
ಮೊಗವೀರ ಮಾಸಿಕದ ಅಮೃತ ಸಂಭ್ರಮ ಮೊಗವೀರ ಪತ್ರಿಕೆಯಿಂದ ಒಂದು ಪವಾಡ – ಬರಗೂರು ರಾಮಚಂದ್ರಪ್ಪ
ವರದಿ : ಈಶ್ವರ ಎಂ. ಐಲ್/ ಚಿತ್ರ,: ದಿನೇಶ್ ಕುಲಾಲ್
ಮುಂಬಯಿ : ನಗರದ ಹಿರಿಯ ಜಾತೀಯ ಸಂಸ್ಥೆ ಮೊಗವೀರ ವ್ಯವಸ್ಥಾಪಕ ಮಂಡಳಿಯ ಮುಖವಾಣಿ ’ಮೊಗವೀರ’ ಪತ್ರಿಕೆಯ ಅಮೃತ ಸಂಭ್ರಮ ಪೆ. 7 ರಂದು ಅಂಧೇರಿ ಪಶ್ಚಿಮ ಎಂ.ವಿ.ಎಂ. ಶಿಕ್ಷಣ ಸಂಸ್ಥೆಯಲ್ಲಿನ ಶಾಲಿನಿ ಜಿ. ಶಂಕರ್ ಕನ್ವೆನ್ಶನ್ ಸೆಂಟರಿನಲ್ಲಿ ನಾಡಿನ ಖ್ಯಾತ ಸಾಹಿತಿ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ದೀಪ ಬೆಳಗಿಸಿ 75ನೆಯ ವರ್ಷದ ವಿಶೇಷ ಸಂಚಿಕೆಯನ್ನು ಲೋಕಾರ್ಪಣೆ ಗೊಳಿಸಿದರು.
ಬಳಿಕ ಬರಗೂರು ಅವರು ಮಾತನಾಡುತ್ತಾ ಮೊಗವೀರ ಪತ್ರಿಕೆಯು 75 ವರ್ಷಗಳ ತನಕ ಉಳಿದಿದ್ದು ಮೊಗವೀರ ವ್ಯವಸ್ಥಾಪಕ ಮಂಡಳಿಗೆ ಅಭಿನಂದನೆ ಸಲ್ಲಿಸಬೇಕಾಗಿದೆ. ಒಂದು ನಿಯತಕಾಲಿಕೆ ದೀರ್ಘ್ಹಕಾಲ ಉಳಿಯಬೇಕಾದರೆ ಲೇಖಕರು ಅದರ ಬಂಡವಾಳವಾಗಿದೆ. ಜಾತ್ಯಾತೀತ ನಿಲುವನ್ನು ಈ ಪತ್ರಿಕೆ ಇಟ್ಟುಕೊಂಡಿದೆ. ಕಾಲ್ಪನಿಕ ಶಕ್ತಿಗಳಿಗಿಂತ ವಿವೇಕವನ್ನು ಬೆಳೆಸುವಂತ ಕ್ರಿಯೆಯನ್ನು ಮೊಗವೀರದಂತಹ ಪತ್ರಿಗಳು ಮಾಡಿದೆ. ಇಂತಹ ಪತ್ರಿಕೆಗಳಿಗೆ ಬಹಳ ದೊಡ್ಡ ಬಂಡವಾಳಬೀಕಾಗಿಲ್ಲ. ದಿನಪತ್ರಿಕೆ ಮತ್ತು ವಾರಪತ್ರಿಕೆಗೆ ದೊಡ್ಡ ಬಂಡವಾಳ ಬೇಕಾಗಿದೆ. ಇಂತಹ ಪತ್ರಿಕೆಯನ್ನು ನಡೆಸುವವರಿಗೆ ಬದ್ದತೆ ಬೇಕು. ಅದು ಮೊಗವೀರ ವ್ಯವಸ್ಥಾಪಕ ಮಂಡಳಿಯವರಲ್ಲಿದೆ. ಮೊಗವೀರ ಮಾಸಿಕವು ಮುಂಬಯಿ ಕನ್ನಡಿಗರ ಸಾಹಿತ್ಯದ ಮುಖ ಪುಟವಾಗಿದೆ. ದೇಶದ ಯಾವುದೇ ಮೂಲೆಯಲ್ಲಿರುವ ಕನ್ನಡಿಗರಿಗಿಂತ ಮುಂಬಯಿ ಕನ್ನಡಿಗರು ಹೆಚ್ಚಿನ ಕ್ರೀಯಾಶೀಲರಾಗಿದ್ದಾರೆ. ಮಾದ್ಯಗಳು ಉದ್ಯಮಗಳಾಗುತ್ತಿರುವ ಈ ಕಾಲದಲ್ಲಿ ಈ ಪತ್ರಿಕೆಯು ಒಂದು ಇತಿಹಾಸವನ್ನು ನಿರ್ಮಿಸಿದೆ. ಮೊಗವೀರ ಸಮುದಾಯವು ಒಂದು ವಿಶಿಷ್ಥವಾದ ಸಮುದಾಯ. ಅನೇಕ ತಳ ಸಮುದಾಯ ಈ ದೇಶದಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಕ್ರೀಯಾಶೀಲವಾಗಿದೆ.

ಸಮಾರಂಭದ ಅಧ್ಯಕ್ಶತೆಯನ್ನು ವಹಿಸಿದ ಹಿರಿಯ ರಂಗ ತಜ್ನ ಮೈಸೂರು ಅಸೋಷಿಯೇಶನಿನ ಟ್ರಸ್ಟಿ ಡಾ. ಬಿ. ಆರ್. ಮಂಜುನಾಥ ಅವರು ಮಾತನಾಡುತ್ತಾ ಈ ಪತ್ರಿಕೆಯ ಹತ್ತನೇ ವರ್ಷದ ಸಂಭ್ರಮದಲ್ಲಿ ನನ್ನ ಅಜ್ಜನಿಗೆ ಗೌರವಿಸಿದನ್ನು ಕಂಡಾಗ ಆ ಕ್ಷಣದಲ್ಲಿ ನಾನೂ ಅವರೊಂದಿಗಿದ್ದೆ. ಆಗ ನನಗೂ ಗೌರವಿಸದಿರುದಕ್ಕೆ ಅಜ್ಜನಲಿದ್ದ ಗೌರವದ ವಸ್ತುವನ್ನು ನಾನು ಪಡೆದಿದ್ದು ಇಂದು ಈ ಪತ್ರಿಕೆಯ 75 ನೇ ವರ್ಷದಲ್ಲಿ ಅಧ್ಯಕ್ಷನಾಗಿರುವುದು ನನ್ನ ಭಾಗ್ಯ ಇಂತಹ ಸಂದರ್ಭ ಎಲ್ಲರಿಗೂ ಸಿಗುದಿಲ್ಲ. ಪ್ರತೀ ತಿಂಗಳು ನನ್ನ ಮನೆಗೆ ಮೊಗವೀರ ಪತ್ರಿಕೆ ಬರುತ್ತಿದೆ. ಇದರಲ್ಲಿ ಎಲ್ಲಾ ಸಮುದಾಯದ ಸುದ್ದಿಗಳು ಬರುತ್ತಿದೆ. ಮುಂಬಯಿಯಲ್ಲಿ ನಾವು ಕನ್ನಡ ಜಾತಿಯವರು. ಇಲ್ಲಿ ಎಲ್ಲಾ ನಾಟಕ, ಸಾಹಿತ್ಯ ವಿಚಾರವನ್ನು ನಾವು ಒದುತ್ತೇವೆ, ಆಲಿಸುತ್ತೇವೆ ಆದರೆ ನಮ್ಮತನವನ್ನು ಉಳಿಸಿದ್ದೇವೆ. ಈಗಿನ ಸಾಹಿತಿಗಳು, ಬುದ್ದಿ ಜೀವಿಗಲು ಬರೆಯುದೊಂದು ಮಾಡುವುದು ಇನ್ನೊಂದು. ಇವರಿಂದ ಕಲಿಯಬೇಕೆನ್ನುವವರು ಏನನ್ನು ನಿರೀಕ್ಷಿಸಬಹುದು. ಸಾಹಿತ್ಯ ಒಂದು ಸರಕಾಗಿ ಹೋಗಿದೆ. ಈ ಪತ್ರಿಕೆ ಪ್ರಶಸ್ತಿಗಾಗಿ ಮಾಡಿದ ಸಾಧನೆಯಲ್ಲ, ಸಾಹಿತ್ಯ ಎಂದರೆ ಸಾಮಾಜಿಕ ಹಿತ. ಸಮಾಜಿಕ ಹಿತಕ್ಕಾಗಿ ಮಾಡಿದ ಪತ್ರಿಕೆ ಇದು. ಮೊತ್ತ ಮೊದಲು ಸಂಘಟನೆ, ಬ್ಯಾಂಕ್, ಶಿಕ್ಷಣ ಸಂಸ್ಥೆ ಮತ್ತು ಪತ್ರಿಕೆಯನ್ನು ಮಾಡಿದ ಸಂಘಟನೆ ಮೊಗವೀರ ವ್ಯವಸ್ಥಾಪಕ ಮಂಡಳಿಯಾಗಿದೆ ಎಂದರು.
ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ ಜಿ. ಎನ್. ಉಪಾದ್ಯಾಯ ಮಾತನಾಡುತ್ತಾ ಸ್ವತಂತ್ರ ಪೂರ್ವದಲ್ಲಿ ಮೊಗವೀರ ಪತ್ರಿಕೆ ಹುಟ್ಟಿಕೊಂಡಿದ್ದು ಇದು ಹೊಸ ತಲೆಮಾರನ್ನು ರೂಪಿಸಿದೆ. ಈ ಪತ್ರಿಕೆ ನಡೆದುಬಂದ ದಾರಿ ಆಶ್ಚರ್ಯಕರ. ಖ್ಯಾತ ಲೇಖಕರು ಬರೆಯುತ್ತಿರುವ ಈ ಪತ್ರಿಕೆ ನಾಡನ್ನು ಕಟ್ಟುವ ಪತ್ರಿಕೆ. ಮೊಗವೀರರು ಮುಂಬಯಿಯಲ್ಲಿ ಎರಡು ಶತಮಾನದ ಇತಿಹಾಸವನ್ನು ನಿರ್ಮಿಸಿದವರು.
ಕರ್ನಾಟಕ ಮಲ್ಲದ ಸಂಪಾದಕರಾದ ಚಂದ್ರಶೇಖರ ಪಾಲೆತ್ತಾಡಿ ಮಾತನಾಡುತ್ತಾ ಮುಂಬಯಿಯಲ್ಲಿ ಮೊತ್ತಮೊದಲು ಸಂಘಟನೆ ಸ್ಥಾಪಿಸಿ ಅದಕ್ಕೆ ನಮ್ಮತನವನ್ನು ಗುರುತಿಸಲು ಒಂದು ಮುಖವಾಣಿ ಬೇಕೆನ್ನುವ ಉದ್ದೇಶದಿಂದ ಮೊಗವೀರ ಪತ್ರಿಕೆಯನ್ನು ಹಿರಿಯರು ಸ್ಥಾಪಿಸಿದ್ದು ಸಂಘಟನೆ ಇದ್ದರೆ ಸಾಲದು ಅದನ್ನು ಜನರಿಗೆ ತಲಪಿಸಬೇಕು ಎಂಬುದು ಅವರ ಉದ್ದೇಶವಾಗಿತ್ತು. ಮುಂಬಯಿಗೆ ಬಂದ ಎಲ್ಲಾ ಸಮಾಜದವರು ಅವರವರ ಸಂಘಟನೆಯನ್ನು ಕಟ್ಟಿ ಕೆಲಸಮಾಡುತ್ತಿದ್ದು ಒಗ್ಗಟ್ಟಿನಲ್ಲಿದ್ದಾರೆ. ಆದರೆ ಇಲ್ಲಿನ ಎಲ್ಲಾ ಜಾತೀಯ ಸಂಘಟನೆಗಳು ಜಾತಿಯತೆನ್ನು ಮೀರಿ ಕೆಲಸಮಾಡುತ್ತದೆ ಅದಕ್ಕೆ ಮೊಗವೀರ ಮಂಡಳಿ ಒಂದು ಅಡಿಗಳ್ಳು. ಮೊಗವೀರ ಪತ್ರಿಕೆಯ ನಂತರ ಇತರ ಎಲ್ಲಾ ಸಂಘಟನೆಗಳು ತಮ್ಮ ಮುಖ ವಾಣಿಯನ್ನು ಹೊರತರುತ್ತದೆ. ನಮ್ಮ ಊರಲ್ಲಿ ಜಾತೀಯ ಸಂಘಟನೆಗಳು ಕಡಿಮೆ. ಆದರೆ ಅಲ್ಲಿ ಜಾತಿಯಲ್ಲೇ ಗುರುತಿಸಲು ಹೊಗುತ್ತಿದ್ದಾರೆ. ಕೊಲೆಮಾಡುವ ಸುದ್ದಿಯನ್ನೇ ಓದುಗರು ಇಷ್ಟ ಪಡುವಂತಹ ದಿನ ಬಂದಿದೆ. ಈಗ ಮುಖ ಪುಟದಲ್ಲಿ ಇಂತಹ ಸುದ್ದಿಯ ಅಗತ್ಯವಿದ್ದಂತಿದೆ ಎಂದರು.
ಸಂಶೋಧಕ ಹಾಗೂ ರಂಗತಜ್ನ ಡಾ.ಭರತ್ ಕುಮಾರ್ ಪೊಲಿಪು ಮಾತನಾಡುತ್ತಾ ಮೊಗವೀರ ಪತ್ರಿಕೆಯು ನನಗೆ ಬದುಕನ್ನು ಕೊಟ್ಟ ಪತ್ರಿಕೆ. ಯಾಕೆಂದರೆ ನನಗೆ ಮೊಗವೀರ ಬ್ಯಾಂಕಲ್ಲಿ ಕೆಲಸ ದೊರಕಲು ಈ ಪತ್ರಿಕೆಯೂ ಕಾರಣವಾಗಿದೆ. ಮೊಗವೀರ ಜನಾಂಗವು ಒಂದು ಸಾಹಸಿ ಪ್ರವೃತ್ತಿಯವರು. ಅದರ ಜೊತೆಗೆ ನಾಡಿನ ಎಲ್ಲರನ್ನು ಸಹಬಾಳ್ವೆ ನಡೆಸುತ್ತಾ ಬಂದವರು. ನಗರದ ಜಾತಿಯ ಮೊಗವೀರ ಮಂಡಳಿ ಮಾದರಿ ಸಂಸ್ಥೆಯಾಗಿದೆ ಎಂಬುದಕ್ಕೆ ಅಭಿಮಾನವಾಗುತ್ತದೆ. ಜಾತ್ಯಾತೀತ ದೋರಣೆಯನ್ನು ಅಳವಡಿಕೊಂಡು ಬಂದಿದೆ ಎಂದರು.
ವೇದಿಕೆಯಲ್ಲಿ ಮೊಗವೀರ ಮಂಡಳಿಯ ಅಧ್ಯಕ್ಷ ಅಜಿತ್ ಸುವರ್ಣ, ಉಪಾಧ್ಯಕ್ಷ ಎಚ್. ಅರುಣ್ ಕುಮಾರ್, ಕಾರ್ಯದರ್ಶಿ ಸಂಜೀವ ಕೆ.ಸಾಲ್ಯಾನ್, ಕೋಶಾಧಿಕಾರಿ ಭಾಸ್ಕರ ಎಲ್. ಸಾಲ್ಯಾನ್, ಪತ್ರಿಕೆಯ ಪ್ರಭಂದಕ ಚಂದ್ರಶೇಖರ ಕರ್ಕೇರ, ವ್ಯವಸ್ಥಾಪಕ ಸಂಪಾದಕ ಜಿ. ಕೆ. ರಮೇಶ್, ಸಂಪಾದಕ ಅಶೋಕ್ ಸುವರ್ಣ, ಪತ್ರಿಕಾ ಸಮಿತಿಯ ಕಾರ್ಯದರ್ಶಿ ದಯಾವತಿ ಸುವರ್ಣ ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಪ್ರಶಸ್ತಿ ವೆಜೇತ, ಲಿಮ್ಕಾ ಬುಕ್ ದಾಖಲೆಯ ವಿಜಯಕುಮಾರ್ ಶೆಟ್ಟಿಯವರನ್ನು ಈ ಸಂಧರ್ಭದಲ್ಲಿ ಡಾ. ಬರಗೂರು ಹಾಗು ಇತರ ಎಲ್ಲಾ ಗಣ್ಯರು ಸನ್ಮಾನಿಸಿದರು. ಸನ್ಮಾನಕ್ಕೆ ಉತ್ತರಿಸಿದ ವಿಜಯ ಕುಮಾರ್ ಅವರು ಮೊಗವೀರ ಸಮುದಾಯಕ್ಕೂ ನನಗೂ ಒಂದು ಅವಿನಬಾವ ಸಂಬಂದ ಆದುದರಿಂದ ನಿರಂತರವಾಗಿ ಮೊಗವೀರರ ನಂಟಿನಲ್ಲಿ ಬೆಳೆದು ಈ ಪತ್ರಿಕೆಯ ೫೦ ರ ಸಂಭ್ರಮದಲ್ಲೂ ಪಾಲ್ಗೊಂಡಿದ್ದೆ. ಇಂದು ನನಗೆ ಅತೀವ ಸಂತಸವಾಗಿದೆ. ಮಾಜಿ ಸಂಪಾದಕರದಕರನ್ನು, ಮುಂಬಯಿಯ ಇತರ ಸಂಘಟನೆಗಳ ಸಂಪಾದಕರನ್ನು, ಮೊಗವೀರ ಮಾಸಿಕದ ಬರಹಗಾರರನ್ನು ಗೌರವಿಸಲಾಯಿತು.
ಮಂಡಳಿಯ ಅಧ್ಯಕ್ಷರಾದ ಅಜಿತ್ ಸುವರ್ಣ ಅವರು ಸ್ವಾಗತಿಸುತ್ತಾ ಪತ್ರಿಕೆಯು ಲೇಖಕರಿಂದ, ಓದುಗರಿಂದ, ಸಂಪಾದಕ ಮಂಡಳಿ ಮುಂತಾದವರಿಂದ ಉನ್ನತ ಮಟ್ಟಕ್ಕೆ ಬೆಳೆದಿದೆ.
ಮೊಗವೀರ ಸಂಪಾದಕ ಅಶೋಕ್ ಸುವರ್ಣ ಅವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ಪತ್ರಿಕೆ ನಡೆದು ಬಂದ ದಾರಿ ಬಗ್ಗೆ ತಿಳಿಸಿದರು. ಗೋಪಾಲ ತ್ರಾಸಿ ಅವರು ಕಾರ್ಯಕ್ರಮವನ್ನು ನಿರ್ವಹಿಸಿ ಅತಿಥಿಗಳನ್ನು ಪರಿಚಯಿಸಿದರು.
ಈ ಸಂಧರ್ಭದಲ್ಲಿ ಬಿ. ಎ. ಸನದಿಯವರ ಮಧುಸಂಚಯ, ಮಿತ್ರಪಟ್ನ ನಾರಾಯಣ ಬಂಗೇರ ಅವರ ನಾಗಚರಿತ್ರೆ ಮತ್ತು ಎಸ್. ಕೆ. ಉಚ್ಚಿಲ ಅವರ ಲೇಖನ ಸಂಕಲನ ವನ್ನು ಅತಿಥಿಗಳು ಬಿಡುಗಡೆಗೊಳಿಸಿದರು.
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಿತು. ಉಪಾಧ್ಯಕ್ಷ ಎಚ್. ಅರುಣ್ ಕುಮಾರ್ ಅವರು ವಂದನಾರ್ಪಣೆ ಮಾಡಿದರು.