ಉಡುಪಿ: ಜಿಲ್ಲೆಯ ಕಾರ್ಕಳದ ಸಾಂತ್ ಮಾರಿ ಎಂದೇ ಪ್ರಸಿದ್ಧಿ ಪಡೆದಿರುವ ಕಾರ್ಕಳದ ಅತ್ತೂರು ಜಾತ್ರೆ ವಿಜ್ರಂಭಣೆಯಿಂದ ಪ್ರಾರಂಭಗೊಂಡಿದೆ. ದಕ್ಷಿಣ ಭಾರತದಲ್ಲೇ ಭಾವೈಕ್ಯದ ಅಗ್ರ ಧಾರ್ಮಿಕ ಕ್ಷೇತ್ರವಾದ ಸಂತ ಲಾರೆನ್ಸ್ ಚರ್ಚ್ ಝಗಮಗಿಸುವ ವಿದ್ಯುದ್ವೀಪಗಳಿಂದ ಕಂಗೊಳಿಸುತ್ತಿದ್ದು ರಾಜ್ಯ ಹೊರರಾಜ್ಯಗಳ ಭಕ್ತರ ದಂಡೇ ಹರಿದು ಬರುತ್ತಿದೆ. ತಂದೆಯಂತೆ ನೀವು ದಯಾವಂತರಾಗಿ ಎಂಬ ವೇದ ವಾಕ್ಯ ಸಂದೇಶದೊಂದಿಗೆ ನಡೆಯುತ್ತಿರುವ ಐದು ದಿನಗಳ ಉತ್ಸವದಲ್ಲಿ ಸಾವಿರಾರು ಭಕ್ತರು ಸಂತ ಲಾರೆನ್ಸ್ ನ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಇಷ್ಠಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ದಕ್ಷಿಣ ಭಾರತದಲ್ಲೇ ಸರ್ವಧರ್ಮ ಭಾವೈಕ್ಯ ಸಾರುವ ಕೇಂದ್ರ ಎಂಬ ಹೆಗ್ಗಳಿಕೆ ಅತ್ತೂರು ಚರ್ಚಿನದ್ದು . ಇಲ್ಲಿ ನಡೆಯುವ ವಾರ್ಷಿಕ ಜಾತ್ರೆಯಲ್ಲಿ ಕ್ರೈಸ್ತರು ಮಾತ್ರವಲ್ಲದೆ ಹಿಂದೂ – ಮುಸ್ಲಿಂ ರು ಪಾಲ್ಗೊಳ್ಳುವುದು ಇಲ್ಲಿನ ವೈಶಿಷ್ಟ್ಯ. ಜಾತ್ರಾ ಸಂದರ್ಭದಲ್ಲಿ 5 ದಿನಗಳಲ್ಲಿ 40 ಕ್ಕೂ ಹೆಚ್ಚು ಬಲಿ ಪೂಜೆಗಳು ನೆರವೇರುವುದು ಇಲ್ಲಿನ ಇನ್ನೊದು ವಿಶೇಷತೆಯಾಗಿದೆ. ಎರಡನೇ ದಿನವಾದ ಇಂದು ಸಾವಿರಾರು ಭಕ್ತರು ಆಗಮಿಸಿ ಸಂತ ಲಾರೆನ್ಸ್ ರ ಪವಾಡ ಸನ್ನಿಧಿಯಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಸಂತ ಲಾರೆನ್ಸ್ ರ ಜಾತ್ರೆಗೆ ಆಗಮಿಸುವ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಮೊಂಬತ್ತಿ ಹಚ್ಚಿ ಪ್ರಾರ್ಥನೆ ಸಲ್ಲಿಸುತ್ತಾರೆ. ಚರ್ಚ್ ನ ಒಳಭಾಗದಲ್ಲಿ ಎಲ್ಲಾ ಭಕ್ತರಿಗೂ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿದೆ.ಚರ್ಚ್ ಹಿಂಭಾಗದಲ್ಲಿ ಹಿಂದೂ ದೇವಸ್ಥಾನಗಳಲ್ಲಿ ಇರುವಂತೆ ಪುಷ್ಕರಣಿವೊಂದಿದೆ. ಜಾತ್ರೆಗೆ ಆಗಮಿಸಿದ ಭಕ್ತರು ಪುಷ್ನರಣಿಗೆ ತೆರಳಿ ನೀರನ್ನು ಮುಟ್ಟುವುದು ಇಲ್ಲಿನ ಸಂಪ್ರದಾಯಗಳಲ್ಲಿ ಒಂದು.ಉಳಿದಂತೆ ಕಳೆದ ವರ್ಷ ಹೇಳಿಕೊಂಡ ಹರಕೆಯನ್ನು ಈ ಬಾರಿ ಸಂತ ಲಾರೆನ್ಸನಿಗೆ ಸಲ್ಲಿಸುವುದು ವಾಡಿಕೆ.