ಉಡುಪಿ: ಮನೆಯಲ್ಲಿ ಒಂಟಿಯಾಗಿದ್ದ ಅಪ್ರಾಪ್ತ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದಡಿಯಲ್ಲಿ ವ್ಯಕ್ತಿಯೋರ್ವನ ವಿರುದ್ಧ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ಸಾಬ್ರಕಟ್ಟೆ ಶಿರಿಯಾರ ಸಮೀಪದ ಎತ್ತಿನಟ್ಟು ಪರಿಸರದಲ್ಲಿ ಈ ಘಟನೆ ಇತ್ತೀಚೆಗೆ ನಡೆದಿದ್ದು ಸ್ಥಳೀಯ ನಿವಾಸಿ ರಾಕೇಶ್ ನಾಯಕ್(29) ಎನ್ನುವಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಆತ ತಲೆಮರೆಸಿಕೊಂಡಿದ್ದಾನೆ.
ಘಟನೆ ವಿವರ: ಎತ್ತಿನಟ್ಟು ಪರಿಸರದ ಶಾಲೆಯೊಂದರ ಕಾರ್ಯಕ್ರಮದ ಸಲುವಾಗಿ ಸಮಿತಿ ರಚಿಸಿಕೊಂಡು ದೇಣಿಗೆ ಸಂಗ್ರಹ ಕಾರ್ಯವನ್ನು ಮಾಡಲಾಗುತ್ತಿತ್ತು. ಆದರೇ ಸಮಿತಿಯಲ್ಲಿರದ ರಾಕೇಶ್ ಕೂಡ ಈ ದೇಣಿಗೆ ಸಂಗ್ರಹದಲ್ಲಿ ಪಾಲ್ಘೊಂಡು ಅಲ್ಲಲ್ಲಿ ವಸೂಲಿಗೆ ತೆರಳಿದ್ದ ಎನ್ನಲಾಗಿದೆ. ಇತ್ತೀಚೆಗೆ ಗುಂಪಿನಲ್ಲಿ ಮನೆಮೆನೆಗೆ ದೇಣಿಗೆ ಸಂಗ್ರಹಕ್ಕೆ ತೆರಳಿದ್ದ ವೇಳೆ ಯುವತಿಯೊಬ್ಬಳು ಏಕಾಂಗಿಯಾಗಿರುವುದು ಈತನ ಗಮನಕ್ಕೆ ಬಂದಿದೆ. ಆಕೆಯಿಂದ ದೇಣಿಗೆ ಪಡೆದ ತಂಡವು ವಾಪಾಸ್ಸು ತೆರಳಿದ್ದು ಈತ ಆ ಗುಂಪಿನ ಬಳಿ ತಾನು ನೀರು ಕುಡಿದು ಬರುವುದಾಗಿ ಆ ಮನೆಗೆ ಮರಳಿ ಬಂದಿದ್ದು ಯುವತಿ ಬಳಿ ಅನುಚಿತವಾಗಿ ವರ್ತಿಸಿದ್ದಾನೆನ್ನಲಾಗಿದೆ, ಕೂಡಲೇ ಯುವತಿ ಕೂಗಾಡಿದ್ದು ಬೆದರಿತ ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ನೊಂದ ಯುವತಿ ಪೋಷಕರೊಡನೆ ತೆರಳಿ ಕೋಟ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸುತ್ತಾಳೆ. ಇತ್ತ ತನ್ನ ವಿರುದ್ಧ ದೂರು ದಾಖಲಾಗುವ ಮಾಹಿತಿ ಅರಿತ ಆರೋಪಿ ರಾಕೇಶ್ ಪರಾರಿಯಾಗಿದ್ದು ಈವರೆಗೂ ಆತನ ಸುಳಿವು ಪೊಲೀಸರಿಗೆ ಲಭ್ಯವಾಗಿಲ್ಲ.
ಕೋಟ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯನ್ವಯ ಆರೋಪಿ ರಾಕೇಶನ ವಿರುದ್ಧ ಪ್ರಕರಣ ದಾಖಲಾಗಿದ್ದು ಆತನ ಪತ್ತೆಗೆ ಬಲೆಬೀಸಲಾಗಿದೆ.