ಉಡುಪಿ: ಉಡುಪಿ ಜಿಲ್ಲೆಯ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಖರೀದಿಸಲು ಇನ್ನು ಹತ್ತು ದಿನಗಳ ಗಡುವು ಇದೆ. ಈ ಬಗ್ಗೆ ಪೊಲೀಸ್ ಜಿಲ್ಲಾ ಎಸ್ಪಿ ಅವರು ತಿಳಿಸಿದ್ದು ಜನರು ಫೆಬ್ರವರಿ 1 ತಾರಿಖಿನವರೆಗೂ ಈ ಹೆಲ್ಮೆಟ್ ಕಡ್ಡಾಯಕ್ಕೆ ಗಡುವು ಸಿಕ್ಕಿದೆ.
ರಾಜ್ಯ ಸರ್ಕಾರದ ಅಧಿಸೂಚನೆಯಲ್ಲಿ ನಮೂದಿಸುವಂತೆ ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರು ಕರ್ನಾಟಕ ಮೋಟಾರು ವಾಹನ ನಿಯಮ 1989, ನಿಮಯ 230, ಉಪನಿಯಮ 1 ರ ಅನ್ವಯ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿದ್ದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ದ್ವಿಚಕ್ರ ವಾಹನ ಸವಾರರಲ್ಲಿ ಹೆಲ್ಮೆಟ್ ಧರಿಸಿ ವಾಹನವನ್ನು ಚಲಾಯಿಸಲು ಹೆಚ್ಚಿನ ಜಾಗೃತಿ, ಅರಿವು ಮೂಡಿಸಲು ಅಪಘಾತ ತಡೆ ಮಾಸ, ರಸ್ತೆ ಸುರಕ್ಷಾ ಸಪ್ತಾಹ ಮತ್ತು ಪೊಲೀಸ್ ಅಧಿಕಾರಿಗಳ ತಂಡ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಲ್ಲಿ ಹೆಲ್ಮೆಟ್ ಬಳಕೆಯ ಮಹತ್ವದ ಬಗ್ಗೆ ಮನವರಿಕೆಯನ್ನು ಮಾದಿದ್ದು ಪ್ರಸ್ತುತವೂ ಈ ಬಗ್ಗೆ ಜಾಗೃತಿಗಾಗಿ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.
(ಚಿತ್ರಗಳು- ಕುಂದಾಪುರ)
ಜನರ ಕಷ್ಟಕ್ಕೆ ಪೊಲೀಸರ ಸ್ಪಂದನೆ:
ಹೆಲ್ಮೆಟ್ ಕಡ್ಡಾಯದ ಬಗ್ಗೆ ಸಾರ್ವಜನಿಕರು ಉಡುಪಿ ಜಿಲ್ಲಾ ಪೊಲೀಸ್ ಕಛೇರಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿ ಅಂಗಡಿಗಳಲ್ಲಿ ಹೆಲ್ಮೆಟ್ ಶಾರ್ಟ್‌ಜ್ (ಕಡಿಮೆ)ಇರುವ ಬಗ್ಗೆ ಮತ್ತು ಹೆಲ್ಮೆಟ್ ಖರೀದಿಸಲು ಆಗುವ ಅನಾನುಕೂಲದ ಬಗ್ಗೆ ತಿಳಿಸಿ ಕೋರಿಕೆಯನ್ನು ಸಲ್ಲಿಸಿದ್ದ ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ. ಸಾರ್ವಜನಿಕರ ಕೋರಿಕೆಯನ್ನು ಗಮನದಲ್ಲಿಟ್ಟುಕೊಂಡು ಅಂತಿಮವಾಗಿ ಇಂದಿನಿಂದ ಮುಂದಿನ 10 ದಿನಗಳ ಕಾಲ ದ್ವಿ ಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಲೇಬೇಕಾದ ನಿಯಮವಿಲ್ಲ. ಹತ್ತು ದಿನಗಳ ಕಾಲ ಅನಾನುಕೂಲವಿರುವ ಸವಾರರಿಗೆ ಹೆಲ್ಮೆಟ್ ಖರೀದಿಗೆ ಅವಕಾಶವನ್ನು ನೀಡಲಾಗಿದೆ.
ಫೆ.1 ರಿಂದ ದಂಡ ಗ್ಯಾರೆಂಟಿ:
ನೀಡಿರುವ ಸೂಕ್ತ ಸಮಯದಲ್ಲಿ ಎಲ್ಲರೂ ಹೆಲ್ಮೆಟ್ ಖರೀದಿ ಮಾಡಬೇಕು. ಫೆಬ್ರವರಿ 1 ರಿಂದ ಉಡುಪಿ ಜಿಲ್ಲೆಯಲ್ಲಿ ಕಡ್ಡಾಯವಾಗಿ ನಿಯಮಾನುಸಾರ ಎಲ್ಲಾ ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರು ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಅಲ್ಲದೇ ನಿಯಮ ಉಲ್ಲಂಘಿಸಿದಲ್ಲಿ ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಿದಂತೆ ದಂಡವನ್ನು ವಿಧಿಸಲಾಗುತ್ತದೆ ಎಂದು ಉಡುಪಿ ಜಿಲ್ಲಾ ಎಸ್ಪಿ ಕೆ. ಅಣ್ಣಾಮಲೈ ಅವರು ತಿಳಿಸಿದ್ದಾರೆ.
ಕುಂದಾಪುರ ಪೊಲೀಸರ ಸೂಚನೆ:
ಕುಂದಾಪುರ ಭಾಗದಲ್ಲಿ ಬೀದಿ ಬದಿಗಳಲ್ಲಿ ಹೆಲ್ಮೆಟ್ ವ್ಯಾಪಾರ ನಡೆಸುತ್ತಿದ್ದು, ವ್ಯಾಪಾರಿಗಳು ಐ.ಎಸ್.ಐ. ಮಾರ್ಕ್ ಇರುವ ಹೆಲ್ಮೆಟ್ ಮಾರಬೇಕು ಅಲ್ಲದೇ ಎಂ.ಆರ್.ಪಿ. ದರಕ್ಕಿಂತ ಜಾಸ್ಥಿ ಹಣ ಪಡೆದುಕೊಳ್ಳಬಾರದು ಎಂದು ಪೊಲಿಸರು ಅಲ್ಲಲ್ಲಿ ಸಾರ್ವಜನಿಕರಿಗೆ ಹಾಗೂ ವ್ಯಾಪಾರಿಗಳಿಗೆ ಜಾಗ್ರತಿ ಹೇಳುವ ಕಾರ್ಯವನ್ನು ಬುಧವಾರ ಸಂಜೆಯಿಂದ ಮಾಡುತ್ತಿದ್ದಾರೆ. ಒಂದೊಮ್ಮೆ ನಿಯಮ ಮೀರಿದರೇ ಅಂಗಡಿಯವರ ವಿರುದ್ಧವೂ ಕ್ರಮಕೈಗೊಳ್ಳುವ ಖಡಕ್ ಎಚ್ಚರಿಕೆ ಈ ಸಂದರ್ಭ ನೀಡಿದ್ದಾರೆ. ಕುಂದಾಪುರದ ವ್ರತ್ತನಿರೀಕ್ಷಕ ದಿವಾಕರ್ ಪಿ.ಎಂ., ಟ್ರಾಫಿಕ್ ಠಾಣೆ ಎಸ್.ಐ. ಜಯ, ದೇವೇಂದ್ರ ಹಾಗೂ ಸಿಬ್ಬಂದಿಗಳು ಈ ಸಂದರ್ಭ ಇದ್ದರು.
ವರದಿ- ಯೋಗೀಶ್ ಕುಂಭಾಸಿ