ಮಂಗಳೂರು,ಫೆ.12: ಯೋಧ ಮೋಷನ್ ಪಿಕ್ಚರ್‍ಸ್ ಲಾಂಛನದಲ್ಲಿ ಸೂರ್ಯ ಮೆನನ್ ನಿರ್ದೇಶನದಲ್ಲಿ ರಂಜನ್ ಶೆಟ್ಟಿ ಹಾಗೂ ಸೂರ್ಯ ಮೆನನ್ ನಿರ್ಮಾಣದಲ್ಲಿ ತಯಾರಾದ “ಕುಡ್ಲ ಕೆಫೆ’ ತುಳು ಚಲನ ಚಿತ್ರದ ಬಿಡುಗಡೆ ಸಮಾರಂಭವು ಶುಕ್ರವಾರದಂದು ಮಂಗಳೂರಿನ ಜ್ಯೋತಿ ಟಾಕೀಸ್‌ನಲ್ಲಿ ಬಿಡುಗಡೆಗೊಂಡಿತು.
ಕುಡ್ಲಕೆಫೆ ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ 12 ಟಾಕೀಸ್‌ಗಳಲ್ಲಿ ತೆರೆ ಕಂಡಿದೆ. ಮಂಗಳೂರಿನಲ್ಲಿ ಜ್ಯೋತಿ, ಬಿಗ್ ಸಿನೆಮಾಸ್, ಸಿನಿಪೊಲಿಸ್, ಪಿವಿಆರ್, ಪುತ್ತೂರಿನಲ್ಲಿ ಅರುಣಾ, ಮಣಿಪಾಲದಲ್ಲಿ ಐನಾಕ್ಸ್, ಬಿ.ಸಿ.ರೋಡ್‌ನಲ್ಲಿ ನಕ್ಷತ್ರ, ಮೂಡಬಿದ್ರೆಯಲ್ಲಿ ಅಮರಶ್ರೀ, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಸುರತ್ಕಲ್‌ನಲ್ಲಿ ನಟರಾಜ್ ಸುಳ್ಯದಲ್ಲಿ ಸಂತೋಷ್, ಬೆಳ್ತಂಗಡಿಯಲ್ಲಿ ಭಾರತ್ ಚಿತ್ರ ಮಂದಿರದಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಕಲ್ಲಡ್ಕ ಪ್ರಭಾಕರ ಭಟ್ ಉದ್ಘಾಟಿಸಿ, ತುಳು ಭಾಷಾ ಬೆಳವಣಿಗೆಗೆ ತುಳು ಸಿನಿಮಾಗಳ ಕೊಡುಗೆ ಅನನ್ಯವಾದುದು. ನಮ್ಮ ಭಾಷೆ, ಸಂಸ್ಕೃತಿ, ಆಚಾರ -ವಿಚಾರಗಳನ್ನು ತುಳು ಸಿನಿಮಾದಲ್ಲಿ ಪ್ರತಿಬಿಂಬಿಸುವ ಕೆಲಸ ನಡೆಯಬೇಕು. ಆ ನಿಟ್ಟಿನಲ್ಲಿ ತುಳು ಚಿತ್ರರಂಗ ಸಾಗುತ್ತಿದೆ ಎಂದವರು ತಿಳಿಸಿದರು.
ಶ್ರೀ ದೇವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಮಾತನಾಡಿ ಕುಡ್ಲಕೆಫೆ ಸಿನಿಮಾದಲ್ಲಿ ಕ್ರೀಡೆಗೆ ಕೂಡಾ ಹೆಚ್ಚಿನ ಒತ್ತು ನೀಡಿದ್ದು ಪ್ರಶಂಸನೀಯ. ತುಳುವಿನಲ್ಲಿ ಕ್ರೀಡೆಯನ್ನು ಕಥಾವಸ್ತುವನ್ನಾಗಿಟ್ಟುಕೊಂಡ ಸಿನಿಮಾಗಳು ಬಂದಿಲ್ಲ. `ಕುಡ್ಲ ಕೆಫೆ’ ಕಬಡ್ಡಿ ಹಿನ್ನಲೆಯಾಗಿದ್ದು ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಬಹುದು. ಇಂತಹ ಸಿನಿಮಾಗಳನ್ನು ಪ್ರೇಕ್ಷಕರು ಪ್ರೋತ್ಸಾಹಿಸಬೇಕೆಂದು ಅವರು ತಿಳಿಸಿದರು.
ಸಮಾರಂಭದಲ್ಲಿ ದ.ಕ.ಜಿಲ್ಲಾ ಕಬಡ್ಡಿ ಅಸೋಶಿಯೇಶನ್‌ನ ಗೌರವಾಧ್ಯಕ್ಷ ಅಮರನಾಥ ರೈ, ಚಂದ್ರ ಶೇಖರ ರೈ, ಪುರುಷೋತ್ತಮ ಪೂಜಾರಿ, ರತನ್ ಶೆಟ್ಟಿ ಲಕ್ಷ್ಮಣ್ ಶೆಟ್ಟಿ, ಕಲಾವಿದರಾದ ನವೀನ್ ಡಿ ಪಡೀಲ್, ನಿರ್ಮಾಪಕರಾದ ರಂಜನ್ ಶೆಟ್ಟಿ, ಕುಡ್ಲ ಸಾಯಿಕೃಷ್ಣ, ಕಿಶೋರ್ ಕೊಟ್ಟಾರಿ, ಜ್ಯೋತಿಷ್ ಶೆಟ್ಟಿ, ಸುನಯನ ರೋಹಿತ್ ಶೆಟ್ಟಿ, ಶೈನ್ ಶೆಟ್ಟಿ, ರಘು ಪಾಂಡೇಶ್ವರ್, ಬಂಟ್ಬಾಳ ಜಯರಾಮ ಆಚಾರ್ಯ ಉಪಸ್ಥಿತರಿದ್ದರು. ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಸಿನಿ ಪ್ರೇಕ್ಷಕರ ಶ್ಲಾಘನೆಗೆ ಪಾತ್ರವಾಗಿರುವ ಕುಡ್ಲಕೆಫೆ ಚಿತ್ರ ಕಬಡ್ಡಿ ಹಿನ್ನೆಲೆಯಲ್ಲಿ ಸಾಗುತ್ತಿದೆ. ಹೀಗಾಗಿ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂದು ಚಿತ್ರದ ನಿರ್ಮಾಪಕ ರಂಜನ್ ಶೆಟ್ಟಿ ತಿಳಿಸಿದರು.
ಶಾಲಾ ದಿನಗಳಲ್ಲಿ ಸ್ನೇಹಿತರ ಗುಂಪೊಂದು ಸೇರುತ್ತಿದ್ದ ಹೊಟೇಲ್ ಹಲವು ವರ್ಷಗಳ ನಂತರ ಸಂಕಷ್ಟಕ್ಕೆ ಸಿಲುಕುತ್ತದೆ. ಬಾಲ್ಯಾವಸ್ಥೆಯಲ್ಲಿ ತಮ್ಮ ನೆಚ್ಚಿನ ಅಡ್ಡವಾಗಿದ್ದ `ಕುಡ್ಲಕೆಫೆ’ಯನ್ನು ಉಳಿಸಲು ನಿರ್ಧರಿಸಿದ ಬಾಲ್ಯ ಸ್ನೇಹಿತರು ಕಬಡ್ಡಿ ಪಂದ್ಯ ಆಯೋಜಿಸುತ್ತಾರೆ. ಹೀಗೆ ಕಥೆ ವಿವಿಧ ಹಂತಗಳನ್ನು ಸಾಗಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ ಎಂದು ರಂಜನ್ ಶೆಟ್ಟಿ ವಿವರಿಸಿದರು.