ಇದೊಂದು ದೊಡ್ಡ ಗೆಲವು. ಮಂಗಳಮುಖಿಯಾದ ಕೆ. ಪ್ರೀತಿಕಾ ಯಾಶಿನಿ ಮತ್ತು 21 ಮಂಗಳಮುಖಿಯರು ತಮಿಳ್ನಾಡು ಪೊಲೀಸ್ ಪಡೆಯಲ್ಲಿ ಸಬ್ ಇನ್‌ಸ್ಪೆಕ್ಟರ್‌ಗಳಾಗಿ ನೇಮಕವಾಗಿದ್ದಾರೆ.
ಪೊಲೀಸ್ ಪಡೆಯಲ್ಲಿ ನೇಮಕ ಆಗುವುದು ಅವರ ಪಾಲಿಗೆ ಸುಲಭವಾಗಿರಲಿಲ್ಲ. 2015ರಲ್ಲಿ ಪ್ರೀತಿಕಾ ಪೊಲೀಸ್ ಹುದ್ದೆಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಹೆಣ್ಣು ಅಥವಾ ಗಂಡು ಕೆಟಗರಿಗೆ ಸೇರದೇ ಇರುವ ಕಾರಣ ಆ ಅರ್ಜಿ ತಿರಸ್ಕೃತಗೊಂಡಿತ್ತು.
ಅರ್ಜಿ ತಿರಸ್ಕೃತಗೊಂಡಿದ್ದನ್ನು ಪ್ರಶ್ನಿಸಿ ಪ್ರೀತಿಕಾ ಮದ್ರಾಸ್ ಹೈಕೋರ್ಟ್ ಮೆಟ್ಟಲು ಹತ್ತಿದರು. ಮದ್ರಾಸ್ ಹೈಕೋರ್ಟ್ ಪ್ರೀತಿಕಾ ಪರವಾಗಿಯೇ ತೀರ್ಪು ನೀಡಿತು. ಪ್ರೀತಿಕಾ ಪೊಲೀಸ್ ಪಡೆಗೆ ನೇಮಕವಾಗಲು ಲಿಖಿತ ಪರೀಕ್ಷೆ, ಶಾರೀರಿಕ ಮತ್ತು ವೈದ್ಯಕೀಯ ಪರೀಕ್ಷೆಯನ್ನು ಪಾಸು ಮಾಡಿದ್ದೂ ಆಯ್ತು. ಹೀಗೆ ಪೊಲೀಸ್ ಪಡೆಯಲ್ಲಿಯೂ ಮುಂಗಳಮುಖಿಯರಿಗೆ ಅವಕಾಶ ನೀಡಬೇಕೆಂದು ಹೈಕೋರ್ಟ್ ತಮಿಳ್ನಾಡು ಸರ್ಕಾರಕ್ಕೆ ಆದೇಶ ನೀಡಿತು.
ಈ ಆದೇಶದ ಪ್ರಕಾರ 2016 ಫೆ. 15ರಂದು ಸಿಟಿ ಪೊಲೀಸ್ ಕಮಿಷನರ್ ಸ್ಮಿತ್ ಸರನ್ ಪ್ರೀತಿಕಾ ಸೇರಿದಂತೆ 22 ಮಂಗಳಮುಖಿಯರಿಗೆ ಎಸ್ ಐ ಹುದ್ದೆಗೆ ನೇಮಕವಾಗುವಂತೆ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಸುದ್ದಿಮಾಧ್ಯಮದೊಂದಿಗೆ ಮಾತನಾಡಿದ ಪ್ರೀತಿಕಾ, ಮಂಗಳಮುಖಿಯರಿಗೆ ವಿದ್ಯಾಭ್ಯಾಸ ಮತ್ತು ನೌಕರಿ ಸಿಗುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇನೆ. ಅದೇ ವೇಳೆ ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಡುತ್ತೇನೆ ಎಂದು ಹೇಳಿದ್ದಾರೆ.