ಕನ್ನಡ ವಾರ್ತೆಗಳು

ಕಾರು ಸಹಿತ 4 ಲಕ್ಷ ರೂ. ವೌಲ್ಯದ ಚಿನ್ನಾಭರಣ ಎಗರಿಸಿ ಪರಾರಿ.

Pinterest LinkedIn Tumblr

Mumbai- Robbery

ಬಂಟ್ವಾಳ, ಡಿ. 31: ತಾಲೂಕಿನ ಬಿ.ಸಿ.ರೋಡ್ ಸಮೀಪದ ಕೈಕಂಬ ದ್ವಾರದ ಬಳಿ ಇರುವ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನಿಂದ ಹೊರಗೆ ಬರುತ್ತಿದ್ದ ಗುತ್ತಿಗೆದಾರರೊಬ್ಬರನ್ನು ತಡೆದು ನಿಲ್ಲಿಸಿದ ತಂಡವೊಂದು ಅವರ ಕಾರು ಸಹಿತ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಎಗರಿಸಿ ಪರಾರಿಯಾದ ಘಟನೆಯ ಕುರಿತು ಬುಧವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಡುಪಡುಕೋಡಿ ಗ್ರಾಮದ ನರ್ವಲ್ದಡ್ಡ ನಿವಾಸಿ ಗುತ್ತಿಗೆದಾರ ಮೋಹನ ಶೆಟ್ಟಿ ಎಂಬವರು ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ಲಾಕರ್‌ನಲ್ಲಿ ಇರಿಸಿದ್ದ ಚಿನ್ನಾಭರಣವನ್ನು ಮಂಗಳವಾರ ಬೆಳಗ್ಗೆ ಸುಮಾರು 11:30 ಗಂಟೆ ಸುಮಾರಿಗೆ ಲಾಕರ್‌ನಿಂದ ಬಿಡಿಸಿ ರಸ್ತೆ ಬದಿ ಇರಿಸಿದ್ದ ತನ್ನ ಮಾರುತಿ ಸ್ವಿಫ್ಟ್ ಕಾರಿಗೆ ಏರುತ್ತಿದ್ದಂತೆಯೇ ಸ್ಥಳೀಯ ಪೊನ್ನೋಡಿ ನಿವಾಸಿ ಸುಮಿತ್ ಆಳ್ವ ನೇತೃತ್ವದ ನಾಲ್ವರು ದುಷ್ಕರ್ಮಿಗಳ ತಂಡವು ತಳವಾರು ಮತ್ತು ದೊಣ್ಣೆ ಸಹಿತ ಏಕಾಏಕಿ ಮುಗಿ ಬಿದ್ದಿದೆ. ತಂಡವು ಗುತ್ತಿಗೆದಾರರನ್ನು ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಲ್ಲದೆ ಕಾರು ಸಹಿತ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಎಗರಿಸಿ ಪರಾರಿಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಾರಿನಲ್ಲಿ ಎರಡು ಹವಳ ಮತ್ತು ಚಿನ್ನದ ನೆಕ್ಲೆಸ್ ಮತ್ತು ನಾಲ್ಕು ಬಳೆ ಸೇರಿ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ವಿವಿಧ ದಾಖಲೆ ಪತ್ರಗಳಿದ್ದವು ಎಂದು ಅವರು ನಗರ ಠಾಣೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.

ಆರೋಪಿ ಸುಮಿತ್ ಆಳ್ವ ಎಂಬ ವ್ಯಕ್ತಿಗೂ ತನಗೂ ಯಾವುದೇ ರೀತಿಯ ಸಂಬಂಧ ಇಲ್ಲದಿದ್ದರೂ ಈ ಹಿಂದೆ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಇದೇ ವ್ಯಕ್ತಿ ತನ್ನನ್ನು ಕೊಲ್ಲಲು ಯತ್ನಿಸಿರುವ ಬಗ್ಗೆ ಈ ಹಿಂದೆ ಪ್ರಕರಣ ದಾಖಲಾಗಿದೆ. ಪೊಲೀಸರು ಬುಧವಾರ ರಾತ್ರಿ ಸ್ಥಳ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದ್ದಾರೆ.

Write A Comment