ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿದ ಗ್ಯಾಸ್ ತುಂಬಿದ ಟ್ಯಾಂಕರೊಂದು ಫರಂಗಿಪೇಟೆ ಸಮೀಪದ ತುಂಬೆ ಬಳಿಯ ತಿರುವಿನಲ್ಲಿ ರಸ್ತೆಯಲ್ಲಿ ಮಗುಚಿ ಬಿದ್ದ ಪರಿಣಾಮ ಚಾಲಕ ಮೃತ ಪಟ್ಟ ಘಟನೆ ಇಂದು ಮಧ್ಯಾಹ್ನ ಸುಮಾರು 4 ಗಂಟೆಯ ವೇಳೆಗೆ ಸಂಭವಿಸಿದೆ. ಚಾಲಕನನ್ನು ತಮಿಳುನಾಡಿನ ಜಯಪ್ರಕಾಶ್ ( 24) ಎಂದು ಗುರುತಿಸಲಾಗಿದೆ.
ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಈ ಟ್ಯಾಂಕರ್ ,ಬಂಟ್ವಾಳ ತಾಲೂಕಿನ ತುಂಬೆ ಬಿ.ಎ. ಕಾಲೆಜಿನ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಪಲ್ಟಿಯಾಗಿದೆ.ಟ್ಯಾಂಕರ್ ಪಲ್ಟಿಯಾದ ಜಾಗ ಜನನಿಬಿಡ ಪ್ರದೇಶವಾಗಿದ್ದು, ಅನಿಲ ಸೋರಿಕೆಯಾಗದಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಆದರೆ ಟ್ಯಾಂಕರ್‌ನಲ್ಲಿದ್ದ ಡಿಸೆಲ್ ಸೋರಿಕೆಯಾಗಿ ರಸ್ತೆಯಲ್ಲಿ ಹರಿದಿದೆ. ಸ್ಥಳದಲ್ಲಿ ಕೆಲಹೊತ್ತು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಸಮಸೈಯುಂಟಾಯಿತು. ಬಳಿಕ ಪೊಲೀಸರು ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿ ಕೊಟ್ಟರು.
ಸ್ಥಳಕ್ಕೆ ಸಂಚಾರಿ ಠಾಣೆ, ಗ್ರಾಮಾಂತರ ಠಾಣೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.