
ಮಂಗಳೂರು : ಕ್ಷುಲ್ಲಕ ವಿಚಾರಕ್ಕಾಗಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ಕೋಮು ಬಣ್ಣಕ್ಕೆ ತಿರುಗಿ ಬಳಿಕ ಮಾರಕಾಸ್ತ್ರಗಳ ಮೂಲಕ ದಾಳಿ ಮಾಡುವವರೆಗೆ ಮುಂದುವರಿದು ಪರಿಸರ ಪ್ರಕ್ಷುಬ್ದಗೊಂಡ ಘಟನೆ ಮಂಗಳೂರಿನ ಹೊರವಲಯದ ಪಡೀಲ್‌ನಲ್ಲಿ ರವಿವಾರ ರಾತ್ರಿ ನಡೆದಿದೆ.
ರವಿವಾರ ರಾತ್ರಿ ಪಡೀಲು ಓವರ್ ಬ್ರಿಡ್ಜ್ ಹತ್ತಿರ ಯುವಕರ ಗುಂಪೊಂದು ವಾಹನಕ್ಕೆ ದಾರಿ ಬಿಡುವ ವಿಚಾರದಲ್ಲಿ ಉಸ್ತಾದ್‌ರೊಬ್ಬರ ಮೇಲೆ ಹಲ್ಲೆಗೆ ಯತ್ನಿಸುತ್ತಿದ್ದು, ತಡೆಯಲು ಮುಂದಾದ ಯುವಕನೋರ್ವನ ಮೇಲೆ ಅದೇ ಗುಂಪು ಮಾರಕಾಯುಧಗಳಿಂದ ಹಲ್ಲೆ ನಡೆಸಿದೆ ಎನ್ನಲಾಗಿದೆ.
ಬಜಾಲ್ ವಿಜಯನಗರ ಧರ್ಮಗುರು ಫಾರೂಕ್ ದಾರಿಣಿ ಅವರ ಮೇಲೆ ಹಲ್ಲೆ ನಡೆಯುತ್ತಿದ್ದ ಸಂದರ್ಭ ಅದೇ ದಾರಿಯಿಂದ ಬರುತ್ತಿದ್ದ ಬಜಾಲ್ ನಿವಾಸಿಗಳಾದ ಸಿರಾಜ್ ಮತ್ತು ಫಕ್ರುದ್ದೀನ್ ಎಂಬುವರು ಹಲ್ಲೆಯನ್ನು ತಡೆಯಲು ಮುಂದಾದಗ ಅವರ ಮೇಲೆ ಕೂಡ ಈ ತಂಡ ಹಲ್ಲೆ ನಡೆಸಿದೆ ಎನ್ನಲಾಗಿದೆ.
ಘಟನೆಯಲ್ಲಿ ಫೈಸಲ್ ನಗರದ ನಿವಾಸಿ ಸಿರಾಜುದ್ದೀನ್ (30) ಎಂಬವರು ತಲವಾರು ಏಟಿನಿಂದ ಗಾಯಗೊಂಡರೆ, ಜೊತೆಗಿದ್ದ ಫಕ್ರುದ್ದೀನ್ ಎಂಬುವರಿಗೆ ಕಲ್ಲಿನಿಂದ ಜಜ್ಜಿ ಹಲ್ಲೆ ನಡೆಸಲಾಗಿದ್ದು, ತೀವ್ರವಾಗಿ ಗಾಯಗೊಂಡ ಈ ಇಬ್ಬರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಮಂಗಳೂರಿನಲ್ಲಿ ತರಕಾರಿ ಅಂಗಡಿ ಹೊಂದಿರುವ ಸಿರಾಜುದ್ದೀನ್, ರವಿವಾರ ರಾತ್ರಿ ಎಂದಿನಂತೆ ಅಂಗಡಿ ಬಂದ್ ಮಾಡಿ ದ್ವಿಚಕ್ರ ವಾಹನದಲ್ಲಿ ಫೈಸಲ್ ನಗರದ ಬಳಿಯಿರುವ ತನ್ನ ಮನೆ ಕಡೆಗೆ ತೆರುಳುತ್ತಿದ್ದ ವೇಳೆ ಅವರು ಬಜಾಲ್ ರೈಲ್ವೆ ಅಂಡರ್‌ಪಾಸ್ ಬಳಿ ತಲುಪಿದಾಗ ಗುಂಪೊಂದು ಪಡೀಲ್ ಬಳಿಯ ವಿಜಯನಗರದ ಮಸೀದಿಯೊಂದರ ಉಸ್ತಾದ್‌ರನ್ನು ನಿಲ್ಲಿಸಿ ಅವಾಚ್ಯವಾಗಿ ನಿಂದಿಸಿ, ಅವರ ಶರ್ಟ್‌ನ ಕಾಲರ್ ಹಿಡಿದು ಹಲ್ಲೆಗೆ ಯತ್ನಿಸುತ್ತಿತ್ತು ಎಂದು ಸಿರಾಜುದ್ದೀನ್ ಆರೋಪಿಸಿದ್ದಾರೆ. ಈ ವೇಳೆ ತನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಅವರ ಬಳಿ ತೆರಳಿ ವಿಷಯವನ್ನು ಅರಿಯಲು ಯತ್ನಿಸಿದಾಗ ಅದೇ ಗುಂಪು ಉಸ್ತಾದ್‌ರನ್ನು ಬಿಟ್ಟು ತನ್ನನ್ನು ನಿಂದಿಸಿ ಹಲ್ಲೆ ನಡೆಸಿತು ಎಂದು ಸಿರಾಜುದ್ದೀನ್ ಆರೋಪಿಸಿದ್ದಾರೆ.
ಹಲ್ಲೆ ನಡೆಸಿದ ಗುಂಪಿನಲ್ಲಿ ಪಡೀಲ್ ವೀರನಗರದ ನಿವಾಸಿ ಸಾಗರ್ ಎಂಬಾತ ಪ್ರಮುಖನಾಗಿದ್ದು, ಅವರ ಜೊತೆಗೆ ಸತೀಶ್, ಗಣೇಶ್, ಜಗ್ಗ, ಅಶ್ವಿನ್, ಪ್ರಜ್ವಲ್, ಕಾರ್ತಿಕ್ ಎಂಬವರನ್ನು ತಾನು ಗುರುತಿಸಿರುವುದಾಗಿ ಸಿರಾಜುದ್ದೀನ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ತಂಡವೊಂದರಿಂದ ಮನೆಗೆ ನುಗ್ಗಿ ಹಲ್ಲೆ :
ಕೆಲವೇ ಸಮಯಗಳಲ್ಲಿ ಈ ವಿಷಯ ಸಾಮಾಜಿಕ ಜಾಲತಾಣಗಳ ಮೂಲಕ ಕಾಡ್ಗಿಚ್ಚಿನಂತೆ ಹರಿದಾಡಿ ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಯುವಕರ ಗುಂಪೊಂದು ಕೈಯಲ್ಲಿ ತಲವಾರು, ದೊಣ್ಣೆ ಮತ್ತಿತರ ಆಯುಧಗಳನ್ನು ಹಿಡಿದುಕೊಂಡು ಫೈಸಲ್ ನಗರದ ಅಪ್ಪು ಪೂಜಾರಿ ಎಂಬುವರ ಮನೆಯಲ್ಲಿ ಪಾರ್ಟಿ ನಡೆಯುತ್ತಿದ್ದ ಸಂದರ್ಭ ಮನೆಗೆ ನುಗ್ಗಿ ಅಲ್ಲಿದ್ದವರಿಗೆ ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲದೇ ಮನೆಯಲ್ಲಿ ಮಲಗಿದ್ದ ವೃದ್ಧೆಯನ್ನು ಮಂಚದಿಂದ ಎಳೆದು ಹಾಕಿ ಮನೆ ಮುಂದಿದ್ದ ಅಲ್ಟೋ ಕಾರು ಮತ್ತು ಪಲ್ಸರ್ ಬೈಕ್‌ಗೆ ಹಾನಿಗೊಳಿಸಿದ್ದಾರೆ ಎನ್ನಲಾಗಿದೆ.
ಬಳಿಕ ಪಕ್ಕದಲ್ಲೇ ಇರುವ ದೀಕ್ಷಿತ್ ಎಂಬುವರ ಮನೆಗೆ ನುಗ್ಗಿ ಅಲ್ಲಿಯೂ ದಾಂಧಲೆ ನಡೆಸಿ, ಅಲ್ಲಿದ್ದ ಆರ್- ಒನ್ ೫ ಬೈಕ್ ಮತ್ತು ಆಕ್ಟೀವಾ ಹೋಂಡಾ ದ್ವಿಚಕ್ರ ವಾಹನವನ್ನು ಪುಡಿಮಾಡಿದ್ದಾರೆ ಎನ್ನಲಾಗಿದೆ.