ಕುಂದಾಪುರ: ಹಲವು ವರ್ಷಗಳಿಂದ ಬಿಜೆಪಿ ಪಕ್ಷ ಹಾಗೂ ಸಂಘಟನಾ ಕೆಲಸದಲ್ಲಿ ಸಕ್ರೀಯ ಕಾರ್ಯಕರ್ತರಾಗಿದ್ದ ಕುಂದಾಪುರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶಂಕರ ಅಂಕದಕಟ್ಟೆ ತಮ್ಮ ಯುವಮೋರ್ಚಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಈ ಬಗ್ಗೆ ‘ಕನ್ನಡಿಗ ವರ್ಲ್ಡ್’ ಜೊತೆ ಮಾತನಾಡಿದ ಶಂಕರ್ ಅಂಕದಕಟ್ಟೆ ಅವರು, ಕುಂದಾಪುರ ವಿಧಾನ ಸಭಾ ಕ್ಷೇತ್ರದ ಲ್ಲಿ ನಿಷ್ಟೆಯಿಂದ ದುಡಿದ ಕಾರ್ಯಕರ್ತರು ಹಾಗೂ ನಾಯಕರ ಭಾವನೆಗಳಿಗೆ ಬೆಲೆ ನೀಡದೇ ಸರ್ವಾಧಿಕಾರಿ ಧೋರಣೆಯನ್ನು ಪ್ರತಿಪಾಧಿಸುವ ಕೆಲ ಅರೆಕಾಲಿಕ ನಾಯಕರ ನಡೆಗೆ ಬೇಸತ್ತು ಈ ತೀರ್ಮಾನ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಚುನಾವಣೆಯಲ್ಲಿ ಕೆಲಸ ಮಾಡಲ್ಲ
ತಮ್ಮ ಮುಂದಿನ ನಡೆಗೆ ಅನುಕೂಲವಾಗುವಂತೆ ಜಿಲ್ಲಾಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ ಹೊರತು ಪಕ್ಷದ ಹೀತಾಸಕ್ತಿಗಲ್ಲ ಎನ್ನುವುದು ನನಗೆ ಸ್ಪಷ್ಟವಾಗಿದೆ. ಇದೆಲ್ಲಾ ಕಾರಣಗಳಿಂದಾಗಿ ನನಗೆ ಈ ಚುನಾವಣೆಯಲ್ಲಿ ಕೆಲಸ ಮಾಡಲು ಮನಸ್ಸಿಲ್ಲ. ಆದ್ದರಿಂದ ಯುವಮೋರ್ಚಾ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿರುವೆ.
ಪಕ್ಷ ದ್ರೋಹ ಮಾಡಲ್ಲ
ಮನಸ್ಸಿಗುಂಟಾದ ಅತೀವ ನೋವು ಹಾಗೂ ಬೇಸರ ಈ ಚುನಾವಣೆಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಆದರೇ ಪಕ್ಷಕ್ಕೆ ದ್ರೋಹ ಹಾಗೂ ಮೋಸ ಮಾಡಲು ನನ್ನುಂದ ಸಾಧ್ಯವಿಲ್ಲ, ಎಂದಿಗೂ ಅಂತಹ ಕೆಲಸ ಮಾಡಲಾರೆ ಎಂದು ಶಂಕರ ಅಂಕದಕಟ್ಟೆ ಹೇಳಿದರು.
ಶಂಕರ್ ಅಂಕದಕಟ್ಟೆ ಬಗ್ಗೆ:
1993ರಿಂದ ಬಿಜೆಪಿ ಪಕ್ಷದಲ್ಲಿ ಸಕ್ರೀಯ ಕಾರ್ಯಕರ್ತರಾಗಿರುವ ಶಂಕರ ಅಂಕದಕಟ್ಟೆ ಕಳೆದ ಎರಡೂವರೆ ವರ್ಷಗಳಿಂದ ಕುಂದಾಪುರ ಕ್ಷೇತ್ರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದರು. ಇವರು ಹುದ್ದೆಗೆ ನೀಡಿದ ರಾಜಿನಾಮೆಯಿಂದಾಗಿ ಪಕ್ಷದಲ್ಲಿ ಯಾವ ರೀತಿಯ ಬೆಳವಣಿಗೆಗಳು ನಡೆಯಲಿದೆ ಎಂಬುದನ್ನು ಕಾದುನೋಡಬೇಕಿದೆ.
ಭಿನ್ನಮತ ಸ್ಪೋಟ ಸಂಭವ?
ಶಂಕರ ಅಂಕದಕಟ್ಟೆ ಯುವಮೋರ್ಚಾ ಸ್ಥಾನಕ್ಕೆ ರಾಜಿನಾಮೆ ನೀಡಿದ ಬೆನ್ನಲ್ಲೇ, ಅಸಮಧಾನವುಳ್ಳ ಕೆಲವ್ರು ತಮ್ಮತಮ್ಮ ಹುದ್ದೆಗಳಿಗೆ ರಾಜಿನಾಮೆ ನೀಡುವ ಹಾಗೂ ಈ ಚುನಾವಣೆಯಲ್ಲಿ ಕೆಲಸ ಮಾಡದಿರುವ ಬಗ್ಗೆ ಆಲೋಚನೆಯನ್ನು ಮಾಡಿದ್ದಾರೆ ಎನ್ನಲಾಗುತ್ತಿದೆ.
ವರದಿ- ಯೋಗೀಶ್ ಕುಂಭಾಸಿ