ಉಡುಪಿ: ಉಡುಪಿ ಜಿಲ್ಲೆಯ ಹಿರಿಯಡ್ಕದ ಅಂಜಾರು ಕಾಜರಗುತ್ತು ಎಂಬಲ್ಲಿನ ಜಿಲ್ಲಾ ಕಾರಗೃಹದಿಂದ ಇಬ್ಬರು ವಿಚಾರಣಾಧೀನ ಕೈದಿಗಳು ಎಸ್ಕೇಪ್ ಆದ ಘಟನೆ ಎರಡು ದಿನಗಳ ಹಿಂದೆ ನಡೆದಿದೆ.
ಹಾಸನ ಮೂಲದವರಾದ ಅಶೋಕ @ ಬಬ್ರು (19), ಕುಮಾರ್(22) ಜೈಲಿನಿಂದ ತಪ್ಪಿಸಿಕೊಂಡ ಖತರ್ನಾಕ್ ಆರೋಪಿಗಳು.
ಗಣರಾಜ್ಯೋತ್ಸವದ ಪ್ರಯುಕ್ತ ಕಾರಾಗೃಹದ ಹೊರಗಡೆ ಅವರಣದ ಸ್ವಚ್ಛತೆ ಹಾಗೂ ನೀರಿನ ಟ್ಯಾಂಕ್‌ನ್ನು ಶುಚಿಗೊಳಿಸಲು ಕಾರಾಗೃಹದ ಅಧಿಕಾರಿ ಎಮ್.ವಿ. ಶ್ರೀಧರ್‌ಪ್ರಭು ಅವರು ಸಂಜೆ ಸುಮಾರಿಗೆ ಗ್ಯಾಂಗ್ ತೆಗೆದುಕೊಂಡು ಹೊರಗಡೆ ಹೋಗಿದ್ದು ಕೆಲಸ ಮುಗಿಸಿ ಗ್ಯಾಂಗ್ ಪುನಃ ಮರಳಿದಾಗ ಸಂಜೆಯಾಗಿತ್ತು. ದ್ವಾರಪಾಲಕರು ಹೊರಗಡೆ ಕೆಲಸಕ್ಕೆ ಹೋದ ಗ್ಯಾಂಗ್‌ಗಳನ್ನು ಚೆಕ್ ಮಾಡಿದಾಗ ಇಬ್ಬರು ಇಲ್ಲದಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸುವಾಗ ಅಶೋಕ್ ಹಾಗೂ ಕುಮಾರ್ ತಪ್ಪಿಸಿಕೊಂಡಿರುವುದು ತಿಳಿದಿದೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಇಬ್ಬರ ಬಂಧನಕ್ಕೆ ಬಲೆ ಬೀಸಲಾಗಿದೆ.
(ಸಂಗ್ರಹ ಚಿತ್ರ)