ಉಳ್ಳಾಲ. ಫೆ, 09: ಸ್ನೇಹಿತರ ನಡುವೆ ಆಟದ ವಿಚಾರದಲ್ಲಿ ನಡೆದ ಮಾತಿನ ಚಕಮಕಿಯಿಂದ ಪರಸ್ಪರ ಹೊಡೆದಾಡಿಕೊಂಡ ಪರಿಣಾಮ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ಸಂಜೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪಂಡಿತ್‌ಹೌಸಿನ ಪ್ರಕಾಶ್‌ನಗರದಲ್ಲಿ ಸಂಭವಿಸಿದೆ.
ಪ್ರಕಾಶ್‌ನಗರ ಮೊಹಮ್ಮದ್ ಆಬಿದ್(25) ಹಾಗೂ ಸ್ಥಳೀಯ ನಿವಾಸಿ ಸುನಿಲ್(23)ಪರಸ್ಪರ ಹೊಡೆದಾಡಿಕೊಂಡು ಗಾಯಗೊಂಡು ಒಬ್ಬಾತ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ಘಟನೆ ನಡೆದಿದೆ.
ಘಟನೆಯ ವಿವರ: ಭಾನುವಾರ ಸಂಜೆ ಪ್ರಕಾಶ್ ನಗರದ ಹಲವು ಮಂದಿ ಕ್ರಿಕೆಟ್ ಮೈದಾನದಲ್ಲಿ ಹೌಸಿ ಹೌಸಿ ಆಟವಾಡುತ್ತಿದ್ದರು. ಆಟದ ಸಂಧರ್ಭ ಜೊತೆಯಾಗಿ ಆಟವಾಡುತ್ತಿದ್ದ ಕಲಂದರ್ ಮತ್ತು ವಜ್ರೇಶ್ ಯಾನೆ ಚಿನ್ನು ಎಂಬವರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಬಳಿಕ ಅಲ್ಲಿ ಸೇರಿದ ಯುವಕರು ಅವರನ್ನು ಸಮಾಧಾನಪಡಿಸಿದರು.
ಒಂದು ಹಂತದಲ್ಲಿ ಘಟನೆ ಅಲ್ಲಿಗೆ ಸುಖಾಂತ್ಯಗೊಂಡಿದ್ದರೂ ಸೋಮವಾರ ಬೆಳಗ್ಗೆ ಕಲಂದರ್‌ನನ್ನು ಸುನಿಲ್ ಎಂಬಾತ ಪ್ರಶ್ನಿಸಿದ್ದು, ವಿಷಯ ಅರಿತುಕೊಂಡ ಕಲಂದರ್ ಗೆಳೆಯ ಮಹಮ್ಮದ್ ಅಬೀದ್ ಸೋಮವಾರ ಸಂಜೆ ಸುನಿಲ್‌ನನ್ನು ಪ್ರಶ್ನಿಸಲು ಮುಂದಾದಾಗ ಇಬ್ಬರ ನಡುವೆ ಜಗಳ ನಡೆದು ಪರಸ್ಪರ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಘಟನೆಯಿಂದ ಗಾಯಗೊಂಡಿರುವ ಇಬ್ಬರನ್ನು ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಿಸಲಾಗಿದೆ. ಸ್ನೇಹಿತರ ನಡುವೆ ನಡೆದ ಗಲಾಟೆ ಕೋಮು ಬಣ್ಣಕ್ಕೆ ತಿರುಗಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಉಳ್ಳಾಲ ಪೊಲೀಸರು ತೊಕ್ಕೊಟ್ಟಿನ ಕೆಲವು ಸೂಕ್ಷ್ಮ ಪ್ರದೇಶ ಹಾಗೂ ಆಸ್ಪತ್ರೆಯ ಮುಂಭಾಗದಲ್ಲಿ ಬಿಗು ಬಂದೋಬಸ್ತು ಕೈಗೊಂಡಿದ್ದಾರೆ. ಪ್ರಕರಣದ ಕುರಿತಾಗಿ ಉಳ್ಳಾಲ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.