ಮ೦ಗಳೂರು ಫೆ.18 : ಜಿಲ್ಲಾ/ತಾಲೂಕು ಪಂಚಾಯತ್ ಚುನಾವಣೆ ನಿಮಿತ್ತ ನೀತಿ ಸಂಹಿತೆ ಜಾರಿಗೆ ಬಂದ ದಿನಾಂಕದಿಂದ ಇದುವರೆಗೆ ಅಬಕಾರಿ ಇಲಾಖಾ ವತಿಯಿಂದ 2 ಗಾಂಜಾ, 1 ಗೋವಾ ಮದ್ಯ ಮತ್ತು 3 ಅಕ್ರಮ ಭಾರತೀಯ ತಯಾರಿಕಾ ಮದ್ಯ/ಬಿಯರ್ ಸಾಗಾಟ ಪ್ರಕರಣಗಳನ್ನು ಅಬಕಾರಿ ಇಲಾಖಾ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಪತ್ತೆ ಹಚ್ಚಿರುತ್ತಾರೆ.
ಜಲ್ಲಿಗುಡ್ಡೆಯಲ್ಲಿ ಚಂದು ಯಾನೆ ವೆಂಕಟೇಶ್, ಅವಿನಾಶ್ ಪಡೀಲ್ ಮತ್ತು ನೌಫಾಲ್ ಜಲ್ಲಿಗುಡ್ಡೆ ಇವರು ವಾಸದ ಮನೆಯೊಂದರಲ್ಲಿ ಮಾರಾಟದ ಸಲುವಾಗಿ ಇರಿಸಲಾಗಿದ್ದು 800 ಗ್ರಾಂ. ಗಾಂಜಾ ಹಾಗೂ ದಂಬೆಲ್‌ನಲ್ಲಿ ಸೂರಜ್ ಯಾನೆ ಸೂರಿ ಎಂಬಾತನು ತನ್ನ ಅಟೋ ರಿಕ್ಷಾದಲ್ಲಿ ಮಾರಾಟದ ಸಲುವಾಗಿ ಇರಿಸಿಕೊಂಡಿದ್ದ 450 ಗ್ರಾಂ. ಗಾಂಜಾ ಪತ್ತೆ ಹಚ್ಚಲಾಗಿದೆ.
ಅಳಪೆ ರೈಲ್ವೆ ಜಂಕ್ಷನ್ ಬಳಿ ದರ್ಬಾರ್ ಗುಡ್ಡೆ ಎಂಬಲ್ಲಿ 18 ಲೀ. ಗೋವಾ ಮದ್ಯ, ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಪುರುಷರಕಟ್ಟೆ ಸಮೀಪದ ಮುಕ್ವೆ ಎಂಬಲ್ಲಿ ಬಾಲಕೃಷ್ಣ ನಾಯಕ್ ಎಂಬವರ ಅಟೋ ರಿಕ್ಷಾದಲ್ಲಿ ಒಟ್ಟು 8.640 ಲೀ. ಭಾರತೀಯ ತಯಾರಿಕಾ ಮದ್ಯ, ಪುತ್ತೂರು ತಾಲೂಕಿನ ನಿಡ್ಪಳ್ಳಿ ಗ್ರಾಮದ ನುಳಿಯಾಲು ಎಂಬಲ್ಲಿ ಚಂದ್ರಶೇಖರ ಎಂಬವನ ಮನೆಯಲ್ಲಿ ಮಾರಾಟದ ಉದ್ದೇಶದಿಂದ ಇರಿಸಲಾದ 2 ರಟ್ಟಿನ ಪೆಟ್ಟಿಗಳಲ್ಲಿ ಒಟ್ಟು 11.340 ಲೀ. ಭಾರತೀಯ ತಯಾರಿಕಾ ಮದ್ಯ, ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಕನ್ಯಾಡಿ ಎಂಬಲ್ಲಿ ಕೃಷ್ಣ ಗೌಡ ಎಂಬವರ ವಾಸದ ಮನೆಯಲ್ಲಿ ಒಟ್ಟು 11.160 ಲೀ. ಭಾರತೀಯ ತಯಾರಿಕಾ ಮದ್ಯ ಮತ್ತು 2.640 ಲೀ. ಬಿಯರ್ ವಶಪಡಿಸಲಾಗಿದೆ.
2 ಪ್ರಕರಣಗಳಲ್ಲಿ ಆರೋಪಿಗಳು ತಲೆಮರೆಸಿಕೊಂಡಿದ್ದು, ಉಳಿದಂತೆ 4 ಪ್ರಕರಣಗಳಲ್ಲಿ 6 ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಒಟ್ಟಾಗಿ 2 ಅಟೋ ರಿಕ್ಷಾ, 1.250 ಕಿಲೋ ಗಾಂಜಾ, 18 ಲೀ. ಗೋವಾ ಮದ್ಯ, 31.140 ಲೀ. ಮದ್ಯ ಮತ್ತು 2.640 ಲೀ. ಬಿಯರ್ ವಶಪಡಿಸಲಾಗಿದ್ದು, ಅಂದಾಜು ಮೊತ್ತ ಸುಮಾರು ರೂ. 3.55 ಲಕ್ಷ ಆಗಿದೆ ಎಂದು ಅಬಕಾರಿ ಉಪ ಆಯುಕ್ತರ ಪ್ರಕಟಣೆ ತಿಳಿಸಿದೆ.