
ಮಂಗಳೂರು,ಜ.06: ಭಾರತದ ಜನರು ನೆಮ್ಮದಿಯಿಂದ ಜೀವನ ಸಾಗಿಸಬೇಕಾದರೆ ಹಗಲು ರಾತ್ರಿ, ತೀವ್ರ ಚಳಿ ಹಾಗೂ ಕಠಿಣ ಪರಿಸ್ಥಿತಿಯಲ್ಲೂ ದೇಶದ ಗಡಿಯನ್ನು ರಕ್ಷಣೆ ಮಾಡುವ ವೀರಯೋಧರು ಕಾರಣ ಆದರೂ, ಇಂತಹ ಯೋಧರ ಬಗ್ಗೆ ನಿರ್ಲಕ್ಷ್ಯ ವಹಿಸುವುದು ವಿಪರ್ಯಾಸ ಎಂದು ವಿಶ್ವ ಹಿಂದೂ ಪರಿಷತ್ ನ ಪ್ರಾಂತ್ಯಾಧ್ಯಕ್ಷ ಎಂ.ಬಿ. ಪುರಾಣಿಕ್ ಹೇಳಿದರು.
ಪಟಾಣ್ ಕೋಟ್ ನ ಏರ್ ಬೇಸ್ ಮೇಲೆ ದಾಳಿ ಮಾಡಿದ ಉಗ್ರರನ್ನು ಹತ್ತಿಕ್ಕಿ ಪ್ರಾಣ ತ್ಯಾಗ ಮಾಡಿದ ಹವಿಲ್ದಾರ್ ಕುಲ್ವಂತ್ ಸಿಂಗ್, ಸುಬೇದಾರ್ ಫತೇಹ್ ಸಿಂಗ್, ನಿರಂಜನ್ ಕುಮಾರ್, ಜಗದೀಶ್ ಚಾಂದ್, ಗುರುಸೇವಕ್ ಸಿಂಗ್, ಸಂಜೀವನ್ ಸಿಂಗ್ ರಾಣಾ, ಬುಲ್ವಂತ್ ಸಿಂಗ್ ಅವರ ಭಾವಚಿತ್ರಕ್ಕೆ ಕದ್ರಿ ಪಾರ್ಕ್ ಬಳಿಯಿರುವ ಯುದ್ಧ ಸ್ಮಾರಕದ ಹೊರಭಾಗ ಮಂಗಳವಾರ ಶ್ರದ್ಧಾಂಜಲಿ ಅರ್ಪಿಸಿದರು.

ರಾಷ್ಟ್ರ ರಕ್ಷಣೆಗಾಗಿ ಜೀವ ಅರ್ಪಿಸುವ ಯೋಧರ ಬಗ್ಗೆ ನಮಗೆ ನಿಜವಾದ ಗೌರವವಿರಬೇಕು. ಭಾರತ ಮತ್ತು ಪಾಕಿಸ್ತಾನದ ಭಾಂದವ್ಯ ಬೆಳೆಯಬೇಕೆಂಬ ಉದ್ದೇಶದಿಂದ ಯಾವುದೇ ಮುನ್ಸೂಚನೆ ನೀಡದೆ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು, ಉಗ್ರರಿಗೂ ಅವಮಾನವಾಗಿದ್ದಿರಬೇಕು. ಈ ನಿಟ್ಟಿನಲ್ಲಿ ಭಾರತೀಯ ಸೈನಿಕರ ವೇಷ ಧರಿಸಿ ಪಠಾಣ್ ಕೋಟ್ ನ ವಾಯುನೆಲೆಗೆ ಹೊಕ್ಕಿದ್ದರು. ಇದನ್ನು ಅರಿತ ಸೈನಿಕರು ಅವರೊಂದಿಗೆ ಹೋರಾಡಿ ಒಳಹೊಕ್ಕಿದ್ದ 5 ಉಗ್ರರನ್ನು ಸಾಯಿಸಲು ಸಫಲರಾಗಿದ್ದಾರೆ. ಆದರೆ, ಈ ಕಾರ್ಯಾಚರಣೆಯಲ್ಲಿ ಎನ್.ಎಸ್.ಜಿ ಕಮಾಂಡರ್ ನಿರಂಜನ್ ಅವರ ಜತೆ ಇತರ 7 ಸೈನಿಕರು ವೀರಮರಣವನ್ನಪ್ಪಿ, ದೇಶದ ಜನರನ್ನು ರಕ್ಷಿಸಿದ್ದಾರೆ ಎಂದರು.
ನಿವೃತ್ತ ಯೋಧರಿಗೆ ಏಕ ಶ್ರೇಣಿ ಪಿಂಚಣಿ ಹಾಗೂ ಯೋಧರಿಗೆ ಉತ್ತಮ ವ್ಯವಸ್ಥೆ ಕಲ್ಪಿಸುವ ಯೋಜನೆ ಕೈಗೊಂಡಿರುವ ಕೇಂದ್ರ ಸರಕಾರದ ಕಾರ್ಯ ಶ್ಲಾಘನೀಯ ಎಂದರು.
ವಿಶ್ವ ಹಿಂದೂ ಪರಿಷತ್ ನ ಗೋಪಾಲ್ ಕುತ್ತಾರ್, ಮನೋಹರ ಸುವರ್ಣ, ದಿನೇಶ್ ಕಟೀಲ್, ಪುನೀತ್ ಅತ್ತಾವರ ಮತ್ತಿತರರು ಉಪಸ್ಥಿತರಿದ್ದರು