
ಮಂಗಳೂರು : ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಶನ್, ಮಂಗಳೂರು ಇವರು ಸುಮಾರು 15 ಲಕ್ಷ ರೂ ವೆಚ್ಚದಲ್ಲಿ ಹರೇಕಳದ ನ್ಯೂಪಡ್ಪುವಿನಲ್ಲಿ ಅಕ್ಷರ ಸಂತ ಹಾಜಬ್ಬರಿಗೆ ನೂತನವಾಗಿ ನಿರ್ಮಿಸಿಕೊಟ್ಟ ಮನೆಯ ಹಸ್ತಾಂತರ ಕಾರ್ಯಕ್ರಮ ಹಾಗೂ ಗೃಹಪ್ರವೇಶ ಕಾರ್ಯಕ್ರಮ ಭಾನುವಾರ ನಡೆಯಿತು.
ಆರೋಗ್ಯ ಸಚಿವ ಯು.ಟಿ.ಖಾದರ್ ನೂತನ ಮನೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಹರೇಕಳ ಹಾಜಬ್ಬ ಅವರು ಶಿಕ್ಷಣ ಕ್ಷೇತ್ರದ ಮೂಲಕ ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಯುನೈಟೆಡ್ ಕ್ರಿಶ್ಟಿಯನ್ ಅಸೋಸಿಯನ್‌ರವರ ಕಾರ್ಯ ಪುಣ್ಯದ ಕೆಲಸವಾಗಿದ್ದು, ಶ್ಲಾಘನೀಯವಾಗಿದೆ. ಸಮಾಜಕ್ಕೆ ಹಾಜಬ್ಬರ ಸೇವೆ ಸುದೀರ್ಘವಾಗಿರಲಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ಹಾಜಬ್ಬರ ಪ್ರಶಸ್ತಿಗಳನ್ನು ಜೋಡಿಸಿಡಲಾದ ಕೊಠಡಿಯನ್ನು ಸಚಿವರು ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ಅವಿದ್ಯಾವಂತನಾಗಿದ್ದರೂ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಹರೇಕಳ ಹಾಜಬ್ಬರನ್ನು ಗುರುತಿಸಿ ಅವರಿಗೆ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಶನ್‍ನವರು ಮನೆ ನಿರ್ಮಿಸಿಕೊಟ್ಟಿರುವುದು ಶ್ಲಾಘನೀಯ ಎಂದು ಹೇಳಿದರು.
ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಶನ್‍ನ ಅಧ್ಯಕ್ಷ ಅಲ್ಬನ್ ಮಿನೇಜಸ್ ಅವರು ಹಾಜಬ್ಬರಿಗೆ ನೂತನ ಮನೆಯನ್ನು ಹಸ್ತಾಂತರ ಮಾಡಿದರು. ಈ ಮನೆ ನಿರ್ಮಾಣಕ್ಕೆ ಸಹಕರಿಸಿದ ಎಲ್ಲರಿಗೂ ವಂದನೆ ಸಲ್ಲಿಸುವುದಾಗಿ ಅಲ್ಬನ್ ಮಿನೇಜಸ್ ಹೇಳಿದರು.
ಕಾರ್ಯಕ್ರಮದಲ್ಲಿ ಮೂಡಾ ಆಯುಕ್ತ ನಝೀರ್, ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಎಸ್.ಕರೀಂ, ತಾಲೂಕು ಪಂಚಾಯಿತಿ ಸದಸ್ಯ ಮಹಮ್ಮದ್ ಮುಸ್ತಫಾ, ಹರೇಕಳ ಪಂಚಾಯಿತಿ ಅಧ್ಯಕ್ಷ ಅನಿತಾ ಡಿಸೋಜಾ ಮುಂತಾದವರು ಉಪಸ್ಥಿತರಿದ್ದರು.
ಅಸೋಸಿಯೇಶನ್‍ನ ಜೂಡ್ ನೊರೋನ್ಹಾ ಬೋಂದೆಲ್ ಕಾರ್ಯಕ್ರಮ ನಿರೂಪಿಸಿದರು.