
ಬೆಳ್ತಂಗಡಿ,ಡಿ.24: ಧರ್ಮಸ್ಥಳದ ದೇವರಗುಂಡಿ ಎಂಬಲ್ಲಿ ಆಟಿಕೆಯ ಗೊಂಬೆ ಸ್ಪೋಟಗೊಂಡು ಬಾಲಕನ ಕಣ್ಣು ಹಾಗೂ ಕೈಗೆ ಗಂಭೀರವಾಗಿ ಗಾಯವಾದ ಘಟನೆ ಬುಧವಾರ ನಡೆದಿದೆ. ಗಾಯಗೊಂಡ ಬಾಲಕ ಇಲ್ಲಿನ ನಿವಾಸಿ ಗಿರಿಯಪ್ಪ ಎಂಬವರ ಮಗ ಗುರುಕಿರಣ್(9) ಎಂದು ಗುರುತಿಸಲಾಗಿದೆ.
ಸಂತೆಯಿಂದ ಖರೀದಿಸಿದ್ದ ಆಟಿಕೆಯನ್ನು ಮನೆಯಲ್ಲಿ ಉಪಯೋಗಿಸುತ್ತಿದ್ದಾಗ ಸ್ಫೋಟಗೊಂಡಿದೆ. ಸ್ಫೋಟಕ್ಕೆ ರಭಸಕ್ಕೆ ಬಾಲಕನ ಎಡ ಕೈಯ ಬೆರಳು ಹಾಗೂ ಎಡ ಕಣ್ಣಿಗೆ ಗಂಭೀರ ಗಾಯವಾಗಿದೆ. ಈತನನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂತೆಗಳಲ್ಲಿ ಮಾರಾಟ ಮಾಡಲಾಗುತ್ತಿರುವ ಲೋ ಕ್ವಾಲಿಟಿಯ ಆಟಿಕೆಗಳಿಂದ ಇಂತಹ ಅನಾಹುತಗಳು ಆಗುತ್ತಿದೆ. ಮೊಬೈಲ್ ನಂತಹ ಗೊಂಬೆಯನ್ನು ಗುರುಕಿರಣ್ ಖರೀಸಿದ್ದ. ಅದರಲ್ಲಿ ಹಲವಾರು ರಿಂಗ್‌ಟೋನ್‌ಗಳ ಶಬ್ದಗಳು ಅದರಿಂದ ಬರುತ್ತಿತ್ತು. ಬ್ಯಾಟರಿಯೇ ಸ್ಫೋಟಗೊಂಡಿರಬೇಕೆಂದು ಅಂದಾಜಿಸಲಾಗಿದೆ. ಸ್ಫೋಟದ ತೀವ್ರತೆಗೆ ಅದರ ಚೂರುಗಳು ಬಾಲಕನ ಮೈಮೇಲೆ ಚುಚ್ಚಿ ಗಾಯಗಳಾಗಿವೆ. ಇಂತಹ ಘಟನೆಗಳಿಂದ ಚಿಕ್ಕ ಮಕ್ಕಳ ಕೈಗೆ ಎಲೆಕ್ಟ್ರಾನಿಕ್ಸ್ ಆಟಿಕೆಗಳನ್ನು ನೀಡುವಾಗ ಪೋಷಕರು ಜಾಗ್ರತೆ ವಹಿಸಬೇಕಾಗುತ್ತದೆ.