(File Photo) ಮ೦ಗಳೂರು ಫೆ.06: ಅನಧಿಕೃತವಾಗಿ ಮಗು ದತ್ತು ನೀಡಿರುವ ಪ್ರಕರಣವನ್ನು ಪತ್ತೆ ಹಚ್ಚಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಗುವನ್ನು ರಕ್ಷಿಸಿ, ಪಾಲನಾ ಕೇಂದ್ರಕ್ಕೆ ನೀಡಿದೆ.
ಬಜಪೆ ಶಾಂತಿ ಗುಡ್ಡೆ ಕೊಂಚಾರ ಸೈಟ್ ಎಂಬಲ್ಲಿನ ಅವಿವಾಹಿತ ಪ್ರಾಪ್ತ ವಯಸ್ಸಿನ ತಾಯಿ ಲೇಡಿಗೋಷನ್ ಆಸ್ಪತ್ರೆಯಲ್ಲಿ2015 ರ ಆಗಸ್ಟ್‌ನಲ್ಲಿ ಗಂಡು ಮಗುವಿಗೆ ಜನ್ಮವನ್ನು ನೀಡಿದ್ದಳು.
ಬಳಿಕ ಮಗುವನ್ನು ತಾನೇ ಸಾಕುವುದಾಗಿ ತಿಳಿಸಿ ತಾಯಿಯು ಮಗುವಿನೊಂದಿಗೆ ಮನೆಗೆ ತೆರಳಿದ್ದಳು. ನಂತರ ಬಜಪೆ ಸಮೀಪ ವಾಸವಾಗಿರುವ ದಂಪತಿಗಳಿಗೆ ಈ ಗಂಡು ಮಗುವನ್ನು ಅನಧಿಕೃತವಾಗಿ ದತ್ತು ನೀಡಿದ್ದಳು. ಈ ಬಗ್ಗೆ ಸಾರ್ವಜನಿಕ ದೂರಿನ ಅನ್ವಯ ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ಆದೇಶದನ್ವಯ ಫೆ. 4ರಂದು ದಂಪತಿಗಳ ಮನೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳಾದ ಕುಮಾರ್ ಶೆಟ್ಟಿಗಾರ್, ವಜೀರ್ ಅಹಮ್ಮದ್, ಸಂಧ್ಯಾ, ಅಂಗನವಾಡಿ ಕಾರ್ಯಕರ್ತೆ ಶೋಭ ಹಾಗೂ ಬಜಪೆ ಪೋಲಿಸ್ ಠಾಣೆಯ ಸಿಬ್ಬಂದಿ ಲಾವಣ್ಯ ಇವರು ಕಾರ್ಯಾಚರಣೆ ನಡೆಸಿ ಮಗುವನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿದ್ದಾರೆ.
ಮಗುವಿನ ಮುಂದಿನ ಪಾಲನೆ ಮತ್ತು ಪೋಷಣೆಗಾಗಿ ಪುತ್ತೂರು ರಾಮಕೃಷ್ಣ ಸೇವಾ ಸಮಾಜ ಇಲ್ಲಿಗೆ ದಾಖಲಿಸಲಾಗಿದೆ.