ಮಂಗಳೂರು,ಜ.29 :ಆರೋಗ್ಯ ಕವಚ ಯೋಜನೆಯ (108) ಆ್ಯಬುಲೆನ್ಸ್ ಸಿಬ್ಬಂದಿಗಳು ನಡೆಸುತ್ತಿರುವ ಮುಷ್ಕರದಿಂದ ರಾಜ್ಯದ ಜನ ಸಾಮಾನ್ಯರಿಗೆ ತುರ್ತು ಆರೋಗ್ಯ ಸೇವೆ ನೀಡಲು ತೊಂದರೆಯುಂಟಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಮುಷ್ಕರವನ್ನು ಕೈಬಿಡದಿದ್ದರೆ ಎಸ್ಮಾ ಜಾರಿ ಗೊಳಿಸುವ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ
ನಗರದಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ಜಾರಿಗೆ ತಂದಿರುವ ಆರೋಗ್ಯ ಕವಚ ಯೋಜನೆಯು ರಾಜ್ಯದ 6 ಕೋಟಿ ಜನರಿಗಾಗಿಯೇ ಹೊರತು ಅಂಬ್ಯುಲೆನ್ಸ್ ನೌಕರರಿಗಲ್ಲ. ಇದು ಜನ ಸಾಮಾನ್ಯರಿಗಾಗಿ ತಂದಂತಹ ಯೋಜನೆ. ಮುಷ್ಕರದಿಂದ ರಾಜ್ಯದ ಜನತೆಗೆ ತೊಂದರೆಯುಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆ್ಯಬುಲೆನ್ಸ್ ಸಿಬ್ಬಂದಿಗಳು ಮುಷ್ಕರವನ್ನು ತಕ್ಷಣ ಕೈ ಬಿಡಬೇಕು ಎಂದು ತಿಳಿಸಿದರು.
ಅಂಬ್ಯುಲೆನ್ಸ್ ನೌಕರರ ಹಲವು ಬೇಡಿಕೆಗಳಿಗೆ ಸ್ಪಂದಿಸಿದ್ದೇವೆ. ಆರೋಗ್ಯ ಕವಚ ಸಿಬ್ಬಂದಿಗಳ ಸಮಸ್ಯೆಗಳಿಗೆ ಪರಿಹಾರ ಕೊಡಲು ಸರಕಾರ ಸೂಕ್ತ ಕ್ರಮ ಕೈಗೊಂಡಿದೆ. ಆದರೂ ಕೆಲವು ಸಂಘಟನೆಗಳು ಸಿಬ್ಬಂದಿ ನಡುವೆ ಗೊಂದಲ ಸೃಷ್ಟಿಸಿರುವುದರಿಂದ ಅವರು ಮುಷ್ಕರದಲ್ಲಿ ತೊಡಗಿಕೊಂಡಿದ್ದಾರೆ. ಸರಕಾರ ಈ ಒತ್ತಡಕ್ಕೆ ಮಣಿಯುವುದಿಲ್ಲ. ಇದು ಇನ್ನೂ ಒಂದು ತಿಂಗಳು ಮುಂದುವರಿದರೆ ಸರಕಾರ ಪರಿಯಾಯ ಕ್ರಮ ತೆಗೆದುಕೊಳ್ಳಲಿದೆ ಎಂದು ಸಚಿವರು ಹೇಳಿದರು. ಇದೇ ರೀತಿ ನೌಕರರು ಪದೇ ಪದೇ ಪ್ರತಿಭಟನೆ ಮಾಡುತ್ತಿದ್ದರೆ ಎಸ್ಮಾ ಜಾರಿಗೊಳಿಸುವ ಮೂಲಕ ಹೊಸ ನೇಮಕಾತಿ ಮಾಡಲಾಗುವುದು ಎಂದು ಖಾದರ್ ಎಚ್ಚರಿಕೆ ನೀಡಿದರು.
ಫೆ.7 :ಸೂರ್ಯ-ಚಂದ್ರ ಜೋಡುಕರೆ ಕಂಬಳ :
ಸಹೋದರತೆ ಮತ್ತು ಏಕತೆಗೆ ಪ್ರತೀಕವಾಗಿರುವ ತಲಪಾಡಿ ಗ್ರಾಮದ ಪಂಜಾಳದಲ್ಲಿ ಫೆ.7ರಂದು ನಡೆಯುವ ಸೂರ್ಯ-ಚಂದ್ರ ಜೋಡುಕರೆ ಕಂಬಳಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡುವಂತೆ ಸಚಿವರು ವಿನಂತಿಸಿದರು. ಹೊನಲುಬೆಳಕಿನಲ್ಲಿ ನಡೆಯಲಿರುವ ಈ ಕಂಬಳದಲ್ಲಿ ಸುಮಾರು 30,000 ಜನ ಸೇರುವ ನಿರೀಕ್ಷೆಯಿದೆ ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸೂರ್ಯ-ಚಂದ್ರ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ರವೀಂದ್ರ ಶೆಟ್ಟಿ, ಉಪಾಧ್ಯಕ್ಷ ಗಣೇಶ್ ಶೆಟ್ಟಿ, ಕಾರ್ಯದರ್ಶಿ ಗಿರೀಶ್ ಆಳ್ವಾ ಹಾಗೂ ಮತ್ತಿತ್ತರ ಪದಾಧಿಕಾರಿಗಳು ಉಪಸ್ಥಿತರಿದ್ದರು.