
ಮಂಗಳೂರು, ಜ.21: ಕರಾವಳಿ ಕರ್ನಾಟಕದ ಮುಖ್ಯ ಧಾರ್ಮಿಕ ಕ್ಷೇತ್ರವಾದ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಳಕ್ಕೆ ಪ್ರತಿವರ್ಷ ದಂತೆ ಈ ವರ್ಷವೂ `ಅಮ್ಮನೆಡೆಗೆ ನಮ್ಮ ನಡೆ’ ಭಕ್ತರ ಪಾದಯಾತ್ರೆ ಯನ್ನು ಆಯೋಜಿಸಲಾಗಿದೆ. ಸಂದೀಪ್ ಶೆಟ್ಟಿ ಮರವೂರು ಅವರ ನೇತೃತ್ವದಲ್ಲಿ ರೂಪುಗೊಂಡ `ಪಾದಯಾತ್ರೆ ಸಮಿತಿ ಮರವೂರು’ ಮೂರನೇ ವರ್ಷದ ಈ ಕಾಲ್ನಡಿಗೆ ಧಾರ್ಮಿಕ ಜಾಥಾವನ್ನು ಹಮ್ಮಿ ಕೊಂಡಿದೆ ಎಂದು ಸಮಿತಿಯ ಭಾಸ್ಕರ್ ರೈ ಕುಕ್ಕುವಳ್ಳಿ, ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಜ. 24 ರಂದು ಭಾನುವಾರ ಬೆಳಿಗ್ಗೆ ಗಂಟೆ 7.30ಕ್ಕೆ ಮರವೂರು ಸೇತುವೆ ಬಳಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ದಿಂದ, ಮೂರನೇ ವರ್ಷದ `ಅಮ್ಮನೆಡೆಗೆ ನಮ್ಮ ನಡೆ’ ಕಾರ್ಯ ಕ್ರಮ ಆರಂಭವಾಗಲಿದೆ. ಅಂದು ಪ್ರಾಃತಕಾಲ 6.30ಕ್ಕೆ ಮರವೂರು ದೇವಸ್ಥಾನದಲ್ಲಿ ಭಕ್ತರ ಸಮಾವೇಶ, ಸಾಮೂಹಿಕ ಪ್ರಾರ್ಥನೆಯಾಗಿ ಭಾಸ್ಕರ ರೈ ಕುಕ್ಕುವಳ್ಳಿ ರಚಿಸಿದ `ಅಮ್ಮನೆಡೆಗೆ’ ಭಕ್ತಿಗೀತೆಯನ್ನು ಹಾಡಲಾಗುವುದು. ಕಟೀಲು ಕ್ಷೇತ್ರದ ಅಸ್ರಣ್ಣರು, ಬ್ರಹ್ಮಶ್ರೀ ಕೆ.ಎಸ್. ನಿತ್ಯಾನಂದ ಸ್ವಾಮೀಜಿ, ಲೋಕಸಭಾ ಸದಸ್ಯ ನಳೀನ್ ಕುಮಾರ್ ಕಟೀಲ್ ಇವರಿಂದ ಚಾಲನೆ ದೊರೆಯಲಿದೆ.
ದೂರದ ಊರುಗಳಿಂದ ಬರುವವರಿಗಾಗಿ ಮೊದಲ ದಿನವೇ ಮರವೂರು ದೇವಸ್ಥಾನದ ವಠಾರದಲ್ಲಿ ಉಳಕೊಳ್ಳುವ ವ್ಯವಸ್ಥೆ ಮಾಡಲಾ ಗಿದ್ದು, ಮರುದಿನ ಬೆಳಿಗ್ಗೆ ಎಲ್ಲರಿಗೂ ಉಪಹಾರ, ಪೂರ್ವಾಹ್ನ 11 ಗಂಟೆ ಸುಮಾರಿಗೆ ಕಟೀಲು ದೇವಾಲಯ ದಲ್ಲಿ ಶ್ರೀ ದೇವಿಯ ದರ್ಶನ, ಪ್ರಸಾದ ವ್ಯವಸ್ಥೆ ಮಾಡಲಾಗುವುದು. ಬೆಳಿಗ್ಗೆ ಗಂಟೆ 6.30ರಿಂದ ಆಯ್ದ ಕೆಲವು ಸ್ಥಳಗಳಿಂದ ಭಕ್ತರನ್ನು ಕರೆತರಲು ಜಿಲ್ಲೆಯ ಬಸ್ಸು ಮಾಲಕರ ಸಹಕಾರದಿಂದ ವಾಹನದ ವ್ಯವಸ್ಥೆ ಯನ್ನು ಮಾಡಲಾಗಿದೆ. ದಾರಿಯಲ್ಲಿ ನೀರು ಮತ್ತು ತಂಪು ಪಾನೀಯಗಳ ವ್ಯವಸ್ಥೆ ಸಂಚಾರಿ ವೈದ್ಯಕೀಯ ಸೌಲಭ್ಯ ಹಾಗೂ ಗುಂಪನ್ನು ನಿಯಂತ್ರಿಸಲು ಭದ್ರತಾ ವ್ಯವಸ್ಥೆ ಸ್ವಯಂ ಸೇವಕರ ಸೇವೆಯೂ ಲಭ್ಯವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಸಂದೀಪ್ ಶೆಟ್ಟಿ ಮರವೂರು ಸುಕೇಶ್ ಶೆಟ್ಟಿ ಮುಂಡಾರು ಗುತ್ತು, ರಾಘವ ಎಂ. ವೇಣು ಗೋಪಾಲ ಪುತ್ರನ್ ಉಪಸ್ಥಿತರಿದ್ದರು.