
ಮಂಗಳೂರು, ಡಿ.24: ರೋಟರಿ ಕ್ಲಬ್ ಮಂಗಳೂರು ವಲಯ 4ರ ನೇತೃತ್ವದಲ್ಲಿ ಟೀಮ್ ಮಂಗಳೂರು ಸಹಯೋಗದಲ್ಲಿ ಜ,16 ಮತ್ತು 17ರಂದು ಪಣಂಬೂರು ಕಡಲ ಕಿನಾರೆಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಆಯೋಜಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಉತ್ಸವದ ಮುಖ್ಯ ಸಂಚಾಲಕ ರೋಟರಿ ಮಂಗಳೂರು ಅಧ್ಯಕ್ಷ ಇಲಿಯಾಸ್ ಸಾಂಟಿಸ್ ಅವರು, ವಿಶ್ವದ 12 ದೇಶಗಳ ( ಆಸ್ಟ್ರೇಲಿಯಾ, ನೆದರ್‌ಲ್ಯಾಂಡ್, ಯುಕೆ, ಇಟಲಿ, ಟರ್ಕಿ, ಫ್ರಾನ್ಸ್, ನೈಜೀರಿಯಾ, ಕಾಂಬೋಡಿಯಾ, ಸಿಂಗಾಪುರ, ಕುವೈತ್, ಜರ್ಮನಿ, ಬೆಲ್ಜಿಯಂ) 23 ಗಾಳಿಪಟ ಹಾರಾಟಗಾರರು ಈಗಾಗಲೇ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದನ್ನು ಖಾತರಿ ಪಡಿಸಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯ ವಿದೇಶಿ ಗಾಳಿಪಟ ಹಾರಾಟಗಾರರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಗಾಳಿಪಟ ತಯಾರಿ ಬಗ್ಗೆ ಮಕ್ಕಳಿಗೆ ಕಾರ್ಯಾಗಾರ :
ಉತ್ಸವದಲ್ಲಿ ಮಕ್ಕಳಿಗೆ ಗಾಳಿಪಟ ತಯಾರಿ ಬಗ್ಗೆ ಕಾರ್ಯಾಗಾರವನ್ನು ಆಯೋಜಿಸಲಾಗುತ್ತಿದೆ. ಹಾಗೂ ಫೋಟೋಗ್ರಫಿಗೂ ಅವಕಾಶ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರೋಟರಿ ವಲಯ 4ರ ಅಸಿಸ್ಟೆಂಟ್ ಗವರ್ನರ್ ರಾಮಕೃಷ್ಣ ಕಾಮತ್, ಯತೀಶ್ ಬೈಕಂಪಾಡಿ, ರಾಜ್‌ಗೋಪಾಲ್ ರೈ, ಟೀಮ್ ಮಂಗಳೂರು ತಂಡದ ಸರ್ವೇಶ್ ರಾವ್ ಉಪಸ್ಥಿತರಿದ್ದರು.