ಕನ್ನಡ ವಾರ್ತೆಗಳು

ಚುನಾವಣಾ ಸಿದ್ಧತೆ: ವೀಕ್ಷಕರ ಮೆಚ್ಚುಗೆ

Pinterest LinkedIn Tumblr

Election

ಮ೦ಗಳೂರು ಫೆ,17: ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯನ್ನು ವ್ಯವಸ್ಥಿತವಾಗಿ, ಶಿಸ್ತುಬದ್ಧವಾಗಿ ಮತ್ತು ಯಾವುದೇ ರೀತಿಯ ಗೊಂದಲಗಳಿಲ್ಲದೆ ನಡೆಯುವಂತಾಗಲು ಎಲ್ಲರೂ ಶ್ರಮವಹಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗದ ವೀಕ್ಷಕ ಎಸ್.ಬಿ. ಬೊಮ್ಮನಹಳ್ಳಿ ಅವರು ಸೂಚಿಸಿದ್ದಾರೆ.

ಅವರು ಸರ್ಕ್ಯುಟ್‌ಹೌಸ್‌ನಲ್ಲಿ ಚುನಾವಣಾ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಚುನಾವಣೆಯ ಹಿಂದಿನ ದಿನ ಮಸ್ಟರಿಂಗ್ ಕಾರ್ಯ ಹಾಗೂ ನಂತರದ ಡಿಮಸ್ಟರಿಂಗ್ ಕಾರ್ಯವು ಶಿಸ್ತುಬದ್ಧವಾಗಿರಬೇಕು ಎಂದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಸಿದ್ಧತೆಗಳನ್ನು ಸಮರ್ಪಕವಾಗಿ ನಡೆಯುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸಭೆಯಲ್ಲಿ ಮಾತನಾಡಿ, ಚುನಾವಣೆಗೆ 6410 ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಇವರಿಗೆ ಎರಡು ಹಂತದ ತರಬೇತಿ ನೀಡಲಾಗಿದೆ. ಪ್ರತೀ ಮತಗಟ್ಟೆಗೆ ಐವರಂತೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಚುನಾವಣೆಗೆ 189 ಬಸ್ಸು ಸೇರಿದಂತೆ 579 ವಾಹನಗಳು ಅಗತ್ಯವಿದೆ. ಇದಕ್ಕೆ ಈಗಾಗಲೇ ಎಲ್ಲಾ ಸಿದ್ಧತೆ ಮಾಡಲಾಗಿದೆ. ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ 13 ಮತ್ತು ಎಸ್‌ಪಿ ವ್ಯಾಪ್ತಿಯಲ್ಲಿ 16 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ ಎಂದು ಹೇಳಿದರು.

ಮತ ಎಣಿಕೆ ಕಾರ್ಯಗಳಿಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಜಿ.ಪಂ. ಕ್ಷೇತ್ರಗಳ ಮತ ಎಣಿಕೆಗೆ108 ಹಾಗೂ ತಾ.ಪಂ. ಕ್ಷೆತ್ರಗಳ ಮತ ಎಣಿಕೆಗೆ136 ಟೇಬಲ್‌ಗಳನ್ನು ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಚುನಾವಣಾ ವೀಕ್ಷಕರಾದ ಬಸವರಾಜೇಂದ್ರ, ಲೀಲಾವತಿ, ವೆಚ್ಚ ವೀಕ್ಷಕ ಜಿ.ಎಚ್. ಹಿರಣ್ಣಯ್ಯ, ಪೊಲೀಸ್ ವರಿಷ್ಠಾಧಿಕಾರಿ ಡಾ.ಎಸ್.ಡಿ ಶರಣಪ್ಪ, ಅಪರ ಜಿಲ್ಲಾಧಿಕಾರಿ ಕುಮಾರ್, ಡಿಸಿಪಿ ಶಾಂತರಾಜು ಮತ್ತಿತರರು ಇದ್ದರು.

Write A Comment