ಕನ್ನಡ ವಾರ್ತೆಗಳು

ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ : ಡಾನ್ಸ್ ಶಿಕ್ಷಕ ಬಂಧನ

Pinterest LinkedIn Tumblr

bajpe_rape_accsed

ಮಂಗಳೂರು, ಫೆ.11 : ನಾಲ್ವರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ಆರೋಪದಲ್ಲಿ ಪೊಲೀಸರು ಡಾನ್ಸ್ ಶಿಕ್ಷಕನೊಬ್ಬನನ್ನು ಬಂಧಿಸಿದ್ದಾರೆ. ಈ ಘಟನೆ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಂಧಿತ ಆರೋಪಿ, ಡಾನ್ಸ್ ಶಿಕ್ಷಕ ಬಾಬು ಎಂದು ಹೆಸರಿಸಲಾಗಿದೆ. ಈತ ಸರಕಾರಿ ಶಾಲೆಯೊಂದರ 12 ವರ್ಷದ ಇಬ್ಬರು ಮತ್ತು 13 ವರ್ಷದ ಮತ್ತಿಬ್ಬರು ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯಾಗಿದ್ದಾನೆ.

ಈತ ಬಜಪೆ ಶಾಲೆಯಲ್ಲಿ ಮಂಗಳವಾರ ಸಂಜೆ ‘ಉತ್ತಮ ಮತ್ತು ಕೆಟ್ಟ ಸ್ಪರ್ಶ’ ವಿಷಯದಲ್ಲಿ ಕಾರ್ಯಾಗಾರ ನಡೆಸಿದ್ದು, ಈ ಕಾರ್ಯಾಗಾರದಲ್ಲಿ ಬಾಬು ತನ್ನ ಲೈಂಗಿಕ ಚಪಲ ತೀರಿಸಿಕೊಂಡಿದ್ದ ಎಂದು ಆರೋಪಿಸಲಾಗಿದೆ.

ಸಾಮಾಜಿಕ ಚಟುವಟಿಕೆಯಲ್ಲಿ ಒಳಗೊಂಡಿರುವ ಟ್ರಸ್ಟೊಂದರ ಸಂಪನ್ಮೂಲ ವ್ಯಕ್ತಿಗಾಗಿ ಸದ್ರಿ ಶಾಲೆಯಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಸಂಪನ್ಮೂಲ ವ್ಯಕ್ತಿ ಕಾರ್ಯಾಗಾರದ ವೇಳೆ ನಾಲ್ವರು ಬಾಲಕಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಎಂದು ವಿಚಾರಣೆ ವೇಳೆ ತಿಳಿಸಿದ್ದರೆಂದು ಮಹಿಳಾ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂಪನ್ಮೂಲ ವ್ಯಕ್ತಿಯಾಗಿದ್ದ ಡಾನ್ಸ್ ಶಿಕ್ಷಕ ಬಾಬು ಅನವಶ್ಯಕವಾಗಿ ನಾಲ್ವರು ಬಾಲಕಿಯರ ಮೈಮೇಲೆ ಕೈಯಾಡಿಸಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರಲಾಗಿದೆ.

ಡಾನ್ಸ್ ಶಿಕ್ಷಕನ ಈ ಕೃತ್ಯ ಬೆಳಕಿಗೆ ಬರುತ್ತಲೇ ಶಾಲಾ ಸಿಬ್ಬಂದಿ ಬಜ್ಪೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ಈ ನಾಲ್ವರು ಬಾಲಕಿಯರು ತಮ್ಮ ಮೇಲೆ ಬಾಬು ನಡೆಸಿದ ಲೈಂಕಿಕ ಕಿರುಕುಳ ವಿವರಿಸಿದ್ದಾರೆ.

ಶಾಲಾ ಸಿಬ್ಬಂದಿ ನೀಡಿದ ದೂರನ್ನಾಧರಿಸಿ ಬಾಬುನನ್ನು ಬಂಧಿಸಲಾಗಿದೆ ಎಂದು ಬಜ್ಪೆ ಪೊಲೀಸರು ತಿಳಿಸಿದ್ದಾರೆ. ಆರೋಪಿಯ ವಿರುದ್ಧ ಮಕ್ಕಳಿಗೆ ಲೈಂಗಿಕ ಕಿರುಕುಳ ವಿರುದ್ಧ ರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Write A Comment