
ಕುಂದಾಪುರ: ಕುಂದಾಪುರ ತಾಲೂಕು ಚಿತ್ತೂರು ಗ್ರಾಮದ ಮಾರಣಕಟ್ಟೆ ದೇವಸ್ಥಾನದ ಮಕರ ಸಂಕ್ರಾಂತಿ ಜಾತ್ರೆಯ ದಿನವಾದ ಜ.14 ರಂದು ದೇವಸ್ಥಾನ ಸಮೀಪ ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಗಳ ಮೇಲೆ ಕಿಡಿಗೇಡಿಗಳಿಬ್ಬರು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
ಸಂತೋಷ್ ಶೆಟ್ಟಿ ಹಾಗೂ ಪ್ರಕಾಶ ಶೆಟ್ಟಿ ಎನ್ನುವವರೇ ಪೊಲೀಸರ ಮೇಲೆ ಹಲ್ಲೆ ನಡೆಸಿದರೆನ್ನಲಾದ ಆರೋಪಿಗಳಾಗಿದ್ದಾರೆ.
ಘಟನೆ ವಿವರ: ಶ್ರೀ ಬೃಹ್ಮಲಿಂಗೇಶ್ವರ ದೇವಸ್ಥಾನ ಹತ್ತಿರ ರಾತ್ರಿ ಪಾಳಿಯಲ್ಲಿ ಸಂಚಾರ ನಿಯಂತ್ರಣ ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರ ಪೊಲೀಸ್ ಠಾಣೆ ಕುಂದಾಪುರದ ಸಿಬ್ಬಂದಿ ಈಶ್ವರ ಹಾಗೂ ಮೂವಿಂಗ್ ಕರ್ತವ್ಯ ನಿರ್ವಹಿಸುತ್ತಿದ್ದ ಶಂಕರನಾರಾಯಣ ಠಾಣಾ ಸಿಬ್ಬಂದಿ ಪ್ರಶಾಂತ ಎನ್ನುವವರ ಮೇಲೆ ಹಲ್ಲೆ ನಡೆದಿದೆ. ರಾತ್ರಿ 10.30ರ ಸುಮಾರಿಗೆ ಬೊಲೇರೋ ವಾಹನದಲ್ಲಿ ಮಾರಣಕಟ್ಟೆ ಕಡೆಯಿಂದ ಬಂದ ಆರೋಪಿಗಳಿಬ್ಬರು ಸಮವಸ್ತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯವರನ್ನು ಉದ್ದೇಶಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಸಮವಸ್ತ್ರದ ಕಾಲರ್ ಗೆ ಕೈ ಹಾಕಿ ಎಳೆದು, ನಂತರ ಕೈಯಿಂದ ಮುಷ್ಟಿಗಟ್ಟಿ ಮುಖಕ್ಕೆ, ಗಲ್ಲಕ್ಕೆ ಗುದ್ದಿ ತೀವ್ರ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಆರೋಪಿಸಲಾಗಿದೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
(ಸಾಂದರ್ಭಿಕ ಚಿತ್ರ)