ಹಾಸನ: ಜಿಲ್ಲೆಯ ಕೆಲವೆಡೆ ಶುಕ್ರವಾರ ರಾತ್ರಿ ಮತದಾನ ಪೂರ್ವ ಘರ್ಷಣೆ ನಡೆದಿರಿವ ಬಗ್ಗೆ ಮಾಹಿತಿ ಲಭಿಸಿವೆ. ಹೊಳೆನರಸೀಪುರದ ಹಳೇಕೋಟೆಯಲ್ಲಿ ಜೆಡಿಎಸ್ ಮುಖಂಡ ಪ್ರಜ್ವಲ್ ರೇವಣ್ಣ ಬೆಂಬಲಿಗರಿಂದ ದಾಂಧಲೆ ನಡೆದಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ. ಘಟನೆಯಲ್ಲಿ ಒಂದು ಕ್ವಾಲೀಸ್ ಕಾರು ಜಖಂಗೊಂಡಿದೆ. ಕಾಂಗ್ರೆಸ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದು, ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥತಿ ತಿಳಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಕಂದಲಿ ಜಿಪಂ ಕ್ಷೇತ್ರ ವ್ಯಾಪ್ತಿಯ ದೊಡ್ಡಮಂಡಿಗನ ಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮನೆಯಲ್ಲಿ ಮದ್ಯ ಹಂಚಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ, ಜೆಡಿಎಸ್ ಶಾಸಕ ಪ್ರಕಾಶ ಹಾಗೂ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿರುವ ಬಗ್ಗೆ ವರದಿಯಾಗಿದೆ.
ನನಗೂ ಘರ್ಷಣೆಗೂ ಸಂಬಂಧವಿಲ್ಲ ಎಂದ ಪ್ರಜ್ವಲ್
ನನಗೂ ಹಳೇಕೋಟೆ ಘರ್ಷಣೆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೊಳೆನರಸೀಪುರದಲ್ಲಿ ಪ್ರಜ್ವಲ್ ರೇವಣ್ಣ ಸ್ಪಷ್ಟನೆ ನೀಡಿದ್ದಾರೆ.
ಘಟನಾ ಸ್ಥಳದಲ್ಲಿ ನಾನು ಇರಲಿಲ್ಲ. ರಾಜಕೀಯ ದುರುದ್ದೇಶದಿಂದ ನನ್ನ ಹೆಸರು ಬಳಕೆ ಮಾಡಲಾಗುತ್ತಿದೆ. ಸೋಲುವ ಭೀತಿಯಿಂದ ಕಾಂಗ್ರೆಸ್ ಹೀಗೆಲ್ಲ ಮಾಡಲು ಹೊರಟಿದೆ. ಕಳೆದ ವಾರ ಗಂಗಾಧರ್ ಎಂಬುವರ ಸಾವಿನಲ್ಲೂ ರಾಜಕೀಯ ಮಾಡಿದ್ದರು ಎಂದು ಗರಂ ಆದ ಪ್ರಜ್ವಲ್, ವಿನಾಕಾರಣ ಈ ಪ್ರಕರಣ ಹಿನ್ನೆಲೆಯಲ್ಲಿ ನನ್ನ ಮೇಲೆ ಆರೋಪ ಹೊರಿಸಲಾಗುತ್ತಿದೆ ಎಂದಿದ್ದಾರೆ.
ನನ್ನ ಮಗನ ವಿರುದ್ಧ ಸುಳ್ಳು ದೂರು, ಭವಾನಿ ರೇವಣ್ಣ ಹೇಳಿಕೆ
ಹಳೇಕೋಟೆ ಘರ್ಷಣೆ ಸಂಬಂಧ ನನಗೆ ಮಾಹಿತಿಯಿಲ್ಲ. ನನ್ನ ಮಗನ ವಿರುದ್ಧ ಸುಳ್ಳು ದೂರುದಾಖಲಿಸಲಾಗಿದೆ. ಕಾಂಗ್ರೆಸ್ನವರು ಸೋಲುವುದು ಗೊತ್ತಿರುವುದರಿಂದ ಪ್ರಚಾರ ಪಡೆದುಕೊಳ್ಳಲು ಇಷ್ಟೆಲ್ಲಾ ಮಾಡುತ್ತಿದ್ದಾರೆ. ಚುನಾವಣೆ ಸಮೀಪಿಸಿದಾಗ ಸುಳ್ಳು ದೂರು ನೀಡುವುದನ್ನು ಹಿಂದಿನಿಂದಲೂ ನೋಡಿದ್ದೇವೆ. ಜಿಲ್ಲೆಯಲ್ಲಿ 35 ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಪಡುವಲಹಿಪ್ಪೆಯಲ್ಲಿ ಭವಾನಿ ರೇವಣ್ಣ ಹೇಳಿದ್ದಾರೆ.