ಪುತ್ತೂರು,ಜ.16 : ರಬ್ಬರ್ ಬೆಳೆಗೆ ಕರ್ನಾಟಕ ರಾಜ್ಯ ಸರ್ಕಾರ ಕೇರಳ ಮಾದರಿಯಲ್ಲಿ ಪ್ರೊತ್ಸಾಹ ಧನ ನೀಡುವಂತೆ ಆಗ್ರಹಿಸಿ ಜ.18ರಂದು ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೃಹತ್ ಹಕ್ಕೊತ್ತಾಯ ಸಭೆ ನಡೆಯಲಿದೆ ಎಂದು ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಸಂಘ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಹೇಳಿದರು.
ರಬ್ಬರ್ಗೆ ಕೇರಳ ರಾಜ್ಯ ಸರ್ಕಾರ 150 ರೂ. ಬೆಂಬಲ ಬೆಲೆ ಘೋಷಿಸಿದೆ. ಕೇರಳ ಬಜೆಟ್ನಲ್ಲಿ 300 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಯೋಜನೆ ಹಮ್ಮಿಕೊಳ್ಳಬೇಕು. ಆದ್ದರಿಂದ ರಾಜ್ಯ ಸರ್ಕಾರ ರಬ್ಬರ್ ಬೆಳೆಗಾರರ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳಬೇಕೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನೈಸರ್ಗಿಕ ರಬ್ಬರ್ ಆಮದು ಪೂರ್ಣವಾಗಿ ನಿಷೇಧಿಸಬೇಕು. ತಪ್ಪಿದಲ್ಲಿ ಶೇ.25ರಷ್ಟಿರುವ ಆಮದು ಸುಂಕ ಶೇ.70ಕ್ಕೆ ಏರಿಸಬೇಕು. ರಬ್ಬರಿನ ಉತ್ಪಾದನಾ ವೆಚ್ಚ ಅನುಸರಿಸಿ ಕೇಂದ್ರ ಸರ್ಕಾರ ಕನಿಷ್ಠ ಧಾರಣೆ ನಿಗದಿಪಡಿಸಬೇಕು. ರಾಷ್ಟ್ರೀಯ ರಬ್ಬರ್ ಪಾಲಿಸಿ ಕೂಡಲೇ ಘೋಷಿಸಿ ಅನುಷ್ಠಾನಗೊಳಿಸಬೇಕು. ಕೃಷಿಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ನಿಷೇಧಿಸಬೇಕು ಎಂಬ ಬೇಡಿಕೆ ಜಿಲ್ಲಾಧಿಕಾರಿ ಮೂಲಕ ಸರ್ಕಾರದ ಮುಂದಿಡಲಾಗುವುದು ಎಂದರು.
ನಿಷ್ಕ್ರೀಯ ಬೋರ್ಡ್ :
ರಬ್ಬರ್ ಬೋರ್ಡ್ ನಿಷ್ಕ್ರಿಯವಾಗಿದೆ. ಬೋರ್ಡ್ನ ಅಸ್ತಿತ್ವವನ್ನೇ ಬರ್ಕಾಸ್ತು ಮಾಡುತ್ತಾರೆಂಬ ಮಾಹಿತಿ ಸಿಕ್ಕಿದೆ. ಕಳೆದೆರಡು ವರ್ಷಗಳಿಂದ ರಬ್ಬರ್ ಮಂಡಳಿಗೆ ಪುನರ್ ನಾಮಕರಣ ನಡೆಯುತ್ತಿಲ್ಲ. ಪ್ರಭಾರ ಅಧ್ಯಕ್ಷರಿಂದ ಮಂಡಳಿ ಕಾರ್ಯನಿರ್ವಹಿಸುತ್ತಿದೆ. ರಬ್ಬರ್ ಉತ್ಪಾದನಾ ಆಯುಕ್ತರು ಇಲ್ಲದಿರುವುದರಿಂದ ರೈತರ ಸಮಸ್ಯೆ ಆಲಿಸುವವರೇ ಇಲ್ಲದಂತಾಗಿದೆ. ಆದ್ದರಿಂದ ಕೂಡಲೇ ಕರ್ನಾಟಕಕ್ಕೆ ಸೂಕ್ತ ಪ್ರಾತಿನಿಧ್ಯದೊಂದಿಗೆ ರಬ್ಬರ್ ಮಂಡಳಿ ಪುನರ್ರಚಿಸಬೇಕು ಎಂದರು. ನಿರ್ದೇಶಕರಾದ ಶ್ರೀರಾಂ ಪಕ್ಕಳ, ಜಾರ್ಜ್ ಕುಟ್ಟಿ, ಸುಭಾಶ್ ನಾಯಕ್ ಉಪಸ್ಥಿತರಿದ್ದರು.