಣೆಯನ್ನು ಬಹಿಷ್ಕರಿಸಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ರು.

ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾಮಪಂಚಾಯತ್ ವ್ಯಾಪ್ತಿಯ ಶ್ಯಾಮೆಹಕ್ಲು ಹಾಗೂ ಗೋಳಿಕಾಡು ಜನರ ಗೋಳಿನ ಕಥೆಯಿದು. ಶತಮಾನಗಳಿಂದಲೂ ಈ ಭಾಗದಲ್ಲಿ ಕೃಷಿ ಹಾಗೂ ಹೈನುಗಾರಿಕೆ ಮೊದಲಾದ ಕೂಲಿ ಕಾರ್ಯಗಳನ್ನು ಮಾಡುತ್ತಾ ಜೀವನ ಸಾಗಿಸುತ್ತಿರುವ ಈ ಮಂದಿ ಒಂದು ದಿನವೂ ನೆಮ್ಮದಿಯಿಂದ ಬದುಕಿಲ್ಲ. ಇಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಕಷ್ಟಜೀವಿಗಳ ಸುಮಾರು ೬೦ಕ್ಕೂ ಅಧಿಕ ಮನೆಗಳಿದ್ದು ಅನೇಕ ವಿದ್ಯಾರ್ಥಿಗಳು ನಿತ್ಯ ನಡೆದುಕೊಂಡೇ ಕಿಲೋಮೀಟರುಗಟ್ಟಲೇ ವಿದ್ಯಾರ್ಜನೆಗಾಗಿ ಸಾಗಬೇಕು. ಒಂದು ಹಂತದಲ್ಲಿ ಶ್ಯಾಮಿಹಕ್ಲು ಗೋಳಿಕಾಡು ಎಂದರೇ ಶಾಪಗ್ರಸ್ಥ ಊರು ಎಂಬ ಹಣೆಪಟ್ಟಿ ಹೊತ್ತಿದೆ. ಇಲ್ಲಿಗೆ ಬರುವ ಅನುದಾನಗಳು ವನ್ಯಜೀವಿ ಸಂರಕ್ಷಣಾ ವಲಯವೆಂಬ ಕಾರಣಕ್ಕೆ ಅಭಿವೃದ್ಧಿಗೆ ಬಳಸಲ್ಪಡದೇ ವಾಪಾಸ್ಸಾಗುತ್ತಿದೆ. ಸಂಪರ್ಕ ರಸ್ತೆ ಸಮಸ್ಯೆ, ಕುಡಿಯುವ ನೀರು, ಮೊಬೈಲ್ ಫೋನ್ ನೆಟ್‌ವರ್ಕ್ ಸಮಸ್ಯೆ, ವಿದ್ಯುತ್ ಸಮಸ್ಯೆ ಒಂದೆಡೆಯಾದರೇ ಬೆಳೆದ ಬೆಳೆಗಳನ್ನು ಕಾಡು ಪ್ರಾಣಿ ಹಾವಳಿಯಿಂದ ರಕ್ಷಿಸುವುದು ದೊಡ್ಡ ಸವಾಲು ಇಲ್ಲಿನ ಜನರಿಗೆ. ಇದೆಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಹಲವು ಬಾರೀ ಸಂಬಂದಪಟ್ಟವರಿಗೆ ಮನವಿ ನೀಡಿದ್ದರೂ ಕೂಡ ಯಾವುದೇ ಪ್ರಯೋಜನವೂ ಈವರೆಗೂ ಆಗಿಲ್ಲ.

ShyaMehaklu_Cunavane_Bycout (10) ShyaMehaklu_Cunavane_Bycout (11) ShyaMehaklu_Cunavane_Bycout (8) ShyaMehaklu_Cunavane_Bycout (5) ShyaMehaklu_Cunavane_Bycout (3) ShyaMehaklu_Cunavane_Bycout (4) ShyaMehaklu_Cunavane_Bycout (7) ShyaMehaklu_Cunavane_Bycout (1) ShyaMehaklu_Cunavane_Bycout (6)

ShyaMehaklu_Cunavane_Bycout (12)

ShyaMehaklu_Cunavane_Bycout (9) ShyaMehaklu_Cunavane_Bycout (13)  ShyaMehaklu_Cunavane_Bycout (2) ShyaMehaklu_Cunavane_Bycout (14)

ನಮ್ಮೂರಿನ ಸಮಸ್ಯೆ ಪರಿಹರಿಸಿ, ಇಲ್ಲವಾದರೇ ಈ ಬಾರೀ ಮತದಾನ ಮಾಡುವುದಿಲ್ಲ ಎಂದು ಇಲ್ಲಿನ ಜನರು ಹತ್ತು ದಿನಗಳ ಹಿಂದಷ್ಟೇ ಚುನಾವಣೆ ಬಹಿಷ್ಕಾರದ ಎಚ್ಚರಿಕೆಯನ್ನು ನೀಡಿದ್ದರೂ ಕೂಡ ಯಾರೊಬ್ಬರಿಂದಲೂ ಇವರಿಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿರಲಿಲ್ಲ, ಕೊನೆಗೂ ದಾರಿ ಕಾಣದ ಇಲ್ಲಿನ ಮಂದಿ ಚುನಾವಣೆಯನ್ನು ಬಹಿಷ್ಕರಿಸಿಯೇ ಬಿಟ್ಟರು. ಮಧ್ಯಾಹ್ನದ ಸುಮಾರಿಗೆ ಪೊಲೀಸರು ತೆರಳಿ ಮತದಾನ ಮಾಡುವಂತೆ ಮನವೊಲಿಸಲು ಯತ್ನಿಸಿದರಾದರೂ ಕೂಡ ಇಲ್ಲಿನ ಮಂದಿ ಮತ ಹಾಕಲು ಒಲ್ಲೆ ಎಂದು ತಮ್ಮ ಪಟ್ಟು ಬಿಗಿಗೊಳಿಸಿದರು. ಕೊನೆಗೂ ಬಂದ ದಾರಿಗೆ ಸುಂಕವಿಲ್ಲ ಎಂದು ಅಲ್ಲಿಂದ ಅಧಿಕಾರಿಗಳು ತೆರಳಿದ್ದರು. ತಹಶಿಲ್ದಾರ್ ಹಾಗೂ ಕುಂದಾಪುರ ಉಪವಿಭಾಗದ ಅಧಿಕಾರಿಗಳು ಇವರನ್ನು ಸಂಪರ್ಕಿಸಿ ಮನವೊಲಿಕೆಗೆ ಯತ್ನಿಸಿ ಸೂಕ್ತ ವ್ಯವಸ್ಥೆಯ ಭರವಸೆ ನೀಡಿದರೂ ಇಲ್ಲಿನ ೧೫೦ಕ್ಕೂ ಅಧಿಕ ಮತದಾರರು ಮತದಾನ ಪ್ರಕ್ರಿಯೆಗೆ ತೆರಳದೇ ತಮ್ಮ ನಿಲುವಿಗೆ ಬದ್ಧರಾಗಿದ್ದರು.

ನಡೆದೇ ಇಲ್ಲಿಂದ ಸಾಗಬೇಕು, ಕಾಡು ಹಾದಿಯ ನಡುವೆ ಮಕ್ಕಳು ತೆರಳುವುದು ಎಷ್ಟು ಅಪಾಯ ಎಂಬುದು ನಮಗೆ ಮಾತ್ರ ಗೊತ್ತಿದೆ, ಸಂಬಂದಪಟ್ಟವರ್‍ಯಾರು ನಮ್ಮೂರಿನತ್ತ ಗಮನಹರಿಸಿಲ್ಲ, ಇಲ್ಲಿನ ಸಮಸ್ಯೆಯಿಂದಾಗಿ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸವನ್ನು ಮಾಡಲಾಗುತ್ತಿಲ್ಲ ಎಂದು ಊರಿನ ಹಿರಿಯ ಮಹಿಳೆ ‘ಕನ್ನಡಿಗ ವರ್ಲ್ಡ್’ ಬಳಿ ತಮ್ಮ ಅಳನ್ನು ತೋಡಿಕೊಂಡರು.

ಅನಾರೋಗ್ಯದ ಸಂದರ್ಭದಲ್ಲಿ ಯಾವ ವಾಹನವೂ ಇಲ್ಲಿಗೆ ಬರೊಲ್ಲ, ಇನ್ನು ಕಷ್ಟ ಪಟ್ಟು ವಾಹನಗಳು ಬರುವುದರೊಳಗೆ ಹೆಚ್ಚಿನ ಅನಾಹುತ ಸಂಭವಿಸಿರುತ್ತದೆ. ನಮಗೆ ಅನುಕೂಲ ಮಾಡಿಕೊಡದ ಇಂತವರನ್ನು ನಾವು ಆರಿಸುವುದಾದರೂ ಯಾಕೆ? ಅದಕ್ಕೆ ಈ ಬಾರೀ ಮತದಾನವನ್ನು ಮಾಡೊಲ್ಲ.
– ರುಕ್ಮಿಣಿ (ಸ್ಥಳೀಯರು)

ಚಿತ್ರ,ವರದಿ- ಯೋಗೀಶ್ ಕುಂಭಾಸಿ

Write A Comment