
ಮಂಗಳೂರು,ಜ, 22 : ದ.ಕ ಜಿಲ್ಲೆಯನ್ನು ಇನ್ನೂ ಮುಂದೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಗೆ ಅವಕಾಶ ನೀಡಲು ನಿರಾಕರಿಸಿದ ಜಿಲ್ಲಾಧಿಕಾರಿ ಎ. ಬಿ. ಇಬ್ರಾಹಿಂ ಪ್ರತಿಭಟನೆ ನಡೆಸುವ ಪ್ರತಿಯೊಬ್ಬರಿಗೂ ಜಿಲ್ಲೆಯಲ್ಲಿ ನಾಲ್ಕು ಸ್ಥಳಗಳನ್ನು ಗೊತ್ತುಮಾಡಿ ವಾರದೊಳಗೆ ಸೂಚನೆ ಹೊರಡಿಸುವುದಾಗಿ ತಿಳಿಸಿದರು.
ನಗರದ ನೆಹರೂ ಮೈದಾನದ ಕ್ರಿಕೆಟ್ ಪೆವಿಲಿಯನ್ ಬಳಿ ಸಣ್ಣದಾದ ಪ್ರದೇಶ, ನೆಹರೂ ಮೈದಾನ (ಫುಟ್ಬಾಲ್) ಹಿಂಬದಿಯ ಟೆಂಪೋ ನಿಲುಗಡೆ ಸ್ಥಳ, ಸರ್ಕಾರಿ ನೌಕರ ಸಂಘದ ಸಭಾಭವನ ಆವರಣ, ಜಿಲ್ಲಾಧಿಕಾರಿ ಕಚೇರಿ ಆವರಣದ ಹಳೆ ಕ್ಯಾಂಟೀನ್ ಜಾಗವನ್ನು ಈಗಾಗಲೇ ಪರಿಶೀಲಿಸಲಾಗಿದ್ದು, ಇವು ಮುಂದೆ ಪ್ರತಿಭಟನೆಯ ತಾಣವಾಗಲಿವೆ ಎಂದು ಮಾಹಿತಿ ನೀಡಿದರು
ದಿನ ಬೆಳಗಾದರೆ ಹಲವಾರು ನೀತಿಗಳನ್ನು ಖಂಡಿಸಿ ಎಲ್ಲಾ ರಾಜಕೀಯ ಪಕ್ಷಗಳು, ವಿದ್ಯಾರ್ಥಿ ಸಂಘಟನೆಗಳು ಸೇರಿದಂತೆ ಸಾಮಾಜಿಕ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಇದನ್ನು ತಪ್ಪಿಸುವ ಸಲುವಾಗಿಯೆ ಈ ನಿರ್ಣಯಕ್ಕೆ ಬರಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.