
ಮಂಗಳೂರು, ಡಿ.25: ಜನವರಿ 3,4,5,6 ಮತ್ತು 7ರಂದು ಬೆಂಗಳೂರಿನ ಜಿಗಣಿಯಲ್ಲಿ ವಿಶ್ವಮಟ್ಟದ ಆಯುಷ್ ಮೇಳ ನಡೆಯಲಿದೆ. ಈ ಮೇಳದಲ್ಲಿ ಮಾನಸಿಕ ಒತ್ತಡ, ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್, ಮಧುಮೇಹ ಹಾಗೂ ಹೈಪರ್ ಟೆನ್ಶನ್ ಕಾಯಿಲೆಗಳಿಗೆ ಸಂಬಂಧಿಸಿದಂತೆ ವಿಚಾರಗೋಷ್ಠಿ ನಡೆಯಲಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಈ ಸಮಾವೇಶದಲ್ಲಿ ವಿಶ್ವದ ಸುಮಾರು 20 ದೇಶಗಳಿಂದ 10 ಸಾವಿರ ಮಂದಿ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಗ್ರಾಪಂ ಚುನಾವಣೆಯಲ್ಲಿ ಪ್ರತಾಪ್ ಚಂದ್ರ ಶೆಟ್ಟಿ ಪ್ರಥಮ ಪ್ರಾಶಸ್ತ್ಯದ ಮತಗಳೊಂದಿಗೆ ಜಯಗಳಿಸಲಿದ್ದಾರೆ ಎಂದವರು ವಿಶ್ವಾಸ ವ್ಯಕ್ತ ಪಡಿಸಿದರು. ಸ್ಥಳೀಯಾಡಳಿತ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಜಯಗಳಿಸಲಿದೆ. ಪಕ್ಷದಲ್ಲಿ ಯಾರನ್ನೂ ಕಡೆಗಣಿಸಲಾಗಿಲ್ಲ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದ ಸಂದರ್ಭ ಬಂಡಾಯ ಅಭ್ಯರ್ಥಿಗಳು ತಾಳ್ಮೆ ವಹಿಸಬೇಕಾಗಿತ್ತು. ಪಕ್ಷದ ವತಿಯಿಂದ ಅಭ್ಯರ್ಥಿಗಳನ್ನು ಕಣದಲ್ಲಿ ಇಳಿಸಿದ ಬಳಿಕ ಉಳಿದ ಅಭ್ಯರ್ಥಿ ಗಳನ್ನು ಬೆಂಬಲಿಸುವ ಪ್ರಶ್ನೆ ಇಲ್ಲ. ಈ ನಿಟ್ಟಿನಲ್ಲಿ ಈ ಬಾರಿ ಕಣದಲ್ಲಿರುವ ಪ್ರತಾಪ್ಚಂದ್ರ ಶೆಟ್ಟಿ ಜಯಗಳಿಸಲಿದ್ದಾರೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.
ಮೀಲಾದುನ್ನಬಿ, ಕ್ರಿಸ್ಮಸ್ ಶುಭಾಶಯಗಳು
ಪ್ರವಾದಿಯವರ ಸಂದೇಶದಂತೆ ನಾಡಿನಲ್ಲಿ ಸೌಹಾರ್ದ ನೆಲೆಸಲು ಸರ್ವರೂ ಪ್ರಯತ್ನಿಸಲಿ. ಅದೇ ರೀತಿ ಶಾಂತಿ ಸಂದೇಶ ಸಾರುವ ಕ್ರಿಸ್ಮಸ್ ಆಚರಣೆಯೂ ನಾಡಿನ ಜನತೆಗೆ ಸುಖ ಸಂತೋಷ ವನ್ನು ನೀಡಲಿ ಎಂದು ಸಚಿವ ಖಾದರ್ಮೀಲಾದುನ್ನಬಿ ಹಾಗೂ ಕ್ರಿಸ್ಮಸ್ ಸಂದೇಶ ನೀಡಿದರು.