
ಮಂಗಳೂರು, ಡಿ.24: ನಗರದ ವೆಲೆನ್ಸಿಯಾ ಬಳಿ ರಸ್ತೆ ವಿಸ್ತರಣೆಗಾಗಿ ರಸ್ತೆಯ ಇಕ್ಕೆಲಗಳಲ್ಲಿದ್ದ ಬೃಹತ್ ಸಾಲು ಮರಗಳನ್ನು ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಧರೆಗುರುಳಿಸಲಾಗಿದೆ. ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಿಂದ ನಂದಿಗುಡ್ಡೆಯವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ಸಾಲಾಗಿ ಬೃಹದಾಕಾರಾವಾಗಿ ಬೆಳೆದು ಹಸಿರು ಹಾಗೂ ತಂಪಿನಿಂದ ಆಕರ್ಷಣೀಯವಾಗಿದ್ದ 50ಕ್ಕೂ ಅಧಿಕ ಮರಗಳ ಪೈಕಿ ಸುಮಾರು 15ಕ್ಕೂ ಅಧಿಕ ಮರಗಳನ್ನು ರಾತ್ರೋರಾತ್ರಿ ಕಡಿದು ಉರುಳಿಸಲಾಗಿದೆ.
ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಸೋಮವಾರ ಹಾಗೂ ಮಂಗಳವಾರ ರಾತ್ರಿ ಈ ಕಾರ್ಯ ನಡೆದಿದೆ. ಈ ನಡುವೆ, ರಸ್ತೆಯನ್ನು ಚತುಷ್ಪಥವಾಗಿಸಿ ಮಾದರಿ ರಸ್ತೆಯನ್ನಾಗಿಸುವ ಭರವಸೆಯನ್ನು ಸ್ಥಳೀಯರಿಗೆ ನೀಡಲಾಗಿದೆ.
‘‘ವೆಲೆನ್ಸಿಯಾದ ಈ ರಸ್ತೆಯಲ್ಲಿ ಸುಮಾರು 20ರಿಂದ 40 ವರ್ಷಗಳಷ್ಟು ಹಳೆಯದಾದ 60ಕ್ಕೂ ಅಧಿಕ ಮರಗಳಿದ್ದವು. ಇದೀಗ ಅವು ಗಳನ್ನು ಕಡಿದು ರಸ್ತೆ ವಿಸ್ತರಣೆಯ ಬಳಿಕ ಇದೇ ರೀತಿ ಮತ್ತೆ ಗಿಡಗಳನ್ನು ನೆಟ್ಟು ಬೆಳೆಸಲಾಗುವುದು. ಇದಕ್ಕೆ ಮನಪಾ ಜಾಗವನ್ನೂ ನೀಡಲಿದ್ದು, 200ಕ್ಕೂ ಅಧಿಕ ಸಸಿಗಳನ್ನು ಜುಲೈನಿಂದ ನೆಡ ಲಾಗುವುದು’’ ಎಂದು ಅರಣ್ಯ ಇಲಾಖೆಯ ಅಧಿ ಕಾರಿಗಳು ತಿಳಿಸಿದರು.
ಸುಮಾರು ಐದು ವರ್ಷಗಳ ಹಿಂದೆ ಮನಪಾ ಈ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾ ಗಿಸುವ ಯೋಜನೆ ಹಾಕಿತ್ತು. ಈ ವೇಳೆ ರಸ್ತೆ ವಿಸ್ತರಣೆಗಾಗಿ ಮರಗಳನ್ನು ಕಡಿಯಲು ಮನಪಾ ಮುಂದಾದಾಗ ಸ್ಥಳೀಯರನ್ನು ಒಳಗೊಂ ಡಂತೆ ಪರಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸಿ ‘ಅಪ್ಪಿಕೋ’ ಚಳವಳಿಯ ಮೂಲಕ ಗಮನ ಸೆಳೆದಿದ್ದರು.
ಮರಗಳಿಗೆ ರಿಬ್ಬನ್ ಕಟ್ಟಿ ಅವುಗಳನ್ನು ರಕ್ಷಿಸುವ ವಾಗ್ದಾನವನ್ನೂ ಮಾಡಿ ದ್ದರು. ಮರಗಳನ್ನು ಕಡಿಯುವುದರ ವಿರುದ್ಧ ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದರು. ರಸ್ತೆ ಈಗಾಗಲೇ ಕಾಂಕ್ರಿಟೀಕರಣಗೊಂಡು ಉತ್ತಮವಾಗಿದೆ. ರಸ್ತೆಗೆ ಹೊಂದಿಕೊಂಡಿರುವ ಬೃಹತ್ ಮರಗಳಿಂದ ಯಾರಿಗೂ ತೊಂದರೆ ಯಿಲ್ಲ. ಹಾಗಿರುವಾಗ ಚತುಷ್ಪಥ ರಸ್ತೆ ಅಗತ್ಯ ವಿದೆಯೇ? ಬೇಕು ಎಂದಾದಲ್ಲಿ ಇಷ್ಟೊಂದು ವರ್ಷಗಳಿಂದ ನೆರಳಿನಾಶ್ರಯ ನೀಡುತ್ತಿದ್ದ ಬೃಹತ್ ಮರಗಳನ್ನು ಕಡಿಯಬೇಕಿತ್ತೇ ಎಂಬ ಪ್ರಶ್ನೆಗಳು ಕೂಡಾ ಸಾರ್ವಜನಿಕರಿಂದ ಕೇಳಿ ಬರುತ್ತಿವೆ.
ಭರವಸೆ ಈಡೇರದಿದ್ದಲ್ಲಿ ಹೋರಾಟ
‘‘ಈ ಹಿಂದೆ ಈ ರಸ್ತೆಯ ಮರಗಳನ್ನು ಕಡಿಯಲು ಮುಂದಾದಾಗ ಸ್ಥಳೀಯರ ಜತೆ ಮಂಗಳೂರು ಸಿಟಿಝನ್ ಫೋರಂ ಹಾಗೂ ಇತರ ಸಂಘಟನೆಗಳು ಸೇರಿ ಪ್ರತಿಭಟಿಸಿದ್ದವು. ಒಂದು ವರ್ಷದ ಹಿಂದೆ ಈ ಬಗ್ಗೆ ನ್ಯಾಯಾಲಯಕ್ಕೂ ಮನವಿ ಮಾಡಲಾಗಿತ್ತು. ಆ ಸಂದರ್ಭ ರಸ್ತೆ ಅಭಿವೃದ್ಧಿ ಮಾಡುವುದಿಲ್ಲ ಎಂದು ಮನಪಾ ತಿಳಿಸುವುದರೊಂದಿಗೆ ಪ್ರಕರಣ ಅಲ್ಲಿಗೆ ಮುಗಿದಿತ್ತು.
ಈ ರಸ್ತೆಯನ್ನು ಸುಂದರಗೊಳಿಸುವ, ಮಾದರಿಯನ್ನಾಗಿಸುವ ಬಗ್ಗೆ ತಾಂತ್ರಿಕ ಸಲಹಾ ಸಮಿತಿಯನ್ನೂ ರಚಿಸಿ ಪ್ರಸ್ತಾಪವನ್ನು ಜಿಲ್ಲಾಧಿಕಾರಿ ಮತ್ತು ಮನಪಾ ಆಯುಕ್ತರಿಗೆ ವಿವರಿಸಿ ಒಪ್ಪಿಗೆಯನ್ನೂ ಪಡೆಯಲಾಗಿತ್ತು. ಈ ಬಗ್ಗೆ ಇತ್ತೀಚೆಗೆ ಮತ್ತೆ ಶಾಸಕರ ನೇತೃತ್ವದಲ್ಲಿ ಸ್ಥಳೀಯರನ್ನು ಸೇರಿಸಿ ಸಭೆ ನಡೆಸಿ ಮಾದರಿ ರಸ್ತೆಯನ್ನಾಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಭರವಸೆ ಈಡೇರದಿದ್ದಲ್ಲಿ ಸಾರ್ವನಿಕರು ಮತ್ತೆ ಹೋರಾಟಕ್ಕಿಳಿಯುವುದು ಅನಿವಾರ್ಯವಾಗಲಿದೆ’’ ಎಂದು ಮಂಗಳೂರು ಸಿಟಿಝನ್ ಫೋರಂನ ವಿದ್ಯಾ ದಿನಕರ್ ತಿಳಿಸಿದ್ದಾರೆ.
ನಮ್ಮ ಮಾದರಿ ರಸ್ತೆಯ ಕುರಿತಂತೆ ಈಗಾಗಲೇ ಹಲವು ಬಾರಿ ವೀಡಿಯೊ ಪ್ರೆಸೆಂಟೇಶನ್ ನೀಡಲಾಗಿದೆ. ಅದಕ್ಕಾಗಿ ಕೆಲವೊಂದು ಮರಗಳನ್ನು ಕಡಿಯುವುದು, ಮಳೆ ನೀರು ಹರಿದು ಹೋಗುವ ಹಾಗೂ ಇಂಗಿಸುವ ವ್ಯವಸ್ಥೆ, ಸಮರ್ಪಕ ಫುಟ್‌ಪಾತ್, ಬಸ್ ಬೇಗಳು, ಬಸ್ ನಿಲ್ದಾಣ, ಶೌಚಾಲಯ, ಈಗಿರುವ ಸಣ್ಣ ಪುಟ್ಟ ಗೂಡಂಗಡಿದಾರರಿಗೆ ಗೌರವಯುತ ಉದ್ಯಮಕ್ಕೆ ವ್ಯವಸ್ಥೆ, ಸ್ಪೆಷಲ್ ರಿಕ್ಷಾ ಪಾರ್ಕ್, ಹೊಸತಾಗಿ ನೆಡಲಾಗುವ ಮರದಡಿಗಳಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಸೇರಿದಂತೆ ಮಾದರಿ ರಸ್ತೆ ನಮ್ಮ ಆಶಯ ಎಂದು ಸ್ಥಳೀಯರಾದ ಅಶೋಕ್ ಮೆಂಡೋನ್ಸಾ ತಿಳಿಸಿದ್ದಾರೆ.
ಈ ಹಿಂದೆ ವೆಲೆನ್ಸಿಯಾದಲ್ಲಿರುವ ಆ ಮರಗಳನ್ನು ಉಳಿಸಲು ನಮ್ಮಿಂದಾದಷ್ಟು ಹೋರಾಟ ಮಾಡಿದ್ದೇವೆ. ಕೋರ್ಟ್‌ಗೆ ಹೋಗಿ ಸ್ಟೇ ಮಾಡಿಸಿದ್ದೇವೆ. ಆ ಬಳಿಕ ನನ್ನನ್ನು ಆಡಳಿತ ವಿರೋಧಿ ಎಂಬ ಪ್ರಚಾರ ಮಾಡಲಾಯಿತು. ಈಗಲೂ ನನ್ನ ನಿಲುವಿನಲ್ಲಿ ಬದಲಾವಣೆಯಿಲ್ಲ. ಆ ಮರಗಳನ್ನು ಉಳಿಸಲೇಬೇಕಾಗಿದೆ. ಜನರಿಗೆ ಈ ಪರಿಸರ ಬೇಕಾದರೆ ಹೋರಾಟ ಮಾಡಬೇಕು. ಹೋರಾಟ ಮಾಡುವವರ ಜತೆ ನಾನಿದ್ದೇನೆ ಎಂದು ಅಪ್ಪಿಕೋ ಚಳವಳಿಯ ಪ್ರಮುಖ ಎರಿಕ್ ಒಝಾರಿಯೊ ತಿಳಿಸಿದ್ದಾರೆ.
ವರದಿ ಕೃಪೆ : ವಾಭಾ