ಮಂಗಳೂರು : ನಾವು ರೈತರ ಪರವಾಗಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಕೃಷಿಯಲ್ಲದ ಕುಂಮ್ಕಿ ಜಾಗವನ್ನು ಒತ್ತುವರಿ ಮಾಡಲು ಮುಂದಾಗುವ ಮೂಲಕ ರೈತರಿಗೆ ಮೋಸ ಮಾಡಲು ಯತ್ನಿಸುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಮಂಗಳೂರಿನ ಪಕ್ಷದ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿಯಲ್ಲದ ಕುಂಮ್ಕಿ ಜಾಗವನ್ನು ಒತ್ತುವರಿ ಮಾಡಬೇಕೆಂದು ರಾಜ್ಯ ಸರಕಾರದ ಕಂದಾಯ ಸಚಿವರು ಕೋರ್ಟ್ ಗೆ ಅಫಿದಾವತ್ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಒತ್ತುವರಿಯನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ತಿಳಿದಿದ್ದರೂ ಕೃಷಿಯಲ್ಲದ ಕುಂಮ್ಕಿ ಜಾಗವನ್ನು ಒತ್ತುವರಿ ಮಾಡಲು ಹೊರಟಿದೆ.ಈ ಮೂಲಕ ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಅಪಾದಿಸಿದರು.
ರೈತರಿಗೆ ಇಷ್ಟೊಂದು ದೊಡ್ಡ ರೀತಿಯಲ್ಲಿ ಅನ್ಯಾಯವಾಗುತ್ತಿದ್ದರೂ ರಾಜ್ಯದ ಯಾವ ಸಚಿವರು ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ. ರಾಜ್ಯ ಸರಕಾರದ ಈ ಇಬ್ಬಗೆ ನೀತಿಯಿಂದ ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಫೆ.6ರಂದು ಪುತ್ತೂರಿನಲ್ಲಿ ಕುಂಮ್ಕಿ ರೈತ ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸದರು ಮಾಹಿತಿ ನೀಡಿದರು.
ಎತ್ತಿನಹೊಳೆ ವಿರುದ್ಧ ಎರಡನೇ ಹಂತದ ಹೋರಾಟ :
ಈ ಸಂದರ್ಭದಲ್ಲಿ ಎತಿನಹೊಳೆ ಹೋರಾಟದ ಬಗ್ಗೆ ಸುದ್ಧಿಗಾರರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸಂಸದರು, ಎತ್ತಿನಹೊಳೆ ಯೋಜನೆಯ ಕಾಮಗಾರಿ ಸ್ಥಗಿತಗೊಳಿಸುವಂತೆ ಈಗಾಗಲೇ ನ್ಯಾಯಾಲಯ ಆದೇಶ ನೀಡಿದೆ. ಆದರೂ ಇನ್ನೂ ಕೂಡ ಕಾಮಗಾರಿ ಸ್ಥಗಿತಗೊಳಿದೆ ರಾಜ್ಯ ಸರಕಾರ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿದೆ.ಈ ಹಿನ್ನೆಲೆಯಲ್ಲಿ ಎತ್ತಿನಹೊಳೆ ಯೋಜನೆ ವಿರುದ್ಧ ಫೆಬ್ರವರಿ ಒಂದರಿಂದ 2ನೇ ಹಂತದ ಹೋರಾಟವನ್ನು ಆರಂಭಿಸಲಿದ್ದೇವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್‌ಸಿಂಹ ನಾಯಕ್, ಮಾಜಿ ಸಚಿವ ಜೆ.ಕೃಷ್ಣ ಪಾಲೆಮಾರ್, ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ನಿಕ್, ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಭಟ್ ಪಕ್ಷದ ಪ್ರಮುಖರಾದ ಲಾಲಾಜಿ ಮೆಂಡನ್, ಸಂಜೀವ ಮಠಂದೂರು, ಎಸ್.ಗಣೇಶ್ ರಾವ್ ಮತ್ತಿತ್ತರ ಪ್ರಮುಖರು ಉಪಸ್ಥಿತರಿದ್ದರು.