
ವಿಟ್ಲ, ಜ.19: ತಾಲೂಕಿನ ವಿಟ್ಲ ಸಮೀಪದ ಕಳಂಜಿಮಲೆ ರಕ್ಷಿತಾರಣ್ಯಕ್ಕೆ ಸೇರಿದ ಉಕ್ಕುಡ, ಕನ್ಯಾನ ರಸ್ತೆಯ ಆನೆಪದವು ಎಂಬಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಗೆ ಅಪಾರ ಪ್ರಮಾಣದ ಅರಣ್ಯ ಸಂಪತ್ತು ಸುಟ್ಟು ಭಸ್ಮವಾಗಿದೆ.
ಇಲ್ಲಿನ 35 ಹೆಕ್ಟೇರ್ ರಕ್ಷಿತಾರಣ್ಯದಲ್ಲಿ 8.7 ಎಕ್ರೆಯಷ್ಟು ಪ್ರದೇಶ ಹೊತ್ತಿ ಉರಿದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಜತೆಗೆ 500ಕ್ಕೂ ಅಧಿಕ ಮಂದಿ ಸ್ಥಳೀಯ ನಿವಾಸಿಗಳ ಸತತ ಐದು ತಾಸಿನ ಸತತ ಕಾರ್ಯಾಚರಣೆಯ ಬಳಿಕ ಕೊನೆಗೂ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕನ್ಯಾನದಿಂದ ವಿಟ್ಲ ಕಡೆಗೆ ಸಾಗುತ್ತಿದ್ದ ಬೈಕ್ ಸವಾರೊಬ್ಬರು ಆನೆಪದವು ಸಮೀಪ ರಸ್ತೆ ಬದಿಯಲ್ಲಿ ಬೆಂಕಿ ಉರಿಯುತ್ತಿರುವ ಬಗ್ಗೆ ಉಕ್ಕುಡ ಅರಣ್ಯ ಇಲಾಖೆ ಚೆಕ್ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ತಕ್ಷಣ ವಿಟ್ಲ ಉಪವಲಯ ಅರಣ್ಯಾಧಿಕಾರಿ ಲೋಕೇಶ್, ಅರಣ್ಯ ರಕ್ಷಕರಾದ ಪದ್ಮನಾಭ, ರವಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಬೆಂಕಿ ನಂದಿತು ಎನ್ನುವಷ್ಟರಲ್ಲಿ ಗಾಳಿಯ ವೇಗ ಹೆಚ್ಚಾಗಿ ಬೆಂಕಿಯ ಕಿಡಿಗಳು ಹಾರಿ ಹಲವು ಕಡೆಯಲ್ಲಿ ಒಣಗಿದ ಮುಳಿ ಹುಲ್ಲಿನ ಮೇಲೆ ಬಿದ್ದಿದೆ. ಇದರಿಂದ ಹಲವು ಕಡೆಗಳಲ್ಲಿ ಬೆಂಕಿ ಉರಿಯಲಾರಂಭಿಸಿತು. ಗುಡ್ಡಕ್ಕೆ ಬೆಂಕಿ ಬಿದ್ದ ಮಾಹಿತಿ ತಿಳಿದ ಸಾರ್ವಜನಿಕರು ಸ್ಥಳಕ್ಕೆ ಬಂದು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಸಹಕರಿಸಿದರು.
ಬೆಂಕಿ ರಸ್ತೆಯ ಬದಿಯಿಂದ ಹಿಡಿದು, ಗುಡ್ಡ ಮೇಲ್ಭಾಗದವರೆಗೆ ಹಂತ ಹಂತವಾಗಿ ವ್ಯಾಪಿಸುತ್ತಿತ್ತು. ಬಂಟ್ವಾಳ ಹಾಗೂ ಪುತ್ತೂರು ಅಗ್ನಿಶಾಮಕ ದಳದವರಿಗೆ ಬೆಂಕಿ ಗುಡ್ಡದಲ್ಲಿ ವ್ಯಾಪಿಸುತ್ತಿರುವ ಬಗ್ಗೆ ಮಾಹಿತಿ ನೀಡಲಾಯಿತು. ಸುಮಾರು 10.50ಕ್ಕೆ ಬಂಟ್ವಾಳದ ಒಂದು ವಾಹನ ಸ್ಥಳಕ್ಕೆ ತಲುಪುತ್ತದೆ. ಆದರೆ ಕಾರ್ಯಾಚರಣೆ ಮಾಡಲು ರಸ್ತೆ ಸರಿಯಿಲ್ಲ ಎಂಬ ನೆಪ ಹೇಳಿ ವಾಹನ ರಸ್ತೆಯ ಬದಿಯಲ್ಲಿ ಉಳಿಯುತ್ತದೆ. ಸಾರ್ವಜನಿಕರು ಅಗ್ನಿಶಾಮಕ ಸಿಬ್ಬಂದಿಗೆ ಹಿಡಿ ಶಾಪ ಹಾಕುತ್ತಾ ಕೈಗೆ ಸಿಕ್ಕಿದ ಮರದ ಗೆಲ್ಲುಗಳು, ಸಸಿಗಳ ಚಿಗುರುಗಳನ್ನು ಹಿಡಿದು ಬೆಂಕಿ ನಂದಿಸಲು ಹರ ಸಾಹಸ ಪಟ್ಟರು. ಬೆಂಕಿ ತೀವ್ರವಾಗುತ್ತಿತ್ತಾದರೂ ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಬೆಳಗ್ಗಿನ ಜಾವ 2.30ರ ಸುಮಾರಿಗೆ ಉರಿಯುತ್ತಿದ್ದ ಬೆಂಕಿಯನ್ನು ಸಂಪೂರ್ಣ ನಂದಿಸುವಲ್ಲಿ ಯಶಸ್ವಿಯಾದರು.