ಮಂಗಳೂರು,ಜ.28 : ಇತ್ತೀಚೆಗೆ ಅತ್ತಾವರ ಸಮೀಪದ ನಂದಿಗುಡ್ಡ ಸ್ಮಶಾನದ ಎದುರು ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ವಳಚ್ಚಿಲ್ ನಿವಾಸಿ ಧನರಾಜ್ ಅಲಿಯಾಸ್ ಧನು (21) ಮತ್ತು ಉಳ್ಳಾಲ ನಿವಾಸಿ ಪ್ರತೀಶ್ ಅಲಿಯಾಸ್ ಪ್ರತೀಶ್ ಪೂಜಾರಿ (19) ಎಂಬವರೇ ಬಂಧಿತ ಆರೋಪಿಗಳು.
ಬಜಿಲಕೇರಿ ಫ್ರೆಂಡ್ಸ್ ಮತ್ತು ಹಿಂದೂ ಜಾಗರಣ ವೇದಿಕೆಯ ನಡುವೆ ಶಾರದಾ ಹುಲಿ ವೇಷಕ್ಕೆ ಸಂಬಂಧಿಸಿದಂತೆ ಇದ್ದ ವೈಮನಸ್ಸು ಈ ಹಲ್ಲೆಗೆ ಕಾರಣ ಎನ್ನಲಾಗಿದೆ.
ಕಳೆದ ಭಾನುವಾರ ಮಧ್ಯಾಹ್ನ ಬಜಿಲಕೇರಿ ನಿವಾಸಿ ಹರಿಪ್ರಸಾದ್ ನಂದಿಗುಡ್ಡ ಸ್ಮಶಾನದ ಸಮೀಪದಿಂದ ತಮ್ಮ ವಾಹನದಲ್ಲಿ ಸಾಗುತಿದ್ದಾಗ ಹಿಂಬಾಲಿಸಿಕೊಂಡು ಬಂದ ಆರೋಪಿಗಳು ಹರಿಪ್ರಸಾದ್ ಅವರನ್ನು ಚೂರಿಯಿಂದ ಇರಿದು ಗಾಯಗೊಳಿಸಿದ್ದರು ಎನ್ನಲಾಗಿದೆ.
ಗಾಯಗೊಂಡ ಹರಿಪ್ರಸಾದ್ ನೀಡಿದ ದೂರು ಮತ್ತು ಮಾಹಿತಿಯ ಅನ್ವಯ ತನಿಖೆ ಪ್ರಾರಂಭಿಸಿದ ಪಾಂಡೇಶ್ವರ ಪೊಲೀಸರು ಈ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ