
ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು,ಜನವರಿ . 16 : ರಸ್ತೆ ಸುರಕ್ಷತೆಯ ಜಾಗೃತಿಗಾಗಿ ಸ್ವಸ್ತಿ ಆರ್‌ಎಕ್ಸ್ ಟ್ರಸ್ಟ್ ಅಶ್ರಯದಲ್ಲಿ ಇತ್ತೀಚಿಗೆ ನಡೆದ 9ನೇ ವರ್ಷದ ಆರ್‌ಎಕ್ಸ್ ಲೈಫ್ ಹರ್ ಕ್ಯುಲಸ್ ಸೈಕಲ್ ರ್‍ಯಾಲಿ ಸಂದರ್ಭ ಕನ್ನಡಿಗವರ್ಲ್ಡ್ ಡಾಟ್ ಕಾಮ್ ಪ್ರಾಯೋಜಕತ್ವದಲ್ಲಿ ಹಮ್ಮಿಕೊಳ್ಳಲಾದ ಸೈಕಲ್ ರ್‍ಯಾಲಿ ಫೋಟೋ ಸ್ಫರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ಶುಕ್ರವಾರ ಸಂಜೆ ನಗರದ ಮಹಾರಾಜ ಹೋಟೆಲ್‌ನಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ದುಬೈಯ ಖ್ಯಾತ ಉದ್ಯಮಿ, ಹೆಸರಾಂತ ಗಾಯಕ ಹಾಗೂ ಕನ್ನಡಿಗವರ್ಲ್ಡ್ ಡಾಟ್ ಕಾಮ್ ನ ಮಾಲಕರಾದ ಶ್ರೀ ಹರೀಶ್ ಶೇರಿಗಾರ್ ಅವರು ಪೋಟೊ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದರು.
ಬಳಿಕ ಮಾತನಾಡಿದ ಅವರು, ಸುರಕ್ಷಿತ ರಸ್ತೆ – ಸುರಕ್ಷಿತ ಸವಾರಿ ಎಂಬ ಧೈಯ ವಾಕ್ಯದೊಂದಿಗೆ ರಸ್ತೆ ಸುರಕ್ಷತೆಯ ಜಾಗೃತಿಗಾಗಿ ಸ್ವಸ್ತಿ ಆರ್‌ಎಕ್ಸ್ ಟ್ರಸ್ಟ್ ಅಶ್ರಯದಲ್ಲಿ ಹಮ್ಮಿಕೊಳ್ಳಲಾದ ಈ ಸೈಕಲ್ ರ್‍ಯಾಲಿ ಸೈಕಲ್ ಸವಾರರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಪ್ರೇರೇಪಿಸಲು ಸಹಾಕಾರಿಯಾಗಿದೆ. ವಾಹನ ಸವಾರರ ಜವಾಬ್ದಾರಿಯನ್ನು ನೆನೆಪಿಸುವ ಮತ್ತು ಅವರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವಸ್ತಿ ಆರ್‌ಎಕ್ಸ್ ಟ್ರಸ್ಟ್ ನಡೆಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಉತ್ತಮ ಕೆಲಸಗಳಿಗೆ ಯಾವತ್ತೂ ನನ್ನ ಪ್ರೋತ್ಸಾಹವಿದೆ ಎಂದು ಹೇಳಿದ ಶೇರಿಗಾರ್ ಸೈಕಲ್ ರ್‍ಯಾಲಿಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಪೋಟೊ ಸ್ಪರ್ಧೆಯನ್ನು ಕನ್ನಡಿಗವರ್ಲ್ಡ್ ಡಾಟ್ ಕಾಮ್ ವತಿಯಿಂದ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಸಮೂಹ ಸವಾರಿ (ರೈಡಿಂಗ್ ಟುಗೆದರ್ ) ವಿಷಯದಲ್ಲಿ ಅಯೋಜಿಸಲಾದ ಈ ಸೈಕಲ್ ರ್‍ಯಾಲಿಯ ಪೋಟೊ ಸ್ಪರ್ಧೆಯಲ್ಲಿ ಮೂವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ (ನಗದು) ವನ್ನು ನೀಡಲಾಯಿತು. ಪ್ರಥಮ ಬಹುಮಾನವನ್ನು ನೋಬರ್ಟ್ ವಿನ್ಸೆಂಟ್ ಪ್ಯಾಸ್, ದ್ವಿತೀಯ ಬಹುಮಾನವನ್ನು ಪ್ರಸಾದ್ ಪೈ ಹಾಗೂ ಜಿ.ಕೆ.ಬಾಳಿಗಾ ಅವರು ತೃತೀಯ ಬಹುಮಾನವನ್ನು ಪಡೆದರು.
ಸ್ವಸ್ತಿ ಆರ್.ಎಕ್ಸ್ ಲೈಫ್ ಟ್ರಸ್ಟ್ ನ ಟ್ರಸ್ಠಿಗಳಾದ ಡಾ.ಗಾಯತ್ರಿ ಭಟ್, ವಂದನಾ ನಾಯಕ್, ಸಂಚಾಲಕರಾದ ಗಿರಿಧರ್ ಕಾಮಾತ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುನೀಲ್ ದತ್ತ್ ಪೈ ಸ್ವಾಗತಿಸಿ, ಪ್ರಸ್ತಾವನೆಗೈದರು. ನರೇಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಸಂಗೀತದ ಮಾಯ ಲೋಕ : ಮೋಡಿ ಮಾಡಿದ ಹರೀಶ್ ಶೇರಿಗಾರ್ ಗಾಯನ
ಈಗಾಗಲೇ ದೇಶ ವಿದೇಶಗಳಲ್ಲಿ ತಮ್ಮ ಗಾನ ಮಾಧುರ್ಯದಿಂದ ಪ್ರಸಿದ್ದರಾದ ದುಬಾಯಿ ಉದ್ಯಮಿ, ಹೆಸರಾಂತ ಗಾಯಕ ಶ್ರೀ ಹರೀಶ್ ಶೇರಿಗಾರ್ ಅವರು ತಮ್ಮ ಅದ್ಭುತ ಕಂಠಸಿರಿಯ ಮೂಲಕ ನೆರೆದ ಸಂಗೀತಾ ಪ್ರಿಯರ ಮನರಂಜಿಸಿದರು.
ಕನ್ನಡ ಹಾಗೂ ಹಿಂದಿ ಹಾಡುಗಳನ್ನು ಹಾಡುವ ಮೂಲಕ ಸಂಗೀತಾ ಸುಧೆಯನ್ನೆ ಹರಿಸಿದ ಶ್ರೀ ಹರೀಶ್ ಶೇರಿಗಾರ್ ಅವರು ಗಾನ ವೈಭವದ ಮಾಯ ಲೋಕವನ್ನೇ ಸೃಷ್ಠಿಸುವ ಮೂಲಕ ಸಂಗೀತಾ ಪ್ರೇಮಿಗಳನ್ನು ಮೂಕವಿಸ್ಮಿತರನ್ನಾಗಿಸಿದರು.

ಸುನೀಲ್ ದತ್ತ್ ಪೈ, ಬಾಲಕಿ ಗೌರಿ ದತ್ತ್ ಪೈ ಸೇರಿದಂತೆ ಸ್ವಸ್ತಿ ಆರ್‌ಎಕ್ಸ್ ಟ್ರಸ್ಟ್‌ನ ಸದಸ್ಯರು ತಮ್ಮ ಹಾಡಿನ ಮೂಲಕ ಕಲಾರಸಿಕರಿಗೆ ಮನರಂಜನೆ ನೀಡಿದರು.