ಅಜೆಕಾರು,ಜ.28 : ಸುಂದರ ಗ್ರಾಮೀಣ ಪರಿಸರದಲ್ಲಿ ಹೊಸತನದ ಸಾಕಾರವಾಗಿರುವ ಆದಿ ಗ್ರಾಮೋತ್ಸವ ಒಂದು ವಿನೂತನ ಅನುಭವ ನೀಡಿದೆ. ಯುವ ಪ್ರತಿಭೆಗಳು ಮತ್ತು ಹಿರಿಯ ಸಾಧಕರನನ್ನು ಗೌರವಿಸುವ ಉಪಕ್ರಮ, ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಮಾಡುವ ಮೂಲಕ ಇಲ್ಲಿ ನಡೆಯುತ್ತಿರುವ ವ್ಯಕ್ತಿತ್ವ ನಿರ್ಮಾಣದ ಕೆಲಸ ಪ್ರಶಂಸನೀಯ ಎಂದು ಹಿರಿಯ ಉದ್ಯಮಿ ಮೂಡುಬಿದಿರೆ ಧನಲಕ್ಷ್ಮಿ ಉದ್ಯಮ ಸಮೂಹಗಳ ಮಾಲಕ ಶ್ರೀಪತಿ ಭಟ್ ಹೇಳಿದರು.
ಅವರು ಅಜೆಕಾರು ಕುರ್ಪಾಡಿಯಲ್ಲಿ ನಡೆದ ಆದಿಗ್ರಾಮೋತ್ಸವದ ಅಧ್ಯಕ್ಷತೆ ವಹಿಸಿ, ಸಾಧಕರಿಗೆ ಗೌರವ ನೀಡಿ ಮಾತನಾಡುತ್ತಿದ್ದರು. ಹಳ್ಳಿ ಹಳ್ಳಿಗಳಲ್ಲಿ ಜನರ ಮನಸ್ಸುಗಳನ್ನು ಕಟ್ಟುವ ಕೆಲಸ ಆಗುವುದು ಅನಿವಾರ್‍ಯವಾಗಿದೆ. ಅಜೆಕಾರು ಅವರಂತಹ ವಿಶಿಷ್ಟವ್ಯಕ್ತಿತ್ವದ ಜನರು ಹೀಗೆ ವಿಶೇಷವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುವುದು ಒಂದು ಮಾದರಿ ಎಂದು ಅವರು ಅಭಿಪ್ರಾಯಪಟ್ಟರು.
ಆದಿಗ್ರಾಮೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ.ಸಂತೋಷ್ ಕುಮಾರ್ ಗ್ರಾಮ ದೀಪೋತ್ಸವಕ್ಕೆ ಚಾಲನೆ ನೀಡಿ ಉದ್ಘಾಟಿಸಿದರು. ಇದೊಂದು ಅತ್ಯಂತ ಆತ್ಮೀಯ- ವಿಶಿಷ್ಟ ಕಾರ್ಯಕ್ರಮ. ಹೊಸತನಗಳ ಸಾಕಾರಕ್ಕೆ ಅಜೆಕಾರು ಒಂದು ಮಾದರಿ, ಗ್ರಾಮೋತ್ಸವ ಆದಿಗ್ರಾಮೋತ್ಸವವಾಗಿ ಬೆಳೆದ ಬಗೆಯನ್ನು ಹತ್ತಿರದಿಂದ ಗಮನಿಸಿದ್ದೇನೆ, ಖುಷಿ ಪಟ್ಟಿದ್ದೇನೆ ಎಂದು ನಿಕಟಪೂರ್ವ ಶಾಸಕ ಎಚ್.ಗೋಪಾಲ ಭಂಡಾರಿ ಪ್ರಶಂಸಿದರು.
ಬೆಳ್ಮಣ್ ಪದವಿಪೂರ್ವ ಕಾಲೇಜಿನ ಶಿಕ್ಷಕಿ ಮಾಲತಿ ಪೈ, ಮರ್ಣೆ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ ಕುಮಾರ್, ಕುರ್ಸುಕಟ್ಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾ ಯ ನಾಗೇಶಪ್ಪ, ಎಂ.ಜಿ ಎಂ. ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಮಂಜುನಾಥ್ ಬೋರ್ಗಲ್‌ಗುಡ್ಡೆ ಮುಖ್ಯ ಅತಿಥಿಗಳಾಗಿದ್ದರು. ಕಂಬಳದಿಂದ ತಾತ್ಕಾಲಿಕವಾಗಿ ನಿವೃತ್ತ ಘೋಷಿಸಿದ ಸಂದರ್ಭದಲ್ಲಿ ಆದಿಗ್ರಾಮೋತ್ಸವ ಗೌರವ ಹೊಸ ಸ್ಪೂರ್ತಿ ನೀಡಿದೆ ಎಂದು ಗೌರವ ಪುರಷ್ಕೃತ ನಂದಳಿಕೆ ಶ್ರೀಕಾಂತ್ ಭಟ್ ಸನ್ಮಾನ ಸ್ವೀಕರಿಸಿ ಉತ್ತರಿಸಿದರು.
ಸಮಾಜ ಸಂಘಟನೆಯ ಜವಾಬ್ದಾರಿಗೆ ಈ ಗ್ರಾಮ ಗೌರವ ನೀಡಿರುವುದು ಸಂತಸ ತಂದಿದೆ ಎಂದು ಗೌರವ ಸ್ವೀಕರಿಸಿದ ಸವಿತಾ ಸಮಾಜದ ಉಡುಪಿ ಜಿಲ್ಲಾ ಅಧ್ಯಕ್ಷ ಗೋವಿಂದ ಭಂಡಾರಿ ಹೇಳಿದರು.
ಗ್ರಾಮೋತ್ಸವ ಯುವ ಗೌರವಕ್ಕೆ ಕವಯತ್ರಿ ಪ್ರೇಮಾ. ವಿ ಸೂರಿಗ, ಸಮಾಜ ಸೇವಕ-ಉದ್ಯಮಿ ಉದಯ ಶೆಟ್ಟಿ ಕಾಂತಾವರ- ಪೂನಾ, ಕ್ರೀಡಾ ಅಂಕಣಕಾರ- ಸಮಾಜಸೇವಕ ನವೀನ್ ಕೆ. ಇನ್ನಾ ಮುಂಬಯಿ, ಪತ್ರಕರ್ತ ಪ್ರಸನ್ನ ಹೆಗ್ಡೆ ಮೂಡುಬಿದಿರೆ, ಗುರ್ಬಿ ಸಿನಿಮಾದ ನಾಯಕಿ ಅಶ್ವಿತಾ ನಾಯಕ್, ಸಂಘಟಕ ಪುಷ್ಟರಾಜ್ ಶೆಟ್ಟಿ ಅಜೆಕಾರು, ಅಂಗನವಾಡಿ ಶಿಕ್ಷಕಿ ಮಮತಾ ಪ್ರಶಾಂತ್ ಶೆಟ್ಟಿ ಕೈಕಂಬ, ಕಲಾವಿದೆ -ಪಂಚಾಯತ್ ಸದಸ್ಯೆ ಭವ್ಯ ಕೈಕಂಬ, ಪುಸ್ತಕ ಪ್ರಕಾಶಕ- ಮಾರಾಟಗಾರ ಪ್ರಕಾಶ ಕೊಡಂಕಿರಿ ಪುತ್ತೂರು , ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ ಉಡುಪಿ ಲೆಕ್ಕಾಧೀಕ್ಷಕ ಸುಂದರ ನಾಯ್ಕ್ ನೇಲ್‌ನಕರೆ, ಯುವ ಉದ್ಯಮಿ ಪ್ರದೀಪ್ ಹೆಗ್ಡೆ ಅಜೆಕಾರು, ಯಕ್ಷಗಾನ ಭಾಗವತರಾದ ಕಾವ್ಯಶ್ರೀ ಅಜೇರು. ಸಮಾಜ ಸೇವಕ-ಕವಿ ತಾರಾನಾಥ.ಜೆ. ಮೇಸ್ತ, ಗ್ರಾಮೋತ್ಸವ ಸಮಿತಿಯ ಆಕಾಶಬೆಟ್ಟು ಪ್ರಭಾಕರ ಶೆಟ್ಟಿ ಪಾತ್ರರಾದರು.
ಬೆಳ್ಳಿ ಹಬ್ಬದ ಸಂಭ್ರಮದ ಮಂಜುನಾಥ ಪೈ ಸ್ಮಾರಕ ಪದವಿಪೂರ್ವ ಕಾಲೇಜು ಮತ್ತು ಬೆಳ್ಳಿ ಹಬ್ಬದ ಬ್ರದರ್‍ಸ್ ಕ್ರಿಕೆಟರ್ ಸಂಸ್ಥೆ ಮತ್ತು ನೂತನ ಕ್ರಿಯಾಶೀಲ ಕೆಮ್ಮಂಜ- ಅಜೆಕಾರು ರಿಕ್ಷಾ ಚಾಲಕ ಮಾಲಕ ಸಂಘದವರು ಆದಿಗ್ರಾಮೋತ್ಸವ ಸಾಂಸ್ಥಿಕ ಗೌರವ ಸ್ವೀಕರಿಸಿದರು.
ಬಾಲಕೃಷ್ಣ ಹೆಗ್ಡೆ ಕವಿತಾ ವಾಚನ ಮಾಡಿದರು. ಶ್ರೀ ವಿನಾಯಕ ಯಕ್ಷ ಕಲಾ ತಂಡ ಮಕ್ಕಳ ಮೇಳ ಕೆರೆಕಾಡು ಅವರು ಮಹಿಷ ಮರ್ಧಿನಿ ಯಕ್ಷಗಾನ ಪ್ರದರ್ಶಿಸಿದರು. ವಿದ್ಯಾರ್ಥಿ ಸಾಧಕಿ ಆಳ್ವಾಸ್ ಕಾಲೇಜಿನ ಎಂ.ಎಸ್ಸಿ ವಿದ್ಯಾರ್ಥಿನಿ ಪೂಜಾ ಆಚಾರ್ಯ, ವಿವಾಹ ಜೀವನದ ಸುವರ್ಣ ಸಂಭ್ರಮದ ಗ್ರಾಮೋತ್ಸವದ ಮೊದಲ ಪ್ರಜೆಗಳಾದ ಶಂಕರ- ಗಿರಿಜಾ ದಂಪತಿಗಳನ್ನು, ಕಂಬಳ ಓಟಗಾರ ನಕ್ರೆ ಜಯಕರ ಮಡಿವಾಳ, ಪಂಚಾಯತ್ ಉಪಾಧ್ಯಕ್ಷೆ ಜ್ಯೋತಿ ಪೂಜಾರಿ, ಕೆರೆಕಾಡು ಮಕ್ಕಳ ಮೇಳದ ಅಧ್ಯಕ್ಷ ಜಯಂತ್ ಅಮೀನ್ ಅವರನ್ನು ಗೌರವಿಸಲಾಯಿತು.
ಪರಿಕಲ್ಪಕ- ಸಂಘಟಕ ಶೇಖರ ಅಜೆಕಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುರ್ಪಾಡಿ ರಮೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಸೌಮ್ಯಶ್ರೀ ಅಜೆಕಾರು, ಉಮಾಧರ ವಿಶ್ವಕರ್ಮ, ಜ್ಯೋತಿ, ಶ್ರೇಯಾ, ಆಶ್ರಯ್, ಅರುಣ್ ಶೆಟ್ಟಿ ನೀರೆ, ಆರ್ಥಿಕಾ, ಶ್ವೇತಾ, ಅಶ್ವಿನಿ ನಕ್ರೆ, ಸುಜಿತ್, ಉಮೇಶ್, ಭಾಸ್ಕರ್ ವಿನೋದಾ, ಶಾಲಿನಿ, ಸಂಪ, ಚಂದ್ರಕಲಾ, ಸುಖಲತಾ ಮೊದಲಾದವರು ಯಶಸ್ಸಿಗೆ ಸಹಕರಿಸಿದರು.