
ಮಂಗಳೂರು, ಫೆ.9 : ಕೇಂದ್ರ ಸರಕಾರವು ಜಾರಿಗೆ ತರಲುದ್ದೇಶಿಸಿರುವ ಕೊಟ್ಪಾ ಕಾಯ್ದೆಯನ್ನು ಪ್ರತಿಭಟಿಸಿ ‘ಬೀಡಿ ಕೈಗಾರಿಕೆ ಹಾಗೂ ಕಾರ್ಮಿಕರ ಹಿತರಕ್ಷಣಾ ಸಮಿತಿಯ ಅಶ್ರಯದಲ್ಲಿ ಇಂದು ಮಂಗಳೂರಿನಲ್ಲಿ ಬೀಡಿ ಕೈಗಾರಿಕೆಯಲ್ಲಿ ದುಡಿಯುವ ಕಾರ್ಮಿಕರೆಲ್ಲರೂ ಒಟ್ಟು ಸೇರಿ ಬೃಹತ್ ಪ್ರತಿಭಟನೆ ನಡೆಸಿದರು.


ಇಂದು ಬೆಳಿಗ್ಗೆ ನಗರದ ಅಂಬೇಡ್ಕರ್ ವೃತ್ತ (ಜ್ಯೋತಿ ವೃತ್ತ) ದಿಂದ ನೆಹರೂ ಮೈದಾನದ ತನಕ ಬೀಡಿ ಕಾರ್ಮಿಕರು ಮೆರವಣಿಗೆ ನಡೆಸಿದರು. ಬಳಿಕ ನೆಹರೂ ಮೈದಾನದಲ್ಲಿ ಪ್ರತಿಭಟನ ಸಭೆ ನಡೆಯಿತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅವರು, ದೇಶದಲ್ಲಿ 30 ಲಕ್ಷ ಮಂದಿ ತಂಬಾಕು ಬೆಳೆಗಾರರು ಹಾಗೂ 20 ಲಕ್ಷ ಮಂದಿ ಆದಿವಾಸಿಗಳು ಬೀಡಿ ಎಲೆಯನ್ನು ಸಂಗ್ರಹಿಸುವುದನ್ನೇ ಜೀವನಾಧಾರವಾಗಿ ನಂಬಿದ್ದಾರೆ. ಇದರ ಜತೆಗೆ 80 ಲಕ್ಷ ಮಂದಿ ಕಾರ್ಮಿಕರು ಬೀಡಿ ಸುತ್ತುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಈ 1.3 ಕೋಟಿ ಮಂದಿಗೆ ಬೀಡಿ ಉದ್ಯಮ ಹೊರತುಪಡಿಸಿದರೆ ಪರ್ಯಾಯ ಜೀವನಾಧಾರ ಇಲ್ಲ. ತಂಬಾಕು ವಿರೋಧಿ ನೀತಿಯಿಂದಾಗಿ ಈಗಾಗಲೇ ಇವರ ಜೀವನದ ಹಕ್ಕು ಕಸಿದುಕೊಂಡಂತಾಗಿದೆ. ಆದ್ದರಿಂದ ಇಂಥ ಯಾವುದೇ ಅವೈಜ್ಞಾನಿಕ ನೀತಿ ಜಾರಿಗೊಳಿಸುವ ಮುನ್ನ ಉತ್ತಮ ಚಿಂತನೆಯ ನೀತಿಚೌಕಟ್ಟಿನಲ್ಲಿ ಅವರ ಜೀವನಾಧಾರವನ್ನು ರಕ್ಷಿಸಬೇಕು ಎಂದು ಹೇಳಿದರು.

ಕಾರ್ಮಿಕ ವಿರೋಧಿ ಹಾಗೂ ಅವೈಜ್ಞಾನಿಕ ತಂಬಾಕು ವಿರೋಧಿ ನೀತಿಯಿಂದ ಬೀಡಿ ಸುತ್ತುವುದನ್ನೇ ಜೀವನಾಧಾರವಾಗಿ ನಂಬಿಕೊಂಡ ದೇಶದ 13 ದಶಲಕ್ಷ ಮಂದಿಯ ಬದುಕು ಬೀದಿಗೆ ಬಿದ್ದಿದೆ. ಕಾರ್ಮಿಕ ವಿರೋಧಿ ನೀತಿಯಿಂದ ಬದುಕುವ ಹಕ್ಕನ್ನು ಕಸಿದುಕೊಂಡಂತಾಗಿದೆ. ಕೋಟ್ಯಂತರ ಬೀಡಿ ಕಾರ್ಮಿಕರು ಹಾಗೂ ತಂಬಾಕು ಬೆಳೆಗಾರರ ಜೀವನಾಧಾರವನ್ನೇ ಕಸಿದುಧಿಕೊಳ್ಳುವ “ತಂಬಾಕು ವಿರೋಧಿ ನೀತಿ’ ಕೈಬಿಡಬೇಕು ಹಾಗೂ ಪರ್ಯಾಯ ಜೀವನಾಧಿಧಾರ ಕಲ್ಪಿಸಬೇಕು. ಸರ್ಕಾರ ಈ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ಹೊಸದಿಲ್ಲಿಗೆ ಪ್ರತಿಭಟನ ಚಲೋ ಪಾದಯಾತ್ರೆಯನ್ನು ಬೀಡಿ ಕಾರ್ಮಿಕರು ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಪ್ರತಿಭಟನ ಸಭೆಯಲ್ಲಿ ಎಐಟಿಯುಸಿ ಮುಖಂಡರಾದ ಸೀತಾರಾಂ ಬೆರಿಂಜ, ಎಚ್.ವಿ. ರಾವ್, ಹಿಂದ್ ಮಜ್ದೂರ್ ಸಭಾ ಕಾರ್ಯದರ್ಶಿ ಮಹ್ಮದ್ ರಫಿ, ಬೀಡಿ ಗುತ್ತಿಗೆದಾರರ ಸಂಘದ ಕೆ.ಅಬ್ದುಲ್ ಖಾದರ್ ಮೊದಲಾದವರು ಮಾತನಾಡಿದರು.
ಎಐಟಿಯುಸಿ, ಸಿಐಟಿಯು, ಬಿಎಂಎಸ್, ಎಚ್ಎಂಎಸ್ ಹಾಗೂ ಬೀಡಿ ಗುತ್ತಿಗೆದಾರರ ಸಂಘ ಜಂಟಿಯಾಗಿ ಈ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.