ಕದನ ಕೌತುಕ-1
ಕುಂದಾಪುರ: ಈ ಬಾರಿಯ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಕುಂದಾಪುರ ತಾಲೂಕಿನ ರಾಜಕೀಯ ವಲಯದಲ್ಲಿ ಪ್ರತಿಷ್ಟೆಯ ಕಣವಾಗಿದ್ದರೇ ಮತದಾರರು ಮತ್ತು ಜನರಲ್ಲಿ ಚುನಾವಣೆ ಕದನ ತೀವ್ರ ಕುತೂಹಲವನ್ನುಂಟು ಮಾಡಿದೆ. ಪ್ರಸ್ತುತ ತಾಲೂಕಿನಲ್ಲಿ ರಾಕೀಯ ಶಕ್ತಿಗಳೂ ಏರುಪೇರಾಗಿವೆ.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಪಕ್ಷೇತರ ಶಾಸಕರಾಗಿ ಕಾರ್ಯ ಮಾಡುತ್ತಿದ್ದು ಈ ಬಾರಿ ಕುಂದಾಪುರದ ಐದು ಜಿ.ಪಂ. ಕ್ಷೇತ್ರಗಳ ಪೈಕಿ ನಾಲ್ಕು ಅಭ್ಯರ್ಥಿಗಳನ್ನು ಅವರ ಬಣದವರಿಗೆ ನೀಡಲಾಗಿದೆ. ಒಂದು ಕ್ಷೇತ್ರದ ಅಭ್ಯರ್ಥಿ ಮಾತ್ರ ಬಿಜೆಪಿ ಪಕ್ಷದವರಾಗಿದ್ದಾರೆಂಬುದು ಬಿಜೆಪಿ ಪ್ರಮುಖರೇ ಹೇಳುವ ಮಾತುಗಳು. ಹೌದು ಇದೇ ವಿಚಾರದಲ್ಲಿಹಲವು ಗೊಂದಲಗಳಾಗಿ ಒಂದು ಹಂತದಲ್ಲಿ ಬಿಜೆಪಿಯವರು ಐದು ಅಭ್ಯರ್ಥಿಗಳನ್ನು ಹಾಗೂ ಹಾಲಾಡಿ ಬಣದವರು ಪಕ್ಷೇತರರಾಗಿ ಐದು ಅಭ್ಯರ್ಥಿಗಳನ್ನು ನಿಲ್ಲಿಸುವ ಮಟ್ಟಿಗೂ ಪರಿಸ್ಥಿತಿಯಿತ್ತು. ಅಂತಿಮವಾಗಿ ರಾಜಿ ಸಂಧಾನದ ಮೂಲಕ ಮಂದರ್ತಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಣಕ್ಕಿಳಿದು ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಹಾಲಾಡಿ ಬಣದ ಅಭ್ಯರ್ಥಿಗಳು ಕಣಕ್ಕಿಳಿದರೂ ಕೂಡ ಎಲ್ಲರೂ ‘ಕಮಲ’ ಚಿನ್ನೆಯಲ್ಲಿಯೇ ಬಿಜೆಪಿಯಿಂದಲೇ ಸ್ಪರ್ಧಿಸುತ್ತಿದ್ದಾರೆ ಎನ್ನುವುದು ಇನ್ನೊಂದು ವಿಶೇಷ.
(ಹಾಲಾಡಿ ಶ್ರೀನಿವಾಸ ಶೆಟ್ಟಿ)
(ಕುಂದಾಪುರ ಬಿಜೆಪಿ ಕ್ಷೇತ್ರಾಧ್ಯಕ್ಷ ರಾಜೇಶ್ ಕಾವೇರಿ)
ಹಾಲಾಡಿಯವ ಸ್ವಕ್ಷೇತ್ರ ಹಾಲಾಡಿ ಜಿ.ಪಂ. ಕ್ಷೇತ್ರದಿಂದ ಸುಚಿತ್ರಾ ಕುಲಾಲ್ ಅವರು ಕಣಕ್ಕಿಳಿದಿದ್ದಾರೆ. ಮಂದರ್ತಿಯಿಂದ ಪ್ರತಾಪ್ ಹೆಗ್ಡೆ, ಕೋಟೇಶ್ವರದಿಂದ ಲಕ್ಷ್ಮೀ ಬಿಲ್ಲವ, ಬೀಜಾಡಿಯಿಂದ ಶ್ರೀಲತಾ ಶೆಟ್ಟಿ ಹಾಗೂ ಕೋಟದಿಂದ ರಾಘವೇಂದ್ರ ಕಾಂಚನ್ ಸ್ಪರ್ಧೆಗಿಳಿದಿದ್ದಾರೆ. ಇವುಗಳ ಪೈಕಿ ಇಬ್ಬರು ರಾಜಕೀಯ ಹಿನ್ನೆಲೆಯಿರುವವರಾದರೇ ಇನ್ನು ಮೂವರು ರಾಜಕೀಯ ಮಾಡಿದವರ ಹಾಗೂ ಮಾಡುತ್ತಿರುವವರ ಪತ್ನಿಯರು ಎನ್ನುವುದು ವಿಶೇಷ.
(ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಂ ಶೆಟ್ಟಿ)
ಈತನ್ಮಧ್ಯೆ ಕಾಂಗ್ರೆಸ್ ಮಾತ್ರ ಕಾದು ಹೊಡೆಯುವ ತಂತ್ರದ ಮೊರೆಹೋಗಿದೆ. ನಾಮಪತ್ರ ಸಲ್ಲಿಸಲು ಕೊನೆಯ ದಿನಕ್ಕೆ ಒಂದು ದಿನ ಬಾಕಿಯಿದ್ದರೂ ಕೂಡ ಇನ್ನೂ ಕೂಡ ಐದು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಅಧೀಕ್ರತಗೊಳಿಸಿಲ್ಲ. ಆದರೂ ಕೋಟೇಶ್ವರ,ಹಾಲಾಡಿ ಕ್ಷೇತ್ರಕ್ಕೆ ಅಭ್ಯರ್ಥಿಗಳು ಖಚಿತವಾದರೂ ಕೂಡ ಕೋಟದಲ್ಲಿ ಮಧ್ಯಾಹ್ನದ ವೇಳೆಗೆ ಅಭ್ಯರ್ಥಿ ಘೋಷಣೆಯಾಗಲಿದೆ. ಒಟ್ಟಿನಲ್ಲಿ ಐವರು ಅಭ್ಯರ್ಥಿಗಳ ಪಟ್ಟಿ ಸೋಮವಾರ ಬಿಡುಗಡೆಗೊಳಿಸುವುದಲ್ಲದೇ ನಾಪತ್ರವನ್ನು ಸಲ್ಲಿಸಲಾಗುತ್ತದೆ ಎನ್ನಲಾಗಿದೆ. ಪಕ್ಷದ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ನೇತ್ರತ್ವದಲ್ಲಿ ಅರ್ಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತಿದೆ. ಬಹುತೇಕ ಕನಿಷ್ಟ ವಿದ್ಯಾರ್ಹತೆಯಿದ್ದು ಸಾಮಾಜಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದು ಜನರ ಸಮಸ್ಯೆಗಳಿಗೆ ಬೆನ್ನೆಲುಬಾಗಬಲ್ಲ ಅಭರ್ಥಿಗಳನ್ನು ಕಣಕ್ಕಿಳಿಸಿ ಐದು ಜಿ.ಪಂ. ಕ್ಷೇತ್ರಗಳ ಪೈಕಿ ಬಹುತೇಕ ನಾವೇ ಗೆಲ್ಲುತ್ತೇವೆ ಎನ್ನುತ್ತಾರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ.
(ಕೆ. ಜಯಪ್ರಕಾಶ್ ಹೆಗ್ಡೆ)
ಇನ್ನು ಬ್ರಹ್ಮಾವರ ಪಕ್ಷೇತರ ಶಾಸಕರಾಗಿ ಬಳಿಕ ಕಾಂಗ್ರೆಸ್‌ನಿಂದ ಸಂಸದರಾದ ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆಯವರು ಈಗ ಮತ್ತೆ ಪಕ್ಷೇತರರಾಗಿದ್ದಾರೆ. ಈ ಚುನಾವಣೆಯಲ್ಲಿ ಇವರ ಪಾತ್ರ ವಿಶೇಷವಾಗಿ ಉಡುಪಿ ಮತ್ತು ಕುಂದಾಪುರ ತಾಲೂಕಿನ ಮೇಲೆ ಪರಿಣಾಮವಾಗುತ್ತದೆ. ಹೆಗ್ಡೆಯವರ ಅಭಿಮಾನಿಗಳು ಅಲ್ಲಲ್ಲಿ ಸ್ಪರ್ಧಿಸುವ ಮುನ್ಸೂಚನೆಗಳಿದ್ದು ಅವರಿಗೆ ಹೆಗ್ಡೆಯವರು ಸಾಥ್ ನೀಡುತ್ತಾರೆನ್ನುವ ಮಾಹಿತಿಗಳಿವೆ.
ಇದಲ್ಲದೆ ಕಾಂಗ್ರೆಸ್ , ಬಿಜೆಪಿ ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳೂ ಗೆಲುವು, ಸೋಲಿನ ಮೇಲೆ ಪರಿಣಾಮ ಬೀರುತ್ತದೆ. ಪಕ್ಷಗಳ ನಾಯಕರು ತಮ್ಮೊಳಗೆ ಭಿನ್ನಾಭಿಪ್ರಾಯಗಳಿಲ್ಲ ಎಂಬುದನ್ನು ತೋರಿಸಲು ಯತ್ನಿಸಿದರೂ ಹುದ್ದೆಗಳನ್ನು ಏರಲು ಪೈಪೋಟಿ, ಸೋಲುವುದೆಂಬ ಅಭಿಪ್ರಾಯವಿದ್ದರೂ ತನಗೇ ಟಿಕೆಟ್ ಬೇಕೆಂಬ ಪಟ್ಟು ಪಕ್ಷಗಳ ಚಟುವಟಿಕೆ ಮೇಲೆ ಪರಿಣಾಮ ಬೀರದೆ ಇರಲಾರದು.