ಕುಂದಾಪುರ: ಜನವರಿ 2ರಂದು ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದ ಸಲುವಾಗಿ ಬಂಟಿಂಗ್ಸ್ ಹಾಗೂ ಕೇಸರಿ ಪತಾಕೆ ಕಟ್ಟುತ್ತಿದ್ದ ಸಂದರ್ಭ ಹೈ ಟೆನ್ಷನ್ ತಂತಿಯ ವಿದ್ಯುತ್ ಶಾಕ್ ತಗುಲಿ ಇಬ್ಬರು ಯುವಕರು ಮೃತಪಟ್ಟ ದಾರುಣ ಘಟನೆ ತಲ್ಲೂರಿನಲ್ಲಿ ನಡೆದಿದೆ.
ಮೃತ ಯುವಕರನ್ನು ಮನೋಜ್ ದೇವಾಡಿಗ (29)ಸುನಿಲ್ ಮೊಗವೀರ (22) ಎಂದು ಗುರುತಿಸಲಾಗಿದೆ.


ಆಗಿದ್ದಾದರೂ ಏನು?: ತಲ್ಲೂರಿನ ಶಾಲಾ ಮೈದಾನದಲ್ಲಿ ಜ.2 ರಂದು ಕರಾವಳಿ ಬಂಟರ ಬಳಗದ ಸಾರಥ್ಯದಲ್ಲಿ ಸಾರ್ವಜನಿಕ ಶ್ರೀನಿವಾಸ ಕಲ್ಯಾಣ ನಡೆಯುತ್ತಿತ್ತು. ಈ ಕಾರ್ಯಕ್ರಮಕ್ಕಾಗಿ ತಲ್ಲೂರನ್ನು ಸಂಪೂರ್ಣ ಕೇಸರಿ ಮಯವಾಗಿಸುವ ಬಹುತೇಕ ಕೆಲಸಗಳು ವಾರಗಳಿಂದಲೂ ನಡೇಯುತ್ತಿದ್ದವು. ತಲ್ಲೂರು ಮುಖ್ಯ ಪೇಟೆಯಲಿ ಬ್ರಹತ್ ಮುಖಮಂಟಪ ಹಾಗೂ ಬ್ಯಾನರ್ ಬಂಟಿಂಗ್ಸ್ ರಾರಾಜಿಸುತ್ತಿದ್ದವು. ಶ್ರೀನಿವಾಸ ಕಲ್ಯಾಣೋತ್ಸವ ನಡ್ಯುವ ಪ್ರೌಢಾ ಶಾಲೆ ಮೈದಾನ ಸಮೀಪ ಸಬ್ಲಾಡಿಗೆ ತೆರಳುವ ರಸ್ತೆಯ ಇಕ್ಕೆಲಗಳಿಗೆ ಕೇಸರಿ ಪತಾಕೆ ಅಳವಡಿಸುವ ಕಾರ್ಯವನ್ನು ಮಂಗಳವಾರ ರಾತ್ರಿ ಯುವಕರು ಮಾಡುತ್ತಿದ್ದರು. ಇದೇ ಸಂದರ್ಭ 10.30ರ ಸುಮಾರಿಗೆ ಬಂಟಿಂಗ್ಗಳನ್ನು ಕಟ್ಟಲು ಉಪಯೋಗಿಸುವ ಅಲ್ಯೂಮಿನಿಯಂ ತಂತಿಯನ್ನು ಮರದ ಮೇಲೆ ಹತ್ತಿ ಮಹೇಶ್ ಎಂಬಾತ ಮೇಲ್ಮುಖವಾಗಿ ಎಸೆದಿದ್ದು ಅದು ಹೈಟೆನಷನ್ ವಯರಿನ ಮೇಲ್ಭಾಗದಿಂದ ಹಾದು ಹೋಗಿ ಬಿದ್ದಿತ್ತು. ಕತ್ತಲಿದ್ದ ಕಾರಣ ಇದ್ಯಾರಿಗೂ ಕಾಣಿಸಿರಲಿಲ್ಲ. ಇದೇ ಸಂದರ್ಭ ಇನ್ನೊಂದು ತುದಿಯನ್ನು ಸುನೀಲ್ ಮೊಗವೀರ ಎತ್ತಿಕೊಂಡಿದ್ದಾನೆ, ವಿದ್ಯುತ್ ತಂತಿಯಲ್ಲಿ ಪ್ರವಹಿಸುತ್ತಿದ್ದ ವಿದ್ಯುತ್ ಶಾಕ್ ತಗಲಿದ್ದು ಇವರನ್ನು ಬಿಡಿಸಲು ಬಂದ ಮನೋಜ್ ದೇವಾಡಿಗ ಕೂಡ ವಿದ್ಯುತ್ ಶಾಕ್ ಪರಿಣಾಮ ಸಾವನ್ನಪ್ಪಿದ್ದಾರೆ. ಮುಖ್ಯ ವೇದಿಕೆಯ ಹಿಂಭಾಗವೇ ಈ ದುರ್ಘಟನೆ ಸಂಭವಿಸಿದೆ.

(ಸುನಿಲ್ ಮೊಗವೀರ)

(ಮನೋಜ್ ದೇವಾಡಿಗ)

ಘಟನೆ ಬಳಿಕ ಇಬ್ಬರನ್ನು ಆಸ್ಪತ್ರೆಗೆ ಸಾಗಿಸುವ ಕೆಲಸ ಮಾಡಲಾಯಿತಾದರೂ ಯಾವುದೇ ಪ್ರಯೋಜನವೂ ಆಗಿಲ್ಲ. ಯುವಕರ ಮೈ ಮೇಲೆ ವಿದ್ಯುತ್ ಶಾಕ್ನಿಂದ ಹಲವಾರು ಸುಟ್ಟ ಗಾಯಗಳಾಗಿವೆ. ಘಟನೆ ನಡೆದ ಕೂಗಳತೆ ದೂರದಲ್ಲಿಯೇ ಮೆಸ್ಕಾಂ ಕಛೇರಿ ಮತ್ತು ವಿದ್ಯುತ್ ವಿತರಣಾ ಕೇಂದ್ರವೂ ಇತ್ತು. ಘಟನೆಯಲ್ಲಿ ಮಹೇಶ್ ಎಂಬಾತನಿಗೂ ಸಣ್ಣಪುಟ್ಟ ಗಾಯಗಳಾಗಿದೆ.
ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಕುಂದಾಪುರ ವ್ರತ್ತನಿರೀಕ್ಶಕ ದಿವಾಕರ್ ಪಿ.ಎಂ. ಕುಂದಾಪುರ ಸಬ್ ಇನ್ಸ್ಪೆಕ್ಟರ್ ನಾಸಿರ್ ಹುಸೇನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ.
ಈ ಸಾವಿಗ್ಯಾರು ಹೊಣೆ..?:
ಇಬ್ಬರು ಬಡಕುಟುಂಬದವರಾಗಿದ್ದು ಮನೋಜ್ ತಂಪು ಪಾನೀಯ ಫ್ಯಾಕ್ಟರಿಯಲ್ಲಿ ನೌಕರಿ ಮಾಡಿಕೊಂಡಿದ್ದರೇ, ಸುನೀಲ್ ಮೊಗವೀರ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಎ. ಪದವಿ ವಿದ್ಯಾರ್ಥಿ. ಕಾಲೇಜಿನ ಪರೀಕ್ಷೆ ಮುಗಿದ ಬಳಿಕ ಡಿ.7 ರಿಂದ ಜ.7ರವರೆಗೂ ರಜೆಯಿದ್ದ ಕಾರಣ ಮನೆಯಲ್ಲಿದ್ದ. ಇಬ್ಬರು ಯುವಕರು ಕಷ್ಟಜೀವಿಗಳಾಗಿದ್ದು ಮನೆಯ ಜವಬ್ದಾರಿಯನ್ನು ನಿರ್ವಹಿಸುತ್ತಿದ್ದರು. ಮನೋಜ್ ಕಾಲೇಜಿಗೆ ಹೋಗುತ್ತಾ ರಾತ್ರಿ ಹಾಗೂ ರಜೆ ಸಮಯದಲ್ಲಿ ಕ್ಯಾಟರಿಂಗ್ ಮೊದಲಾದ ಕೆಲಸ ಮಾಡುತ್ತಿದ್ದ. ಇವರಿಬ್ಬರೂ ಗೆಳೆಯರಾಗಿದ್ದು ಸಂಸ್ಥೆಯೊಂದರಲ್ಲಿ ಲೋನ್ ತೆಗೆದು ತಂಪುಪಾನೀಯ ತಯಾರಿಸಿ ಮಾರಟ ಮಾಡುವ ಸ್ವಂತ ಉದ್ಯೋಗ ಮಾಡುವ ಬಗ್ಗೆಯೂ ಫ್ಲ್ಯಾನ್ ಮಾಡಿಕೊಂಡಿದ್ದರೆನ್ನಲಾಗಿದೆ. ಇದೀಗಾ ಇಬ್ಬರ ಸಾವು ಕುಟುಂಬಿಕರಲ್ಲಿ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇಬ್ಬರ ಸಾವಿಗೆ ಪರಿಹಾರ ನೀಡುವರ್ಯಾರು ಎಂಬ ಮಾತುಗಳು ಈಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಮುಂಜಾಗ್ರತ ಕ್ರಮ ಅನುಸರಿಸದಿರುವ ಕಲ್ಯಾಣೋತ್ಸವ ವ್ಯವಸ್ಥಾಪಕರ ಬೇಜವಬ್ದಾರಿಗೆ ಸ್ಥಳೀಯ ನಾಗರೀಕರು ಆಕ್ರೊಷ ವ್ಯಕ್ತಪಡಿಸಿದ್ದಾರೆ.
ಬ್ಯಾನರ್-ಬಂಟಿಂಗ್ಸ್ ತಂದ ಆಪತ್ತು:
ತಲ್ಲೂರು ಭಾಗದಲ್ಲಿ ಬ್ಯಾನರ್ ಹಾಗೂ ಬಂಟಿಂಗ್ಸ್ ವಿಚಾರದಲ್ಲಿ ಈ ಹಿಂದೆ ಹಲವು ಗೊಂದಲಗಳು ಏರ್ಪಟ್ಟಿದ್ದವು. ಈ ಸಲುವಾಗಿ ಬಾವುಟ ಪ್ರಿಯರು ಪಂಚಾಯತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ವಿದ್ಯಾಮಾನಗಳು ನಡೆದಿದ್ದವು. ಒಂದು ಹಂತದಲ್ಲಿ ತಲ್ಲೂರನ್ನು ಕೇಸರಿಮಯ ಮಾಡಿಯೇ ಮಾಡುತ್ತೇವೆಂಬ ಹಪಾಹಪಿಗೆ ಬಿದ್ದವರು ಕೆಲವರಿದ್ದರು. ಇದಕ್ಕೆ ಪೂರಕವಾಗಿ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ವೇದಿಕೆಯಾಗಿತ್ತು. ಈ ನೆಪದಲ್ಲಿ ಕೆಸರಿಮಯ ಮಾಡುವ ಹಂಬಲವೂ ಕೆಲವರಲ್ಲಿತ್ತು ಎನ್ನುವ ಆರೋಪಗಳು ಕೇಳಿಬರುತ್ತಿದೆ. ರಾತ್ರಿ ವೇಳೆ ಬಂಟಿಂಗ್ಸ್ ಅಳವಡಿಕೆ ಮಾಡದಿರಲು ಈ ಹಿಂದೆಯೇ ಪೊಲೀಸ್ ಇಲಾಖೆಯೂ ಎಚ್ಚರಿಸಿದ್ದರೂ ಕೂಡ ಅದನ್ನು ಮೀರಿ ರಾತ್ರಿ ಹೊತ್ತು ಬ್ಯಾನರ್ ಬಂಟಿಂಗ್ಸ್ ಅಳವಡಿಕೆ ಕೆಲಸಕ್ಕೆ ಕೈಹಾಕಿದ್ದರು. ಮೂಂಜಾಗ್ರತಾ ಕ್ರಮವಿಲ್ಲದೇ ಈ ದುರಂತ ಘಟನೆ ನಡೆದುಹೋಗಿದೆ.

ಆಯೋಜನೆಯಲ್ಲಿಯೇ ಎಡವಟ್ಟು?:
ಇಷ್ಟೆಲ್ಲಾ ಅವಾಂತರಗಳಿಗೆ ಕ್ರಾರ್ಯಕ್ರಮ ಆಯೋಜನೆಯ ಬೇಜವಬ್ದಾರಿತನವೂ ಕಾರಣ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಕಾರ್ಯಕ್ರಮದ ಸಲುವಾಗಿ ತಾತ್ಕಾಲಿಕ ದಾರಿ ದೀಪಗಳನ್ನು ಕಬ್ಬಿಣದ ಪೈಪ್ ಮೂಲಕ ಅಳವಡಿಸಿದ್ದು ಇದರಿಂದ ವಿದ್ಯುತ್ ಶಾಕ್ ತಗಲುವ ಸಂಭವಗಳು ಜಾಸ್ಥಿಯಿದೆ, ಇದು ಅವೈಜ್ನಾನಿಕ ಎಂದು ಮೆಸ್ಕಾಂ ತಿಳಿಸಿದೆ. ಅಲ್ಲದೇ ಮುಖ್ಯ ವೇದಿಕೆ ಸಿದ್ದಪಡಿಸುವ ಸಂದರ್ಭ ಕಬ್ಬಿಣದ ಬ್ರಹತ್ ಸಲಾಕೆಯನ್ನು ಊರುಗೋಲಾಗಿ ವಿದ್ಯುತ್ ಕಂಬಕ್ಕೆ ಜೋಡಿಸಿದ್ದು ಇದು ಕೂಡ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.



ತಲ್ಲೂರು ಬಂದ್:
ಊರಿನ ಯುವಕರ ದುರ್ಮರಣದಿಂದಾಗಿ ತಲ್ಲೂರು ಪೇಟೆಯೇ ಶೋಖಃತಪ್ತವಾಗಿದೆ. ಬುಧವಾರ ಬೆಳಿಗ್ಗೆನಿಂದಲೇ ಅಂಗಡಿಮುಂಗಟ್ಟುಗಳನ್ನು ಸ್ವಯಂಪ್ರೇರಿತರಾಗಿ ಮುಚ್ಚುವ ಮೂಲಕ ತಲ್ಲೂರು ಜನರು ಸಂತಾಪ ಸೂಚಿಸಿದ್ದಾರೆ. ಅಲ್ಲದೇ ತಲ್ಲೂರು ರಿಕ್ಷಾ ಚಾಲಕರು ಬಂದ್ ನಡೆಸಿದ್ದಾರೆ. ತಲ್ಲೂರು ಶಾಲೆಗಳಿಗೆ ರಜೆಯನ್ನು ನೀಡಲಾಗಿತ್ತು.
ವರದಿ- ಯೋಗೀಶ್ ಕುಂಭಾಸಿ