
ಮಂಗಳೂರು: ಕಾಂಕ್ರೀಟ್ ಮಿಕ್ಸಿಂಗ್ನ ಬೃಹತ್ ಗಾತ್ರದ ಲಾರಿಯೊಂದು ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಧರೆಗುರುಳಿ ಸ್ವಲ್ಪ ಹೊತ್ತು ಆತಂಕ ಸೃಷ್ಟಿಸಿದ ಘಟನೆ ಇಂದು ಕದ್ರಿ ಕಂಬಳ ಕ್ರಾಸ್ ರಸ್ತೆಯ ಪಿಂಟೋಸ್ ಲೇನ್ ಬಳಿ ಸಂಭವಿಸಿದೆ.

ಈ ದಾರಿಯಾಗಿ ಚಲಿಸುತ್ತಿದ್ದ ಕಾಂಕ್ರೀಟ್ ಮಿಕ್ಸಿಂಗ್ನ ಬೃಹತ್ ಗಾತ್ರದ ಲಾರಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿ ಲಾರಿಯ ಮೇಲೆ ಬಿದ್ದಿದೆ. ಮುಂಜಾಗ್ರತಾ ಕ್ರಮವಾಗಿ ಕೂಡಲೇ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ಜೊತೆಗೆ ಈ ಪರಿಸರದ ವಿದ್ಯುತ್ ಸಂಪರ್ಕವನ್ನು ಕೂಡ ತಕ್ಷಣ ಕಡಿತಗೊಳಿಸಲಾಯಿತು. ಈ ಮೂಲಕ ಯಾವುದೇ ಅನಾಹುತ ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಯಿತು.

ವಿದ್ಯುತ್ ಕಡಿತಗೊಳಿಸಿದ ಪರಿಣಾಮ ಈ ಪರಿಸರದ ಜನರು ಸಂಜೆಯವರೆಗೆ ವಿದ್ಯುತ್ ಇಲ್ಲದೇ ಚಡಪಡಿಸುವಂತಾಯಿತು. ದುರಸ್ತಿಕಾರ್ಯ ತ್ವರಿತಗತಿಯಲ್ಲಿ ಸಾಗುತ್ತಿದ್ದು, ಸಂಜೆ 8 ಗಂಟೆಯೊಳಗೆ ದುರಸ್ತಿಕಾರ್ಯ ಪೂರ್ಣಗೊಳ್ಳುವ ಭರವಸೆಯನ್ನು ಮೆಸ್ಕಾಂ ಇಲಾಖೆಯ ಅಧಿಕಾರಿಗಳು ನೀಡಿದ್ದಾರೆ.
ಅಪಘಾತ ನಡೆದ ತಕ್ಷಣ ಸ್ಥಳೀಯರ ಧರ್ಮದೇಟಿಗೆ ಹೆದರಿ ಘಟನಾ ಸ್ಥಳದಿಂದ ಲಾರಿ ಚಾಲಕ ಪರಾರಿಯಾಗಿದ್ದಾನೆ.